ರಾಜ್ಯ ಮತ್ತು ಕೇಂದ್ರ ಸರ್ಕಾರಿ ವಕೀಲರ ಹುದ್ದೆಗಳಲ್ಲಿ ಶೇ.30 ರಷ್ಟು ವಕೀಲೆಯರಿಗೆ ಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಶನಿವಾರ ಕರೆ ನೀಡಿದ್ದಾರೆ.
ಭಾರತದ ಮೊದಲ ಮಹಿಳಾ ವಕೀಲೆ ಕಾರ್ನೆಲಿಯಾ ಸೊರಾಬ್ಜಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಮುಂಬೈ ವಿಶ್ವವಿದ್ಯಾಲಯ ಮತ್ತು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ನಗರದಲ್ಲಿ ಶನಿವಾರ ಆಯೋಜಿಸಿದ್ದ "ಎಲ್ಲೆಗಳನ್ನು ಮೀರುವುದು: ಅದನ್ನು ಸಾಧ್ಯವಾಗಿಸಿದ ಮಹಿಳೆಯರು" ಹೆಸರಿನ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಕಾನೂನು ಅಧಿಕಾರಿಗಳಲ್ಲಿ ಕನಿಷ್ಠ ಶೇ.30 ರಷ್ಟು ಮಹಿಳೆಯರಿರಬೇಕು ಮತ್ತು ಅಷ್ಟೇ ಸಂಖ್ಯೆಯ ಮಹಿಳಾ ವಕೀಲರು ಸರ್ಕಾರಿ ವಲಯದ ಕಾನೂನು ಘಟಕಗಳ ಸಲಹೆಗಾರರ ಸಮಿತಿಯಲ್ಲಿರಬೇಕು ಎಂದು ಅವರು ಹೇಳಿದರು.
ನ್ಯಾ. ನಾಗರತ್ಯ ಅವರ ಭಾಷಣದ ಪ್ರಮುಖಾಂಶಗಳು
ಕಾನೂನು ಸಲಹೆ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯವಿಲ್ಲದಿರುವುದು ವ್ಯವಸ್ಥೆಯೊಳಗಿನ ಲಿಂಗ ಅಸಮಾನತೆಗೆ ಕಾರಣ.
ಸಮರ್ಥ ವಕೀಲೆಯರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಪದೋನ್ನತಿ ನೀಡುವುದು ನ್ಯಾಯಮೂರ್ತಿಗಳ ವರ್ಗದಲ್ಲಿ ಹೆಚ್ಚಿನ ವೈವಿಧ್ಯತೆ ತರಲು ಸಹಾಯಕ.
45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರನ್ನು ಸಹ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳನ್ನಾಗಿ ನೇಮಿಸಬಹುದಾದರೆ, ಅದೇ ರೀತಿ ಅರ್ಹ ಮಹಿಳಾ ವಕೀಲರನ್ನೇಕೆ ನೇಮಿಸಬಾರದು...
ಕಾರ್ನೆಲಿಯಾ ಸೊರಾಬ್ಜಿ, ರೆಜಿನಾ ಗುಹಾ, ಅನ್ನಾ ಚಾಂಡಿ, ಸುಪ್ರೀಂ ಕೋರ್ಟ್‌ನ ಮೊದಲ ಮಹಿಳೆ ನ್ಯಾಯಾಧೀಶೆ ಫಾತಿಮಾ ಬೀವಿ ಅವರಂತಹ ಮಹಿಳೆಯರು ಕಾನೂನು ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ.
ಆಶಾ ಕಾರ್ಯಕರ್ತೆಯರಿಗೂ ಮನ್ನಣೆ ನೀಡುವ ಅಗತ್ಯವಿದೆ.
ಸಾಮಾಜಿಕ ಮನೋಭಾವಗಳಲ್ಲಿ ಬದಲಾವಣೆಯಾಗಬೇಕು. ಹಳೆಯ ಲಿಂಗಾಧಾರಿತ ಪಾತ್ರಗಳ ಪರಾಮರ್ಶೆ ನಡೆಯಬೇಕು.