ಬಿಜೆಪಿ ವಿರುದ್ಧ ಕಮಿಷನ್‌ ಆರೋಪ: ವಿಶೇಷ ನ್ಯಾಯಾಲಯದ ಮುಂದೆ ಇಂದು ಹಾಜರಾಗಲಿರುವ ರಾಹುಲ್‌ ಗಾಂಧಿ

ಬಿಜೆಪಿಯ ವಿಧಾನ ಪರಿಷತ್‌ ಕೇಶವ್‌ ಪ್ರಸಾದ್‌ ಹೂಡಿರುವ ಮಾನಹಾನಿ ದಾವೆಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ವಿಚಾರಣೆ ನಡೆಸಲಿದ್ದಾರೆ.
Rahul Gandhi
Rahul Gandhi Facebook
Published on

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಶೇ.40 ಕಮಿಷನ್‌ ಆರೋಪ ಮಾಡಿದ್ದ ಸಂಬಂಧ ತಮ್ಮ ವಿರುದ್ಧ ಹೂಡಲಾಗಿರುವ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶುಕ್ರವಾರ (ಜೂನ್‌ 7ಕ್ಕೆ) ಖುದ್ದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಹಾಜರಾಗಲಿದ್ದಾರೆ.

ಬಿಜೆಪಿ ವಿಧಾನ ಪರಿಷತ್‌ ಕೇಶವ್‌ ಪ್ರಸಾದ್‌ ಹೂಡಿರುವ ಮಾನಹಾನಿ ದಾವೆಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ವಿಚಾರಣೆ ನಡೆಸಲಿದ್ದಾರೆ.

ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್‌ ಗಾಂಧಿ ಅವರು ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಿಗ್ಗೆ 9 ಗಂಟೆ ವೇಳೆಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ಸ್ಥಳೀಯ ನಾಯಕರೊಂದಿಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 1ರ ವಿಚಾರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಹಾಜರಾಗಿದ್ದರು. ಇಬ್ಬರಿಂದಲೂ ತಲಾ 5 ಸಾವಿರ ರೂಪಾಯಿ ಮೌಲ್ಯದ ನಗದು ಬಾಂಡ್‌ ಪಡೆದು ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತ್ತು.

Also Read
ಬಿಜೆಪಿ ವಿರುದ್ಧದ ಶೇ. 40 ಕಮಿಷನ್‌ ಆರೋಪ: ಜೂನ್‌ 7ಕ್ಕೆ ರಾಹುಲ್‌ ಗಾಂಧಿ ಖುದ್ದು ಹಾಜರಾತಿಗೆ ವಿಶೇಷ ನ್ಯಾಯಾಲಯದ ಆದೇಶ

ಈ ವೇಳೆ, ಸಂಸದ ರಾಹುಲ್‌ ಗಾಂಧಿ ಅವರು ಹಾಜರಾಗದಿದ್ದಕ್ಕೆ ಬಿಜೆಪಿ ಪರ ವಕೀಲ ಎಂ ವಿನೋದ್‌ ಕುಮಾರ್‌ ಅವರು ಎರಡು ಬಾರಿ ಗೈರಾಗಲು ಸಿಆರ್‌ಪಿಸಿ ಸೆಕ್ಷನ್‌ 205ನಲ್ಲಿ ಅವಕಾಶವಿಲ್ಲ. ಹೀಗಾಗಿ, ರಾಹುಲ್‌ ವಿರುದ್ಧ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಬೇಕು ಎಂದು ಕೋರಿದ್ದರು.

ಇತ್ತ ರಾಹುಲ್‌ ಪರ ವಕೀಲರಾದ ನಿಶಿತ್‌ ಕುಮಾರ್‌ ಶೆಟ್ಟಿ ಅವರು “ಸಿಆರ್‌ಪಿಸಿ ಸೆಕ್ಷನ್‌ 205 ಅಡಿ ರಾಹುಲ್‌ ಅವರ ಹಾಜರಾತಿಗೆ ಇಂದಿಗೆ ವಿನಾಯಿತಿ ನೀಡಬೇಕು. ಜೂನ್‌ 7ರಂದು ಖುದ್ದು ಅವರು ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ” ಎಂದಿದ್ದರು. ಈ ವಾದವನ್ನು ಮ್ಯಾಜಿಸ್ಟ್ರೇಟ್‌ ಪುರಸ್ಕರಿಸಿ, ರಾಹುಲ್‌ ಹಾಜರಾತಿಗಾಗಿ ಪ್ರಕರಣವನ್ನು ಮುಂದೂಡಿದ್ದರು.

Kannada Bar & Bench
kannada.barandbench.com