ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ನೇಮಕ: ʼಊಹಾತ್ಮಕʼ ವರದಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಸಿಜೆಐ ಅಸಮಾಧಾನ

ಊಹಾತ್ಮಕ ವರದಿಗಳನ್ನು ಪ್ರಕಟಿಸದ ಹಿರಿಯ ಪತ್ರಕರ್ತರಿಗೂ ಅವರು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದ್ದಾರೆ.
CJI NV Ramana
CJI NV Ramana

ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಸಂಬಂಧ ಕೊಲಿಜಿಯಂ ಮಾಡಿದ ಶಿಫಾರಸುಗಳ ಬಗ್ಗೆ ಊಹಾತ್ಮಕ ವರದಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೇಮಕಾತಿ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು ಹೆಸರುಗಳನ್ನು ಅಂತಿಮಗೊಳಿಸಿಲ್ಲ. ಮಾಧ್ಯಮಗಳಲ್ಲಿ ಇಂದು ಪ್ರಕಟವಾದ ವರದಿಗಳು ನಿಷ್ಪ್ರಯೋಜಕವಾಗಿವೆ. ಇದು ನ್ಯಾಯಮೂರ್ತಿಗಳು ಮತ್ತು ಶಿಫಾರಸು ಮಾಡಿದ ಇತರ ವ್ಯಕ್ತಿಗಳ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ.

"ಮಾಧ್ಯಮದ ವರದಿಯ ಊಹಾಪೋಹಗಳ ಬಗ್ಗೆ ನನಗೆ ಕಳವಳ ಇದೆ. ನೇಮಕಾತಿಯ ಪ್ರಕ್ರಿಯೆ ನಡೆಯುತ್ತಿದೆ. ಇದು ಒಂದು ಪವಿತ್ರ ಪ್ರಕ್ರಿಯೆಯಾಗಿದ್ದು ನನಗೆ ತೀವ್ರ ಅಸಮಾಧಾನವಾಗಿದೆ, "ಎಂದು ಅವರು ಹೇಳಿದರು. ಊಹಾತ್ಮಕ ವರದಿಗಳನ್ನು ಪ್ರಕಟಿಸದ ಹಿರಿಯ ಪತ್ರಕರ್ತರಿಗೂ ಅವರು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು.

"ಹಿರಿಯ ಪತ್ರಕರ್ತರು ಇಂತಹ ಪ್ರಕ್ರಿಯೆಯನ್ನು ಊಹಿಸಿ ಬರೆಯದೇ ಇರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಅಂತಹ ಪತ್ರಕರ್ತರು ನಮ್ಮ ಪ್ರಜಾಪ್ರಭುತ್ವದ ಶಕ್ತಿ. ನನಗೆ ತೀವ್ರ ನಿರಾಶೆಯಾಗಿದೆ" ಎಂದು ಅವರು ತಿಳಿಸಿದರು.

Also Read
ನ್ಯಾಯಮೂರ್ತಿಗಳ ಶಿಫಾರಸು: ಸುಪ್ರೀಂಕೋರ್ಟ್‌ನ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಬಿ ವಿ ನಾಗರತ್ನ?

ನಿವೃತ್ತರಾಗುತ್ತಿರುವ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನವೀನ್ ಸಿನ್ಹಾ ಅವರೊಂದಿಗೆ ವಿಧ್ಯುಕ್ತವಾಗಿ ಪೀಠ ಹಂಚಿಕೊಂಡ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಸುಪ್ರೀಂಕೋರ್ಟ್‌ಗೆ ಪದೋನ್ನತಿ ನೀಡಲು ಕೊಲಿಜಿಯಂ 9 ಹೆಸರುಗಳನ್ನು ಶಿಫಾರಸು ಮಾಡಿದೆ ಎಂದು ವಿವಿಧ ಸುದ್ದಿ ಸಂಸ್ಥೆಗಳು ಇಂದು ವರದಿ ಮಾಡಿವೆ. ಕೊಲಿಜಿಯಂ ಒಂಬತ್ತು ಹೆಸರುಗಳನ್ನು ಶಿಫಾರಸು ಮಾಡಿದ್ದರೂ ಪತ್ರಕ್ಕೆ ಕೊಲಿಜಿಯಂ ನ್ಯಾಯಮೂರ್ತಿಗಳು ಇನ್ನೂ ಅಂಕಿತ ಹಾಕಿಲ್ಲ ಎಂದು ʼಬಾರ್‌ ಅಂಡ್‌ ಬೆಂಚ್‌ʼ ವರದಿ ಮಾಡಿತ್ತು.

Related Stories

No stories found.
Kannada Bar & Bench
kannada.barandbench.com