ಮುಂಬೈನಲ್ಲಿ 2006ರ ಜುಲೈ 11ರಂದು ನಡೆದಿದ್ದ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಶಕದ ಹಿಂದೆ ವಿಶೇಷ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಐವರು ಆರೋಪಿಗಳು ಹಾಗೂ ಜೀವಾವಧಿ ಸಜೆ ಅನುಭವಿಸುತ್ತಿದ್ದ ಉಳಿದ ಏಳು ಮಂದಿಯನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ಸಮಂಜಸ ಅನುಮಾನದಾಚೆಗೆ ಪ್ರಕರಣ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣ ವಿಫಲವಾಗಿದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ್ ಚಂದಕ್ ಅವರಿದ್ದ ವಿಶೇಷ ಪೀಠ ತಿಳಿಸಿತು.
ಬಹುತೇಕ ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಗಳು ವಿಶ್ವಾಸಾರ್ಹವಲ್ಲ ಎಂದ ಅದು ಸ್ಫೋಟ ನಡೆದ ಸುಮಾರು 100 ದಿನಗಳ ನಂತರ ಟ್ಯಾಕ್ಸಿ ಚಾಲಕರು ಅಥವಾ ರೈಲಿನಲ್ಲಿದ್ದ ಜನರು ಆರೋಪಿಗಳನ್ನು ನೆನಪಿನಲ್ಲಿಟ್ಟುಕೊಂಡಿರುವುದಿಲ್ಲ ಎಂದಿತು.
ಸ್ಫೋಟಕ್ಕೆ ಯಾವ ರೀತಿಯ ಬಾಂಬ್‌ಗಳನ್ನು ಬಳಸಲಾಗಿತ್ತು ಎಂಬುದನ್ನು ಗುರುತಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿರುವುದರಿಂದ, ಸ್ಫೋಟಕ್ಕೆ ಬಳಸಲಾದ ಬಾಂಬ್, ಬಂದೂಕು ಹಾಗೂ ನಕ್ಷೆಗಳನ್ನು ವಶಪಡಿಸಿಕೊಂಡಿರುವುದು ಅಪ್ರಸ್ತುತ ಮತ್ತು ಪ್ರಕರಣಕ್ಕೆ ಅದು ಮುಖ್ಯವಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹನ್ನೆರಡು ಆರೋಪಿಗಳಲ್ಲಿ ಒಬ್ಬರು 2021ರಲ್ಲಿ ಕೋವಿಡ್-19 ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ನ್ಯಾಯಾಲಯ ಜುಲೈ 2024ರಿಂದ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಜುಲೈ 11, 2006 ರಂದು ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದೇ ವೇಳೆ ಪಶ್ಚಿಮ ರೈಲ್ವೆ ಮಾರ್ಗದ ಉಪನಗರ ರೈಲುಗಳಲ್ಲಿ ಏಳು ಬಾಂಬ್‌ಗಳು ಸ್ಫೋಟಗೊಂಡು 189 ಮಂದಿ ಸಾವನ್ನಪ್ಪಿ 824 ಮಂದಿ ಗಾಯಗೊಂಡಿದ್ದರು.
ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯಡಿ (ಎಂಕೋಕಾ) ಸುದೀರ್ಘ ವಿಚಾರಣೆ ನಡೆದು, ವಿಶೇಷ ನ್ಯಾಯಾಲಯ 2015 ರ ಅಕ್ಟೋಬರ್‌ನಲ್ಲಿ ಐದು ಆರೋಪಿಗಳಿಗೆ ಮರಣದಂಡನೆ ಮತ್ತು ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಮಲ್ ಅನ್ಸಾರಿ, ಮೊಹಮ್ಮದ್ ಫೈಸಲ್ ಅತೌರ್ ರೆಹಮಾನ್ ಶೇಖ್, ಎಹ್ತೆಶಾಮ್ ಕುತುಬುದ್ದೀನ್ ಸಿದ್ದಿಕಿ, ನವೀದ್ ಹುಸೇನ್ ಖಾನ್ ಮತ್ತು ಆಸಿಫ್ ಖಾನ್ ಬಾಂಬ್ ಇರಿಸಿದ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಘೋಷಿಸಿ ಮರಣ ದಂಡನೆ ವಿಧಿಸಲಾಗಿತ್ತು.ಕಮಲ್ ಅನ್ಸಾರಿ 2021ರಲ್ಲಿ ನಾಗಪುರ ಜೈಲಿನಲ್ಲಿದ್ದಾಗ ಕೋವಿಡ್ ಸೋಂಕಿಗೆ ಬಲಿಯಾಗಿದ್ದ.
ಜೀವಾವಧಿ ಶಿಕ್ಷೆಗೊಳಗಾಗಿದ್ದ ಏಳು ಆರೋಪಿಗಳ ಹೆಸರು ಇಂತಿದೆ: ತನ್ವೀರ್ ಅಹ್ಮದ್ ಅನ್ಸಾರಿ, ಮೊಹಮ್ಮದ್ ಮಜೀದ್ ಶಫಿ, ಶೇಖ್ ಮೊಹಮ್ಮದ್ ಅಲಿ ಆಲಂ, ಮೊಹಮ್ಮದ್ ಸಾಜಿದ್ ಮಾರ್ಗುಬ್ ಅನ್ಸಾರಿ, ಮುಝಮ್ಮಿಲ್ ಅತೌರ್ ರೆಹಮಾನ್ ಶೇಖ್, ಸುಹೈಲ್ ಮೆಹಮೂದ್ ಶೇಖ್ ಮತ್ತು ಜಮೀರ್ ಅಹ್ಮದ್ ಲತೀಫರ್ ರೆಹಮಾನ್ ಶೇಖ್.
ಮರಣದಂಡನೆಯನ್ನು ಎತ್ತಿಹಿಡಿಯುವಂತೆ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇತ್ತ ತೀರ್ಪಿನ ವಿರುದ್ಧ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು.
2015 ರಿಂದ ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಉಳಿದಿತ್ತು. ಸಾಕ್ಷ್ಯಗಳ ಪ್ರಮಾಣವನ್ನು ಗಮನಿಸಿದರೆ ವಿಚಾರಣೆಗಳು ಕನಿಷ್ಠ ಐದರಿಂದ ಆರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು 2022ರಲ್ಲಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸುವಂತೆ ಪದೇ ಪದೇ ಮನವಿ ಮಾಡಿದ ಹಿನ್ನೆಲೆಯಲ್ಲಿ ನಿತ್ಯದ ಆಧಾರದಲ್ಲಿ ವಿಚಾರಣೆ ನಡೆಸಲು ಜುಲೈ 2024 ರಲ್ಲಿ ವಿಶೇಷ ಪೀಠ ರಚಿಸಲಾಗಿತ್ತು.
ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಎಸ್ ಮುರಳೀಧರ್ , ಯುಗ್ ಮೋಹಿತ್ ಚೌಧರಿ , ನಿತ್ಯ ರಾಮಕೃಷ್ಣನ್ ಮತ್ತು ಎಸ್ ನಾಗಮುತ್ತು ವಾದ ಮಂಡಿಸಿದ್ದರು. ಸರ್ಕಾರವನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜಾ ಠಾಕ್ರೆ ಪ್ರತಿನಿಧಿಸಿದ್ದರು.