ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ತಾತ್ಕಾಲಿಕ ವೈದ್ಯಕೀಯ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇಂದು ತಿರಸ್ಕರಿಸಿದೆ.
ಅರ್ಜಿ ತಿರಸ್ಕರಿಸಿದ ನ್ಯಾ. ಅನುಜಾ ಪ್ರಭುದೇಸಾಯಿ ಅವರಿದ್ದ ಏಕಸದಸ್ಯ ಪೀಠ ಅರ್ಹತೆಯ ಆಧಾರದ ಮೇಲೆ ಮಲಿಕ್ ಅವರ ಜಾಮೀನು ಅರ್ಜಿಯನ್ನು ಇನ್ನೆರಡು ವಾರಗಳಲ್ಲಿ ಆಲಿಸುವುದಾಗಿ ತಿಳಿಸಿತು.
ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ಕೆಲ ಆಸ್ತಿ ಖರೀದಿಸಿದ ಆರೋಪದ ಮೇಲೆ ಮಲಿಕ್ ಅವರನ್ನು ಇ ಡಿ ಬಂಧಿಸಿತ್ತು.
ಮೇ 2022ರಲ್ಲಿ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಆರೋಪಪಟ್ಟಿ ಸ್ವೀಕರಿಸಿದ ನಂತರ, ಮಲಿಕ್ ಸಾಮಾನ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನವೆಂಬರ್ 30, 2022 ರಂದು ಮುಂಬೈ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಮಲಿಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರಿಗೆ ಜಾಮೀನು ನೀಡುವ ಆದೇಶದಲ್ಲಿ ಹೈಕೋರ್ಟ್ ಮಾಡಿದ ಅವಲೋಕನಗಳನ್ನು ವಿಶೇಷ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಮಲಿಕ್ ಪರ ವಕೀಲರು ವಾದಿಸಿದ್ದರು. ತಮ್ಮ ಜಾಮೀನು ಅರ್ಜಿಯಲ್ಲಿ, ಮಲಿಕ್ ಅರ್ಹತೆಯ ಮೇಲೆ ಜಾಮೀನು ಕೋರುವುದರ ಜೊತೆಗೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡುವಂತೆಯೂ ವಿನಂತಿಸಿದ್ದರು.
ಮಲಿಕ್ ಅವರ ಜಾಮೀನು ಅರ್ಜಿಯನ್ನು ವೈದ್ಯಕೀಯ ಆಧಾರದ ಮೇಲೆ ಮೊದಲು ಆಲಿಸಿದ್ದ ನ್ಯಾಯಾಲಯ ಆ ಸೀಮಿತ ಅಂಶಕ್ಕೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿತ್ತು. ಆ ತೀರ್ಪನ್ನು ಇಂದು ನ್ಯಾಯಾಲಯ ಪ್ರಕಟಿಸಿದೆ.