ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಶೇ.40 ಕಮಿಷನ್ ಆರೋಪ ಸಂಬಂಧ ಹೂಡಲಾಗಿರುವ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಸ್ ಕೇಶವ್ ಪ್ರಸಾದ್ ಹೂಡಿರುವ ಮಾನಹಾನಿ ದಾವೆಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ವಿಚಾರಣೆ ನಡೆಸಿದರು.
ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜೊತೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದರು. ರಾಹುಲ್ ಅವರ ಖುದ್ದು ಹಾಜರಾತಿ ದಾಖಲಿಸಿಕೊಂಡ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತು.
ರಾಹುಲ್ ಪರವಾಗಿ ಮಾಜಿ ಸಂಸದ ಡಿ ಕೆ ಸುರೇಶ್ ಅವರು 75 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಭದ್ರತೆಯನ್ನಾಗಿ ಒದಗಿಸಿದರು. ಜಾಮೀನು ಬಾಂಡ್‌ಗೆ ರಾಹುಲ್ ಸಹಿ ಹಾಕಿ ಹೊರಟರು. ನ್ಯಾಯಾಲಯವು ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿತು.
ಜೂನ್ 1ರ ವಿಚಾರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರಾಗಿದ್ದರು. ಇಬ್ಬರಿಂದಲೂ ತಲಾ 5 ಸಾವಿರ ರೂಪಾಯಿ ಮೌಲ್ಯದ ನಗದು ಬಾಂಡ್ ಪಡೆದು ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಸಂಸದ ರಾಹುಲ್ ಗಾಂಧಿ ಅವರು ಹಾಜರಾಗದಿದ್ದಕ್ಕೆ ಬಿಜೆಪಿ ಪರ ವಕೀಲ ಎಂ ವಿನೋದ್ ಕುಮಾರ್ ಅವರು ಎರಡು ಬಾರಿ ಗೈರಾಗಲು ಸಿಆರ್‌ಪಿಸಿ ಸೆಕ್ಷನ್ 205ನಲ್ಲಿ ಅವಕಾಶವಿಲ್ಲ. ಹೀಗಾಗಿ, ರಾಹುಲ್ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಬೇಕು ಎಂದು ಕೋರಿದ್ದರು.
ಇತ್ತ ರಾಹುಲ್ ಪರ ವಕೀಲರಾದ ನಿಶಿತ್ ಕುಮಾರ್ ಶೆಟ್ಟಿ ಅವರು “ಸಿಆರ್‌ಪಿಸಿ ಸೆಕ್ಷನ್ 205 ಅಡಿ ರಾಹುಲ್ ಅವರ ಹಾಜರಾತಿಗೆ ಇಂದಿಗೆ ವಿನಾಯಿತಿ ನೀಡಬೇಕು. ಜೂನ್ 7ರಂದು ಖುದ್ದು ಅವರು ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ” ಎಂದಿದ್ದರು. ಈ ವಾದವನ್ನು ಮ್ಯಾಜಿಸ್ಟ್ರೇಟ್ ಪುರಸ್ಕರಿಸಿ, ರಾಹುಲ್ ಹಾಜರಾತಿಗಾಗಿ ಪ್ರಕರಣ ಮುಂದೂಡಿತ್ತು.