COVID-19 
ಸುದ್ದಿಗಳು

ರಾಜ್ಯ ಸರ್ಕಾರಗಳಿಂದ ಪ್ರತಿ ಕೋವಿಡ್‌ ಸಾವಿಗೆ ₹50,000 ಕೃಪಾನುದಾನ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದ ಮಾಹಿತಿ

ರಾಜ್ಯ ಸರ್ಕಾರಗಳು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಕೃಪಾನುದಾನವನ್ನು (ಎಕ್ಸ್‌ಗ್ರೇಷಿಯಾ) ಪಾವತಿ ಮಾಡಲಿವೆ ಎಂದು ಕೇಂದ್ರ ಗೃಹ ಇಲಾಖೆಯು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

Bar & Bench

ಕೋವಿಡ್‌ಗೆ ಬಲಿಯಾದವರಿಗೆ ತಲಾ ₹50,000 ಕೃಪಾನುದಾನ ಪರಿಹಾರ ನೀಡಲು ಶಿಫಾರಸ್ಸು ಮಾಡಿರುವುದಾಗಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರವು ತಿಳಿಸಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (ಎಸ್‌ಡಿಆರ್‌ಎಫ್‌) ರಾಜ್ಯ ಸರ್ಕಾರಗಳು ಕೃಪಾನುದಾನವನ್ನು ಪಾವತಿ ಮಾಡಲಿವೆ ಎಂದು ಕೇಂದ್ರ ಗೃಹ ಇಲಾಖೆಯು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಅರ್ಹ ವ್ಯಕ್ತಿಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಶಿಫಾರಸ್ಸು ಮಾಡಿದ ₹50,000 ಪರಿಹಾರ ನೀಡುವುದಲ್ಲದೇ ಪರಿಹಾರ ಕಾರ್ಯಾಚರಣೆ ಮತ್ತು ಸನ್ನದ್ಧತೆಯ ಚಟುವಟಿಕೆಗಳಲ್ಲಿ ತಮ್ಮ ಜೀವವನ್ನು ಕಳೆದುಕೊಂಡವರನ್ನೂ (ಮುಂಚೂಣಿ ಯೋಧರು) ಈ ಯೋಜನೆ ಒಳಗೊಂಡಿರುತ್ತದೆ. ಇದು ಕೋವಿಡ್‌ ಸಾವಿನ ಪ್ರಮಾಣೀಕರಣಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಲಾಗಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾವನ್ನಪ್ಪಿದವರ ಸಂಬಂಧಿಗಳಿಗೆ ಪರಿಹಾರದ ಮೊತ್ತವನ್ನು ವಿತರಿಸಲಿದೆ. ಕೋವಿಡ್‌ ಸಾವಿನ ಪ್ರಮಾಣ ಪತ್ರದ ಬಗ್ಗೆ ಗೊಂದಲಗಳು ಸೃಷ್ಟಿಯಾದರೆ ಜಿಲ್ಲಾ ಮಟ್ಟದ ಸಮಿತಿಯು ಮರಣ ಪ್ರಮಾಣ ಪತ್ರ ತಿದ್ದುಪಡಿ ಮಾಡಿ ನೀಡುವಂತಹ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಎನ್‌ಡಿಎಂಎ ಹೇಳಿದೆ.

ಕೋವಿಡ್‌ನಿಂದ ಮುಂದೆ ಸಂಭವಿಸಬಹುದಾದ ಸಾವುಗಳಿಗೂ ಕೃಪಾನುದಾನ ವಿತರಿಸಲಾಗುವುದು ಎಂದು ಎನ್‌ಡಿಎಂಎ ಶಿಫಾರಸ್ಸು ಮಾಡಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ 30 ದಿನಗಳ ಒಳಗಾಗಿ, ಆಧಾರ್‌ ಸಂಖ್ಯೆ ಲಿಂಕ್‌ ಮಾಡಲಾಗಿರುವ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಬೇಕು ಎಂದು ಹೇಳಲಾಗಿದೆ.

ಜೂನ್‌ 30ರಂದು ಆರು ವಾರಗಳಲ್ಲಿ ಮಾರ್ಗಸೂಚಿ ರೂಪಿಸುವಂತೆ ಎನ್‌ಡಿಎಂಎಗೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿತ್ತು. ಕೃಪಾನುದಾನ ನೀಡುವ ವಿಚಾರವನ್ನು ನ್ಯಾಯಾಲಯವು ಎನ್‌ಡಿಎಂಎ ವಿವೇಚನೆಗೆ ಬಿಟ್ಟಿತ್ತು. “ಕೋವಿಡ್‌ನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಕೃಪಾನುದಾನ ವಿತರಿಸುವ ಸಂಬಂಧ ಕನಿಷ್ಠ ಪರಿಹಾರ ಕ್ರಮಗಳ ಅಡಿ ಮಾರ್ಗಸೂಚಿ ರೂಪಿಸಲು ಎನ್‌ಡಿಎಂಎ ನಿರ್ದೇಶಿಸುತ್ತಿದ್ದೇವೆ. ಪರಿಹಾರದ ಮೊತ್ತವನ್ನು ನಿರ್ಧರಿಸುವ ವಿವೇಚನೆಯನ್ನು ಪ್ರಾಧಿಕಾರಕ್ಕೆ ಬಿಡಲಾಗಿದೆ” ಎಂದು ತೀರ್ಪಿನಲ್ಲಿ ನ್ಯಾಯಾಲಯ ಹೇಳಿತ್ತು.

ವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್ 12ರ ಅಡಿ ಕೃಪಾನುದಾನ ಒದಗಿಸುವುದು ಸೇರಿದಂತೆ ಕನಿಷ್ಠ ಮಾನದಂಡಗಳ ಪರಿಹಾರಕ್ಕಾಗಿ ಮಾರ್ಗಸೂಚಿ ರೂಪಿಸುವುದು ಕಡ್ಡಾಯವಾಗಿದೆ ಮತ್ತು ಅದು ವಿವೇಚನಾಧಿಕಾರವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಅದನ್ನು ಮಾಡಲು ವಿಫಲವಾಗುವ ಮೂಲಕ ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ತನ್ನ ಕೆಲಸ ನಿರ್ವಹಿಸಲು ವಿಪತ್ತು ಪ್ರಾಧಿಕಾರ ವಿಫಲವಾಗಿದೆ ಎಂದು ಹಿಂದೆ ನ್ಯಾಯಾಲಯ ಹೇಳಿತ್ತು.