Dogs 
ಸುದ್ದಿಗಳು

ಕಳೆದ ವರ್ಷ 5 ಲಕ್ಷ ಮಕ್ಕಳಿಗೆ ನಾಯಿ ಕಡಿತ: ತನಿಖೆ ಕೈಗೊಂಡು ವರದಿ ಸಲ್ಲಿಸಲು ಸೂಚಿಸಿದ ಎನ್ಎಚ್ಆರ್‌ಸಿ

ಲೋಕಸಭೆ ನೀಡಿದ ಪ್ರತಿಕ್ರಿಯೆಯ ಪ್ರಕಾರ, 2024ರಲ್ಲಿ ದೇಶದಲ್ಲಿ 21 ಲಕ್ಷಕ್ಕೂ ಹೆಚ್ಚು ನಾಯಿ ಕಡಿತದ ಘಟನೆಗಳು ವರದಿಯಾಗಿದ್ದು 37 ಮಂದಿ ಸಾವನ್ನಪ್ಪಿದ್ದರು.

Bar & Bench

ರಾಜ್ಯದಲ್ಲಿ ನಾಯಿ ಕಡಿತ ಪ್ರಕರಣಗಳನ್ನು ತನಿಖೆ ಮಾಡಿ ಕ್ರಮ ಕೈಗೊಂಡ ವರದಿ (ಎಟಿಆರ್‌) ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್ಆರ್‌ಸಿ) ಇತ್ತೀಚೆಗೆ ಹರಿಯಾಣದ ಪ್ರಾಣಿ ಕಲ್ಯಾಣ ಮಂಡಳಿಗೆ ನಿರ್ದೇಶಿಸಿದೆ.

ದೇಶದಲ್ಲಿ 2024ರಲ್ಲಿ ಸುಮಾರು 21,95,122 ನಾಯಿ ಕಡಿತದ ಘಟನೆಗಳು ವರದಿಯಾಗಿವೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು ಲೋಕಸಭೆಯಲ್ಲಿ ಒದಗಿಸಿದ ದತ್ತಾಂಶವನ್ನು ಆಧರಿಸಿ ಪತ್ರಿಕೆಯೊಂದರಲ್ಲಿ ಲೇಖನ ಪ್ರಕಟವಾದ ನಂತರ ಈ ವಿಷಯ ಬೆಳಕಿಗೆ ಬಂದಿತ್ತು. ನಾಯಿ ಕಡಿತಕ್ಕೊಳಗಾದವರಲ್ಲಿ 5 ಲಕ್ಷ ಮಕ್ಕಳು ಸೇರಿದ್ದು 37ಮಂದಿ ಸಾವನ್ನಪ್ಪಿದ್ದರು ಎಂದು ಮಾಹಿತಿ ತಿಳಿಸಿತ್ತು.

ದೂರುದಾರೆ ಅನುಭವ ಶ್ರೀವಾಸ್ತವ ಶಹೈ ಅವರು ಎಚ್‌ಎಚ್ಆರ್‌ಸಿಗೆ ಬರೆದ ಪತ್ರದಲ್ಲಿ ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸಿದ್ದರು. ಇದು ಸರ್ಕಾರಗಳ ಸಂಪೂರ್ಣ ವೈಫಲ್ಯದ ಪರಿಣಾಮ ಎಂದು ಆತಂಕ ವ್ಯಕ್ತಪಡಿಸಿದ್ದರು.

ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸದ ಅಧಿಕಾರಿಗಳನ್ನು ಟೀಕಿಸಿದ್ದ ಅವರು ಅನಿಯಮಿತ ಸಂತಾನಹರಣ ಚಿಕಿತ್ಸೆ ಮತ್ತು ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಮಾರ್ಗಸೂಚಿಗಳನ್ನು ಜಾರಿಗೆ ತರಲು  ಮೂಲಸೌಕರ್ಯ ಕೊರತೆ ಇರುವುದನ್ನು ಎತ್ತಿ ತೋರಿಸಿದ್ದರು.

ಅಲ್ಲದೆ 2023ರ ಎಬಿಸಿ ಮಾರ್ಗಸೂಚಿಗಳ ಪ್ರಕಾರ ನಾಯಿಗಳ ಮೇಲೆ ನಿಗಾ ಇಡಲು ಆಗತ್ಯವಾದ ಪ್ರಾಣಿ ಆಶ್ರಯ ಮನೆಗಳ ಕೊರತೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದ ಮೇಲ್ವಿಚಾರಣಾ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಅಥವಾ ಪ್ರತಿ ರಾಜ್ಯ ಮತ್ತು ಜಿಲ್ಲೆಯಲ್ಲಿ ಅಂತಹ ಸಮಿತಿಗಳ ರಚನೆಯೇ ಆಗದೆ ಇರಬಹುದು ಎಂದು ಅವರು ಹೇಳಿದ್ದರು.

ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಅವರು, ಪ್ರಕರಣದ ಬಗ್ಗೆ ಗಮನ ಹರಿಸುವಂತೆ ಮತ್ತು ನಾಗರಿಕರನ್ನು ರಕ್ಷಿಸಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ಮತ್ತು ಎಲ್ಲಾ ರಾಜ್ಯಗಳಿಗೆ ನೋಟಿಸ್ ನೀಡಬೇಕೆಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಎನ್ಎಚ್‌ಆರ್‌ಸಿ ಸಹಾಯಕ ರಿಜಿಸ್ಟ್ರಾರ್ (ಕಾನೂನು) ಬ್ರಿಜ್ವೀರ್ ಸಿಂಗ್ ಅವರು ನಾಲ್ಕು ವಾರದೊಳಗೆ ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವಂತೆ ಹರಿಯಾಣದ ಪ್ರಾಣಿ ಕಲ್ಯಾಣ ಮಂಡಳಿಗೆ ಆದೇಶಿಸಿದರು.