Doctors
Doctors 
ಸುದ್ದಿಗಳು

ಪಿಜಿ ಕೋರ್ಸ್‌ಗಳಿಗೆ ರಾಷ್ಟ್ರೀಯ ನಿರ್ಗಮನ ಪರೀಕ್ಷೆಯಿಂದ ವಿನಾಯಿತಿ: ಸುಪ್ರೀಂ ಮೊರೆ ಹೋದ ಎಂಬಿಬಿಎಸ್ ವಿದ್ಯಾರ್ಥಿಗಳು

Bar & Bench

ರಾಷ್ಟ್ರೀಯ ನಿರ್ಗಮನ ಪರೀಕ್ಷಾ ನಿಯಮಾವಳಿ- 2023 ಮತ್ತದರ ಪರಿಣಾಮವಾಗಿ ಎದುರಾಗಿರುವ ರಾಷ್ಟ್ರೀಯ ನಿರ್ಗಮನ ಪರೀಕ್ಷೆಯಿಂದ (NeXT 2023) ವಿನಾಯಿತಿ ನೀಡುವಂತೆ ಕೋರಿ 2019ನೇ ಸಾಲಿನ ಅಂತಿಮ ವರ್ಷದ 30 ಎಂಬಿಬಿಎಸ್‌ ವಿದ್ಯಾರ್ಥಿಗಳು  ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. [ಲವೇಶ್‌ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].

 2019ರಲ್ಲಿ ಜಾರಿಯಲ್ಲಿದ್ದ ನಿಯಮಗಳನ್ನೇ ತಮಗೆ ಅನ್ವಯವಾಗುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದು, ನೆಕ್ಸ್ಟ್ ಪರೀಕ್ಷೆ ಬರೆಯಲು ತಾವು ಸಿದ್ಧರಿಲ್ಲ ಎಂದಿದ್ದಾರೆ.

ಜುಲೈ 28ರಂದು ನಿಗದಿಯಾಗಿದ್ದ ಅಣಕು ರಾಷ್ಟ್ರೀಯ ನಿರ್ಗಮನ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಅರ್ಜಿದಾರರು ಮಧ್ಯಂತರ ಮನವಿಯನ್ನೂ ಸಲ್ಲಿಸಿದ್ದಾರೆ.

2019ನೇ ಸಾಲಿನ ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ನಿರ್ಗಮನ ಪರೀಕ್ಷೆಯನ್ನು  ಮುಂದೂಡಲಾಗಿದೆ ಎಂದು ಎನ್‌ಎಂಸಿ ಜುಲೈ 13ರಂದು ಪ್ರಕಟಣೆ ಹೊರಡಿಸಿದ್ದರೂ ಕೂಡ ಅರ್ಜಿ ಸಲ್ಲಿಸಲಾಗಿದೆ.

ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆಯಾಗಿ ರಾಷ್ಟ್ರೀಯ ನಿರ್ಗಮನ ಪರೀಕ್ಷೆ ಅಸ್ತಿತ್ವಕ್ಕೆ ಬಂದಿತ್ತು. ವೈದ್ಯ ವೃತ್ತಿಯಲ್ಲಿ ತೊಡಗುವ ಪರವಾನಗಿ ಪಡೆಯಲು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಈ ಪರವಾನಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿತ್ತು. ಪರೀಕ್ಷೆಗೆ ವೈದ್ಯಕೀಯ ವಿದ್ಯಾರ್ಥಿ ಸಮುದಾಯದ ಹಲವು ವಲಯಗಳಿಂದ ವಿರೋಧ ಎದುರಾಗಿತ್ತು.