Supreme Court with Maharashtra Map  
ಸುದ್ದಿಗಳು

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಬಿಸಿ ಮೀಸಲಾತಿ: ಶೇ.50ರ ಮಿತಿ ಉಲ್ಲಂಘಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿಯನ್ನು ಶೇ 50ಕ್ಕಿಂತ ಹೆಚ್ಚಿಸುವುದಕ್ಕಾಗಿ ಬಂಥಿಯಾ ಆಯೋಗದ ವರದಿ ಬಳಸಿಕೊಳ್ಳುವ ಮಹಾರಾಷ್ಟ್ರದ ಕ್ರಮವನ್ನು ನ್ಯಾಯಾಲಯ ಪ್ರಶ್ನಿಸಿದೆ.

Bar & Bench

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಕುರಿತು ತಾನು ನೀಡಿದ್ದ ನಿರ್ದೇಶನಗಳನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ ರಾಹುಲ್ ರಮೇಶ್ ವಾಘ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಜನವರಿ 31, 2026 ರಂದು ನಡೆಯಲಿರುವ ಚುನಾವಣೆಗಳಿಗೆ ಒಟ್ಟು ಮೀಸಲಾತಿಯ ಮೇಲಿನ ಶೇಕಡಾ 50 ರ ಮಿತಿಯನ್ನು ರಾಜ್ಯ ಸರ್ಕಾರ ದಾಟುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

ಬಂಥಿಯಾ ಆಯೋಗದ ವರದಿ ಆಧಾರದ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಹೊಸ ಒಬಿಸಿ ಮೀಸಲಾತಿ ಜಾರಿಗೆ ತರುವ ಮಹಾರಾಷ್ಟ್ರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಆದರೆ ವಿಕಾಸ್ ಕಿಶನ್‌ರಾವ್‌ ಗವಳಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಶೇ 27ರ ಮೀಸಲಾತಿ ರದ್ದುಗೊಳಿಸಿ ಸ್ಥಳೀಯ ಸಂಸ್ಥೆಗಳ ಮೀಸಲಾತಿಗಾಗಿ ತ್ರಿವಳಿ ಪರೀಕ್ಷೆ ಜಾರಿಗೆ ಆಜ್ಞಾಪಿಸಿತ್ತು. ಮೀಸಲಾತಿ ನಿರ್ಧಾರಕ್ಕೆ ಮೀಸಲಾದ ಆಯೋಗವನ್ನು ರಚಿಸಬೇಕು, ಆಯೋಗದ ಶಿಫಾರಸುಗಳನ್ನು ಆಧರಿಸಿ ಪ್ರತಿಯೊಂದು ಸ್ಥಳೀಯ ಸಂಸ್ಥೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ನಿಗದಿಪಡಿಸಬೇಕು. ಯಾವುದೇ ಸಂದರ್ಭದಲ್ಲೂ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿ ಶೇ 50ರ ಮಿತಿ ದಾಟಬಾರದು ಎಂದಿತ್ತು.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ತಾನು ತಡೆ ನೀಡಲು ಉದ್ದೇಶಿಸಿಲ್ಲವಾದರೂ ಮೀಸಲಾತಿ ರೂಪಿಸುವವರು ಶೇ 50ರ ಮೀಸಲಾತಿ ಮೀರದಂತೆ ನೋಡಿಕೊಳ್ಳಬೇಕು. ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶ ಮರೆಮಾಚದೆ ಪರಿಷ್ಕೃತ ಮೀಸಲಾತಿಯನ್ನು ಪರಿಶೀಲಿಸಬೇಕು ಎಂದು ನ್ಯಾ. ಕಾಂತ್‌ ತಿಳಿಸಿದರು.

ತ್ರಿವಳಿ ಪರೀಕ್ಷೆಗೆ ಅನುಗುಣವಾಗಿ ಬಂಥಿಯಾ ಆಯೋಗದ ವರದಿ ಇದೆಯೇ ಎಂಬುದನ್ನು ತಾನು ತಿಳಿಯ ಬಯಸುತ್ತಿರುವುದಾಗಿ ನ್ಯಾಯಾಲಯ ಹೇಳಿದ್ದು ಈ ಪರಿಶೀಲನೆಯ ಬಳಿಕವೇ ಮಹಾರಾಷ್ಟ್ರ ಸರ್ಕಾರ ಮುಂದುವರೆಯಬೇಕು ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 19 ರಂದು ನಡೆಯಲಿದೆ.