Supreme Court, lawyers  
ಸುದ್ದಿಗಳು

ವರ್ಚುವಲ್‌ ವ್ಯವಸ್ಥೆಯಿಂದ ಲಾಭಕ್ಕಿಂತ ಸಮಸ್ಯೆ ಹೆಚ್ಚು: ಭೌತಿಕ ವಿಚಾರಣೆ ಆರಂಭ ಕೋರಿ ಸಿಜೆಐಗೆ ಪತ್ರ ಬರೆದ 505 ವಕೀಲರು

ಪ್ರಕರಣಗಳ ಉಲ್ಲೇಖ ಮತ್ತು ಅವುಗಳನ್ನು ವಿಚಾರಣೆಗೆ ನಿಗದಿಗೊಳಿಸುವಾಗ ಆಗುತ್ತಿರುವ ಲೋಪಗಳು ಸೇರಿದಂತೆ ಹಲವು ಅಹವಾಲುಗಳನ್ನು ಪತ್ರದಲ್ಲಿ ವಕೀಲರು ವಿವರಿಸಿದ್ದಾರೆ.

Bar & Bench

ಸರ್ವೋಚ್ಚ ನ್ಯಾಯಾಲಯದಲ್ಲಿ ಭೌತಿಕ ವಿಚಾರಣೆಯನ್ನು ಪುನಾರಂಭಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್‌ ಎ ಬೊಬ್ಡೆ ಅವರಿಗೆ ಮಂಗಳವಾರ ಸುಪ್ರೀಂ ಕೋರ್ಟ್‌ ವಕೀಲರು ಮನವಿ ಸಲ್ಲಿಸಿದ್ದಾರೆ.

ವಕೀಲರಾದ ಕುಲದೀಪ್‌ ರೈ, ಅಂಕುರ್‌ ಜೈನ್‌ ಮತ್ತು ಅನುಭವ್ ಅವರು ಪತ್ರ ಬರೆದಿದ್ದು, ಹಿರಿಯ ವಕೀಲರು ಸೇರಿದಂತೆ 505 ಮಂದಿ ವಕೀಲರು ಪತ್ರಕ್ಕೆ ಸಹಿ ಹಾಕಿದ್ದಾರೆ. ಕೋವಿಡ್‌ ನಂತರ ಹಾಗೂ ಕಳೆದ ಹತ್ತು ತಿಂಗಳಿಂದ ವರ್ಚುವಲ್‌ ಕಲಾಪ ಮಾತ್ರ ನಡೆಯುತ್ತಿರುವುದರಿಂದ ಕಿರಿಯ ವಕೀಲರು ಭಾರಿ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವರ್ಚುವಲ್‌ ಕಲಾಪದಿಂದ ಸಮಸ್ಯೆಗಳು ಹೆಚ್ಚೇ ವಿನಾ ಅದರಿಂದ ಲಾಭಗಳಿಲ್ಲ. ಇದರಿಂದ ನ್ಯಾಯದಾನವನ್ನು ಸರಿಯಾಗಿ ಮಾಡಲು ಆಗುತ್ತಿಲ್ಲ ಎನ್ನಲಾಗಿದೆ. ಅಲ್ಲದೆ, ವರ್ಚುವಲ್‌ ವ್ಯವಸ್ಥೆಯ ಬಗ್ಗೆ ನ್ಯಾಯಮೂರ್ತಿಗಳು, ಅಟಾರ್ನಿ ಜನರಲ್‌ ಅವರು ಸಹ ತಮ್ಮದೇ ಆದ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಲಾಗಿದೆ.

ವರ್ಚುವಲ್‌ ಕಲಾಪ ವ್ಯವಸ್ಥೆಯು ಹೇಗೆ ವಿಫಲವಾಗಿದೆ ಮತ್ತು ಅದರಿಂದ ನ್ಯಾಯದಾನ ಮಾಡುವಲ್ಲಿ ಆಗುತ್ತಿರುವ ಸಮಸ್ಯೆಗಳೇನು ಎನ್ನುವುದನ್ನು ವಿವರಿಸಲಾಗಿದ್ದು, ಆ ಸಮಸ್ಯೆಗಳ ಪಟ್ಟಿ ಹೀಗಿದೆ:

  • ನೆಟ್‌ವರ್ಕ್‌ ಸಂಪರ್ಕದ ಸಮಸ್ಯೆಗಳು.

  • ವರ್ಚುವಲ್‌ ವಿಚಾರಣೆಗಳ ಸಂದರ್ಭದಲ್ಲಿ ರೆಜಿಸ್ಟ್ರಿಯು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ.

  • ಪ್ರಕರಣ ಉಲ್ಲೇಖಕ್ಕೆ ಸಂಬಂಧಿಸಿದಂತೆ ಅವುಗಳ ಉಸ್ತುವಾರಿ ನಡೆಸುವ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ.

  • ತುರ್ತು ಪ್ರಕರಣಗಳನ್ನು ವಿಚಾರಣೆಗೆ ಉಲ್ಲೇಖಿಸದೇ ಹಾಗೂ ಕಾರಣಗಳನ್ನು ನೀಡದೇ ಅವುಗಳನ್ನು ಪ್ರಕರಣಗಳ ಉಲ್ಲೇಖ ವಿಭಾಗವು ವಜಾ ಮಾಡುತ್ತಿದೆ.

  • ದೈನಂದಿನ ವೆಚ್ಚಗಳನ್ನು ಭರಿಸಲಾಗದೆ ಶೇ. 50ಕ್ಕೂ ಹೆಚ್ಚು ಯುವ ವಕೀಲರು ದೆಹಲಿ ತೊರೆದಿದ್ದಾರೆ.

ಖಾಸಗಿ ಕಚೇರಿಗಳು, ಮಾಲ್‌ಗಳು, ವಿವಾಹ ಸಭಾಂಗಣಗಳು, ಚಿತ್ರಮಂದಿರಗಳು, ದೇವಸ್ಥಾನಗಳು, ಚುನಾವಣಾ ಸಭೆಗಳು, ವಿಮಾನ ನಿಲ್ದಾಣಗಳು, ರೈಲು ಮತ್ತು ಬಸ್‌ ಪ್ರಯಾಣ ಇತ್ಯಾದಿ ಕಡೆಗಳಲ್ಲಿ ಕೋವಿಡ್‌ ನಿಯಂತ್ರಣಗಳನ್ನು ಸಡಿಲಗೊಳಿಸಲಾಗಿದೆ. ಸುಪ್ರೀಂ ಕೋರ್ಟ್‌ ರೆಜಿಸ್ಟ್ರಿಯೂ ಭೌತಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ವಕೀಲರ ಪರಿಷತ್‌ನ ಸದಸ್ಯರಿಗೆ ಭೌತಿಕವಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಪತ್ರದಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.

ಇಷ್ಟು ಮಾತ್ರವಲ್ಲದೇ ಕೊಲ್ಕತ್ತಾ, ಬಾಂಬೆ, ದೆಹಲಿ, ಮದ್ರಾಸ್‌, ಅಲಾಹಾಬಾದ್‌, ಉತ್ತರಾಖಂಡ, ಜಾರ್ಖಂಡ್‌, ರಾಜಸ್ಥಾನ, ಬಿಹಾರ, ಕೇರಳ ಇತ್ಯಾದಿ ಕಡೆಗಳಲ್ಲಿನ ಹೈಕೋರ್ಟ್‌ಗಳು ಭೌತಿಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಲಾಗಿದೆ.

ಪ್ರಕರಣಗಳ ಪಟ್ಟಿ ಮತ್ತು ಉಲ್ಲೇಖಿಸುವ ವಿಭಾಗವು ಕರೆಗೆ ಉತ್ತರಿಸದೇ ಇರುವುದರಿಂದ ಪ್ರಮುಖ ಪ್ರಕರಣಗಳು ಬಾಕಿ ಉಳಿದು, ಮುಂದೂಡಲ್ಪಡುತ್ತಿವೆ. ತುರ್ತಾಗಿ ಆಲಿಸಬೇಕಾದ ಜೀವನ ಮತ್ತು ಸ್ವಾತಂತ್ರ್ಯದ ಪ್ರಕರಣಗಳು, ಜಾಮೀನು ಪ್ರಕರಣಗಳು ವಿಚಾರಣೆಗೆ ಒಳಪಡುತ್ತಿಲ್ಲ. ಇದು ವಕೀಲರು ಮತ್ತು ಕಕ್ಷಿದಾರರಲ್ಲಿ ಅಸಹಾಯಕತೆ ಉಂಟು ಮಾಡಿದೆ ಎಂದು ವಿವರಿಸಲಾಗಿದ್ದು, ಈ ಎಲ್ಲಾ ಆತಂಕಗಳ ಹಿನ್ನೆಲೆಯಲ್ಲಿ ಪತ್ರದಲ್ಲಿ ಸಹಿ ಹಾಕಿರುವ ಎಲ್ಲರೂ ಭೌತಿಕ ಕಲಾಪ ಆರಂಭಿಸುವಂತೆ ಸಿಜೆಐ ಅವರನ್ನು ಒತ್ತಾಯಿಸಿದ್ದಾರೆ.

ಈ ಮಧ್ಯೆ, ತಕ್ಷಣಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಭೌತಿಕ ವಿಚಾರಣೆ ಆರಂಭಿಸದಂತೆ ವೈದ್ಯಕೀಯ ಕ್ಷೇತ್ರದ ತಜ್ಞರು ಸಲಹೆ ನೀಡಿರುವುದರಿಂದ ಭೌತಿಕ ವಿಚಾರಣೆ ಆರಂಭಿಸುವುದಿಲ್ಲ ಎಂದು ಸಿಜೆಐ ಮಂಗಳವಾರ ಹೇಳಿದ್ದು, ಕೆಲವು ಹೈಕೋರ್ಟ್‌ಗಳು ಭೌತಿಕ ವಿಚಾರಣೆ ಆರಂಭಿಸಿದ ಬಳಿಕ ನ್ಯಾಯಮೂರ್ತಿಗಳು ಮತ್ತು ಸಿಬ್ಬಂದಿಗೆ ಕೋವಿಡ್‌ ತಗುಲಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದೂ ಸಿಜೆಐ ಹೇಳಿದ್ದಾರೆ.