Justice NV Ramana
Justice NV Ramana 
ಸುದ್ದಿಗಳು

ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ 50ರಷ್ಟು ಪ್ರಾತಿನಿಧ್ಯ ಹಕ್ಕಿನ ವಿಷಯವೇ ಹೊರತು ದಾನವಲ್ಲ: ಸಿಜೆಐ

Bar & Bench

ನ್ಯಾಯಾಂಗದಲ್ಲಿ 50 ಪ್ರತಿಶತದಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕೆಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರು ಆಗ್ರಹಿಸಿದ್ದು, ಇದು ದಾಕ್ಷಿಣ್ಯದ ವಿಚಾರವಲ್ಲ ಬದಲಿಗೆ ಮಹಿಳೆಯರ ಹಕ್ಕು ಎಂದು ಪ್ರತಿಪಾದಿಸಿದರು.

ಸುಪ್ರೀಂಕೋರ್ಟ್‌ ನೂತನ ನ್ಯಾಯಮೂರ್ತಿಗಳನ್ನು ಸನ್ಮಾನಿಸಲು ಸರ್ವೋಚ್ಚ ನ್ಯಾಯಾಲಯದ ಮಹಿಳಾ ವಕೀಲರು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಪದೋನ್ನತಿಗೊಂಡ ಒಂಬತ್ತು ನ್ಯಾಯಮೂರ್ತಿಗಳಲ್ಲಿ ಮೂವರು ಮಹಿಳೆಯರಾಗಿದ್ದಾರೆ.

"ಸಾವಿರಾರು ವರ್ಷಗಳ ದಮನ ಸಾಕು. ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ.50 ಪ್ರಾತಿನಿಧ್ಯ ನೀಡಬೇಕಾದ ಕಾಲ ಬಂದಿದೆ. ಇದು ನಿಮ್ಮ ಹಕ್ಕೇ ಹೊರತು ದಾನವಲ್ಲ," ಎಂದು ಅವರು ಅಭಿಪ್ರಾಯಪಟ್ಟರು.

ಚಿಂತಕ ಕಾರ್ಲ್‌ ಮಾರ್ಕ್ಸ್‌ ಅವರ ಪ್ರಸಿದ್ಧ ಹೇಳಿಕೆಯೊಂದನ್ನು ಇದೇ ವೇಳೆ ಕೊಂಚ ಮಾರ್ಪಡಿಸಿ ಪ್ರಸ್ತಾಪಿಸಿದ ಅವರು “ವಿಶ್ವದ ಮಹಿಳೆಯರು ಒಗ್ಗೂಡಿ! ನೀವು ನಿಮ್ಮ ಸಂಕೋಲೆಗಳನ್ನಲ್ಲದೆ ಬೇರೇನನ್ನೂ ಕಳೆದುಕೊಳ್ಳಲಾರಿರಿ” ಎಂದರು. "ನಿಮ್ಮೆಲ್ಲರ ಸಹಾಯದಿಂದ, ಸರ್ವೋಚ್ಚ ನ್ಯಾಯಾಲಯ ಮತ್ತು ಇತರ ನ್ಯಾಯಾಲಯಗಳಲ್ಲಿ ನಾವು ಈ ಗುರಿಯನ್ನು (50 ಪ್ರತಿಶತ ಪ್ರಾತಿನಿಧ್ಯ) ತಲುಪಬಹುದು. ಆ ದಿನ ನಾನು ಇಲ್ಲಿಯೇ ಇರುತ್ತೇನೋ ಅಥವಾ ಬೇರೆಲ್ಲಿಯಾದರೂ ಇರುತ್ತೇನೋ ಗೊತ್ತಿಲ್ಲ. ಆದರೆ ಆ ದಿನ ನಾನು ಖಂಡಿತವಾಗಿಯೂ ಸಂತೋಷಪಡುತ್ತೇನೆ” ಎಂದು ಅವರು ಹೇಳಿದರು.

ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಮಟ್ಟದಲ್ಲಿರುವ ವಿವಿಧ ಅಂಕಿ ಅಂಶಗಳನ್ನು ಅವರು ಈ ಸಂದರ್ಭದಲ್ಲಿ ಬಿಚ್ಚಿಟ್ಟರು: ಕೆಳ ಹಂತದ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರು ಶೇ 30ಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹೈಕೋರ್ಟ್‌ಗಳಲ್ಲಿ ಈ ಪ್ರಮಾಣ ಶೇ 11.5 ರಷ್ಟಿದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತುತ 4 ಮಂದಿ ಮಹಿಳಾ ನ್ಯಾಯಮೂರ್ತಿಗಳು ಇದ್ದು ಶೇಕಡಾವಾರು ಪ್ರಮಾಣ ಕೇವಲ 12ರಷ್ಟಿದೆ. ದೇಶದಲ್ಲಿ 17 ಲಕ್ಷ ಮಂದಿ ವಕೀಲರಿದ್ದರೂ ಅವರಲ್ಲಿ ಶೇ 15ರಷ್ಟು ಮಾತ್ರ ಮಹಿಳೆಯರಿದ್ದಾರೆ. ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಮಹಿಳಾ ಪ್ರಾತನಿಧ್ಯ ಕೇವಲ ಶೇ 2ರಷ್ಟು ಮಾತ್ರ ಇದೆ. ಭಾರತೀಯ ವಕೀಲರ ಪರಿಷತ್ತಿನಲ್ಲಿ ಯಾವುದೇ ಮಹಿಳಾ ಸದಸ್ಯರಿಲ್ಲ"ಎಂದು ಅವರು ಹೇಳಿದರು.

“ಇದನ್ನು ತುರ್ತಾಗಿ ಸರಿಪಡಿಸಬೇಕಾದ ಅಗತ್ಯವಿದೆ. ನಾನೂ ಕೂಡ ಇದನ್ನು ಸರಿಪಡಿಸಲು ಕಾರ್ಯಾಂಗವನ್ನು ಒತ್ತಾಯಿಸುತ್ತಿದ್ದೇನೆ” ಎಂದು ಅವರು ಹೇಳಿದರು.

“ನನ್ನ ಸೂಚನೆಯಂತೆ ನಡೆಸಲಾದ ಸಮೀಕ್ಷೆಯ ಪ್ರಕಾರ ಸುಮಾರು 6,000 ವಿಚಾರಣಾ ನ್ಯಾಯಾಲಯ ಸಂಕೀರ್ಣಗಳಲ್ಲಿ ಶೇ.22 ರಷ್ಟು ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲ. ನಾನು ಪ್ರಸ್ತಾವನೆ ಸಲ್ಲಿಸಿರುವ ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ನಿಗಮವು ನ್ಯಾಯಾಲಯವು ಎಲ್ಲರನ್ನೂ ಒಳಗೊಳ್ಳುವಂತಹ ವಿನ್ಯಾಸಗಳನ್ನು ಒದಗಿಸುತ್ತದೆ. ನಾವು ಹೆಚ್ಚು ಸ್ವಾಗತಾರ್ಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆ ಎಂದು ಅವರು ಹೇಳಿದರು. ಕಾನೂನು ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೆಲವು ಶೇಕಡಾವಾರು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡುವುದು ಮೊದಲ ಪರಿಹಾರ ಕ್ರಮವಾಗಿದೆ” ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಉಪಸ್ಥಿತರಿದ್ದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹಿಮಾ ಕೊಹ್ಲಿ “1980ರಲ್ಲಿ ವಕೀಲ ವೃತ್ತಿಯಲ್ಲಿ ಮಹಿಳೆಯರು ಕಟೆದ ಕಿರಿದಾದ ಹಾದಿ ಈಗ "ಹೆದ್ದಾರಿಯಾಗಿ" ಮಾರ್ಪಟ್ಟಿದ್ದು ಸಮಾನ ಅವಕಾಶಗಳು ಸೃಷ್ಟಿಯಾದಂತೆ ಅದು ಹಿರಿದಾಗುತ್ತಾ ಹೋಗುತ್ತದೆ ಎಂದರು.