Suriya Sivakumar
Suriya Sivakumar 
ಸುದ್ದಿಗಳು

ನಟ ಸೂರ್ಯ ವಿರುದ್ಧ ನಿಂದನಾ ಪ್ರಕ್ರಿಯೆ ಕೈಗೊಳ್ಳದಂತೆ ಮದ್ರಾಸ್ ಸಿಜೆಗೆ ಆರು ನಿವೃತ್ತ ನ್ಯಾಯಮೂರ್ತಿಗಳು ಹೇಳಿದ್ದೇನು?

Bar & Bench

ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ನೀಟ್ ಪರೀಕ್ಷೆ ನಡೆಸುವ ಕುರಿತು ನಟ ಸೂರ್ಯ ನೀಡಿದ್ದ ಹೇಳಿಕೆಯು ನ್ಯಾಯಾಂಗ ನಿಂದನೆಗೆ ಸಮನಾಗಿದೆ. ಇದರಿಂದ ಅವರ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸುವಂತೆ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ ಪಿ ಸಾಹಿ ಅವರಿಗೆ ನ್ಯಾ. ಎಸ್‌ ಎಂ ಸುಬ್ರಮಣ್ಯ ಬರೆದಿದ್ದ ಪತ್ರವನ್ನು ಗಂಭೀರವಾಗಿ ಪರಿಗಣಿಸಬಾರದು. ನ್ಯಾಯಮೂರ್ತಿಯವರ ಬೇಡಿಕೆಯಿಂದ ಹಿಂದೆ ಸರಿಯುವಂತೆ ಸಿಜೆ ಸಾಹಿ ಅವರಿಗೆ ಆರು ನಿವೃತ್ತ ನ್ಯಾಯಮೂರ್ತಿಗಳು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

“ಈ ನ್ಯಾಯಾಲಯದ ಗೌರವ ಮತ್ತ ಘನತೆಯ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವ ನಿವೃತ್ತ ನ್ಯಾಯಮೂರ್ತಿಗಳಾದ ನಾವು ದೂರನ್ನು ಗಂಭೀರವಾಗಿ ಪರಿಗಣಿಸದೆ ಅಲ್ಲಿಗೆ ಬಿಡುವಂತೆ ಶ್ರದ್ಧಾಪೂರ್ವಕವಾಗಿ ಕೋರುತ್ತೇವೆ. ನಿಮ್ಮ ಹಾಗೂ ನ್ಯಾಯಾಲಯವನ್ನು ಅನವಶ್ಯಕವಾದ ವಿವಾದದಿಂದ ಮುಕ್ತಗೊಳಿಸುವ ದೃಷ್ಟಿಯಿಂದ ಈ ಮನವಿ ಮಾಡುವುದು ನಮ್ಮ ಕರ್ತವ್ಯವಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಿವೃತ್ತ ನ್ಯಾಯಮೂರ್ತಿಗಳಾದ ಕೆ ಚಂದ್ರು, ಕೆ ಎನ್ ಬಾಷಾ, ಟಿ ಸುದಂಥಿರಾಮ್, ಡಿ ಹರಿಪರಂಥಮ್, ಕೆ ಕಣ್ಣನ್ ಮತ್ತು ಜಿ ಎಂ ಅಕ್ಬರ್ ಅಲಿ ಅವರ ಪರವಾಗಿ ಪತ್ರ ಬರೆಯಲಾಗಿದೆ.

“ನಟ ಸೂರ್ಯ ಅವರ ಹೇಳಿಕೆಯನ್ನು ದೊಡ್ಡದಾಗಿಸುತ್ತಿರುವ ಬಗ್ಗೆ ನಮಗೆ ಆತಂಕವಾಗಿದೆ. ಇದು ಎಲ್ಲಾ ಮಿತಿಗಳನ್ನೂ ಮೀರಿದೆ. ವಿದ್ವತ್ ಪೂರ್ಣರಾದ ನ್ಯಾಯಮೂರ್ತಿಗಳು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ” ಎಂದು ಆರು ನಿವೃತ್ತ ನ್ಯಾಯಮೂರ್ತಿಗಳು ನ್ಯಾ. ಸುಬ್ರಮಣ್ಯಂ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.

“ನೀಟ್ ಅವಶ್ಯಕತೆಗಳನ್ನು ಪೂರೈಸಲಾಗದೆ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಉದ್ವಿಗ್ನ ಸಂದರ್ಭದಲ್ಲಿ ಕಲೆಯ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಅತ್ಯುತ್ಸಾಹದ ಹೇಳಿಕೆಯನ್ನು ವ್ಯಾಪ್ತಿಯ ಹೊರಗೆ ಗಂಭೀರವಾಗಿ ಪರಿಗಣಿಸಬಾರದು” ಎಂದು ಮನವಿ ಮಾಡಿದ್ದಾರೆ.

“ಪತ್ರವನ್ನು ಕೂಲಂಕಷವಾಗಿ ಓದುವುದರ ಜೊತೆಗೆ ತಮ್ಮ ಟ್ರಸ್ಟ್‌ ಮೂಲಕ ನಟ ಸೂರ್ಯ ನೂರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪೂರೈಸಲು ಹಾಗೂ ಅವರು ಉದ್ಯೋಗ ಪಡೆಯಲು ನೆರವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಕ್ರಮವಹಿಸಿದೆ ನಾವು ಔದಾರ್ಯ ಮತ್ತು ಉದಾರತೆ ತೋರುವ ಮೂಲಕ ಪ್ರಕರಣವನ್ನು ಇಲ್ಲಿಗೆ ಬಿಡುವುದು ಲೇಸು” ಎಂದು ನಿವೃತ್ತ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದು ಕಡೆ ನ್ಯಾಯಮೂರ್ತಿ ಎಸ್ ಎಂ ಸುಬ್ರಮಣ್ಯಂ ಅವರ ಪತ್ರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಟಿಎನ್‌ಎಎ “ನಟ ಸೂರ್ಯ ಅವರ ಹೇಳಿಕೆಯು ಖಂಡನಾರ್ಹವಾಗಿದ್ದು, ನ್ಯಾಯಾಂಗದ ಕಾರ್ಯವೈಖರಿಯನ್ನು ಕೆಳದರ್ಜೆಗೆ ಇಳಿಸುವಂತಿದೆ. ನ್ಯಾಯಮೂರ್ತಿಗಳನ್ನು ನಿಂದಿಸುವುದನ್ನು ಒಪ್ಪಿಕೊಳ್ಳಲಾಗದು… ಅವರ ವಿರುದ್ಧ ಶಿಸ್ತುಕ್ರಮ ಅಗತ್ಯವಾಗಿದೆ. ನ್ಯಾ. ಎಸ್ ಎಂ ಸುಬ್ರಮಣ್ಯಂ ಅವರು ಕೋರಿರುವಂತೆ ಕಾನೂನಿನ ಅನ್ವಯ ಸೂರ್ಯ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು” ಎಂದು ಹೇಳಲಾಗಿದೆ.

ಟಿಎನ್‌ ಎಎ ಅಧ್ಯಕ್ಷ ಹಿರಿಯ ವಕೀಲ ಎಸ್ ಪ್ರಭಾಕರನ್ ನೀಡಿರುವ ಹೇಳಿಕೆ ಇಂತಿದೆ.

“ಸಿನಿಮಾದಲ್ಲಿ ನಟಿಸುವುದು ಮತ್ತು ಚಿತ್ರ ಕತೆಗಾರರು ಬರೆದ ಕತೆಯನ್ನು ಯಥಾವತ್ತಾಗಿ ಹೇಳುವುದನ್ನು ಬಿಟ್ಟು ನಟ ಸೂರ್ಯ ಅವರಿಗೆ ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆ ಏನು ಗೊತ್ತಿದೆ ಎಂಬುದು ನನಗೆ ಆಶ್ಚರ್ಯ ತರಿಸಿದೆ. ರಾಜಕೀಯ ಪಕ್ಷಗಳು ಮತ್ತು ಸಂಬಂಧಿತ ಸರ್ಕಾರಗಳು ನ್ಯಾಯಾಲಯದ ಕಾರ್ಯವೈಖರಿಯ ಬಗ್ಗೆ ಟೀಕೆ ಮಾಡಿಲ್ಲ. ಬದಲಾಗಿ ಅವುಗಳು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿವೆ… ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದಲ್ಲೂ ನ್ಯಾಯಾಂಗವು ಅಂತಿಮವಾಗಿದ್ದು, ಪ್ರಜೆಯಾದ ನಟ ಸೂರ್ಯ ಅವರು ತಮ್ಮ ಹೇಳಿಕೆಯಲ್ಲಿ ನ್ಯಾಯಾಂಗದ ಬಗ್ಗೆ ಗೌರವ ಹೊಂದಿರಬೇಕು. ನ್ಯಾಯಾಂಗವು ಎಲ್ಲರ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಿದೆ…” ಎಂದು ಹೇಳಿದ್ದಾರೆ.

ನಟ ಸೂರ್ಯ ಅವರ ಎಲ್ಲೆ ಮೀರಿದ ಹೇಳಿಕೆಯು ದೇಶಾದ್ಯಂತ ಕೆಟ್ಟ ಸಂದೇಶ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸುಮ್ಮನೆ ಬಿಡಲಾಗದು. ಸೂರ್ಯ ಅವರು ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆ ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಟಿಎನ್‌ಎಎ ಆಗ್ರಹಿಸಿದೆ.