ಕಾನೂನು ಸಚಿವ ರವಿಶಂಕರ್ ಪ್ರಸಾದ್ 
ಸುದ್ದಿಗಳು

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿನ 1,113 ನ್ಯಾಯಮೂರ್ತಿಗಳ ಪೈಕಿ 80 ಮಹಿಳಾ ನ್ಯಾಯಮೂರ್ತಿಗಳು: ಕಾನೂನು ಸಚಿವ

ನ್ಯಾಯಾಂಗದ ನೇಮಕಾತಿ ಶಿಫಾರಸಿನ ಸಂದರ್ಭದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Bar & Bench

ನ್ಯಾಯಾಂಗದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸುವ ಯಾವುದೇ ಉದ್ದೇಶ ಸದ್ಯಕ್ಕಿಲ್ಲ ಎಂಬ ಸೂಚನೆಯನ್ನು ಬುಧವಾರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ನೀಡಿದ್ದಾರೆ. ಆದರೆ, ನ್ಯಾಯಾಂಗದ ನೇಮಕಾತಿ ಶಿಫಾರಸಿನ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿನ 34 ನ್ಯಾಯಮೂರ್ತಿಗಳೂ ಸೇರಿದಂತೆ ದೇಶದ ವಿವಿಧ ಹೈಕೋರ್ಟ್‌ನಲ್ಲಿನ ಒಟ್ಟಾರೆ 1,113 ನ್ಯಾಯಮೂರ್ತಿಗಳು ಇದ್ದಾರೆ. ಈ ಪೈಕಿ 80 ಮಹಿಳಾ ನ್ಯಾಯಮೂರ್ತಿಗಳಿದ್ದು, ಒಟ್ಟಾರೆ ನ್ಯಾಯಮೂರ್ತಿಗಳ ಪೈಕಿ ಮಹಿಳಾ ನ್ಯಾಯಮೂರ್ತಿಗಳ ಪಾಲು ಶೇ.7.9 ಎಂದು ಕಾನೂನು ಸಚಿವರು ಉತ್ತರಿಸಿದ್ದಾರೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌, ನ್ಯಾಯಾಧಿಕರಣ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಎಷ್ಟು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಲಾಗಿದೆ.

Number of Female Judges out of the Sanctioned Strength of Judges, as per the Law Minister's reply

ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮೀಸಲಾತಿ ಜಾರಿಗೊಳಿಸುವ ಉದ್ದೇಶವಿದೆಯೇ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರವು ಹೀಗೆ ಹೇಳಿದೆ.

“ಭಾರತ ಸಂವಿಧಾನದ ಪರಿಚ್ಛೇದ 217 ಮತ್ತು 224ರ ಅಡಿ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕ ಮಾಡಲಾಗುತ್ತದೆ. ಮಹಿಳೆಯರೂ ಸೇರಿದಂತೆ ಯಾವುದೇ ಜಾತಿ ಅಥವಾ ವರ್ಗದ ಜನರಿಗೆ ಈ ಪರಿಚ್ಛೇದಗಳಡಿ ಮೀಸಲಾತಿ ಇಲ್ಲ. ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಶಿಫಾರಸು ಮಾಡುವಾಗ ಅರ್ಹರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಲಾಗಿದೆ.”
ರವಿಶಂಕರ್ ಪ್ರಸಾದ್, ಕೇಂದ್ರ ಕಾನೂನು ಸಚಿವರು

ಸೆಪ್ಟೆಂಬರ್ 1, 2020ರ ವರೆಗೆ ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯ ಇಂತಿದೆ ಎಂದು ಕಾನೂನು ಸಚಿವರು ಹೇಳಿದ್ದಾರೆ.

  • ಸುಪ್ರೀಂ ಕೋರ್ಟ್‌ನಲ್ಲಿ ಇಬ್ಬರು ಮಹಿಳಾ ನ್ಯಾಯಮೂರ್ತಿಗಳು

  • ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 78 ಮಹಿಳಾ ನ್ಯಾಯಮೂರ್ತಿಗಳು

  • ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅತಿ ಹೆಚ್ಚು ಮಹಿಳಾ ನ್ಯಾಯಮೂರ್ತಿಗಳಿದ್ದು, 85 ನ್ಯಾಯಮೂರ್ತಿಗಳ ಪೈಕಿ 11 ಮಂದಿ ಮಹಿಳೆಯರು ನ್ಯಾಯಮೂರ್ತಿಗಳಾಗಿದ್ದಾರೆ. ಮದ್ರಾಸ್ ಹೈಕೋರ್ಟ್‌ನ 75 ನ್ಯಾಯಮೂರ್ತಿಗಳ ಪೈಕಿ 9 ಮಂದಿ ಮಹಿಳಾ ನ್ಯಾಯಮೂರ್ತಿಗಳು.

ಕಾನೂನು ಸಚಿವರ ಪ್ರತಿಕ್ರಿಯೆಯಂತೆ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿರುವ ಮಹಿಳಾ ನ್ಯಾಯಮೂರ್ತಿಗಳ ವಿವರ ಇಂತಿದೆ.

  • ಅಲಹಾಬಾದ್‌: 160 ಮಂದಿಯ ಪೈಕಿ 6 ಮಂದಿ ಮಹಿಳಾ ನ್ಯಾಯಮೂರ್ತಿಗಳು

  • ಆಂಧ್ರ ಪ್ರದೇಶ: 37 ಮಂದಿಯ ಪೈಕಿ 4 ಮಂದಿ ಮಹಿಳಾ ನ್ಯಾಯಮೂರ್ತಿಗಳು

  • ಬಾಂಬೆ: 94 ಮಂದಿಯ ಪೈಕಿ 8 ಮಂದಿ ಮಹಿಳಾ ನ್ಯಾಯಮೂರ್ತಿಗಳು

  • ಕಲ್ಕತ್ತಾ: 72 ಮಂದಿಯ ಪೈಕಿ 5 ಮಂದಿ ಮಹಿಳಾ ನ್ಯಾಯಮೂರ್ತಿಗಳು

  • ಚತ್ತೀಸಗಢ: 22 ಮಂದಿಯ ಪೈಕಿ ಇಬ್ಬರು ಮಂದಿ ಮಹಿಳಾ ನ್ಯಾಯಮೂರ್ತಿಗಳು

  • ದೆಹಲಿ: 60 ಮಂದಿಯ ಪೈಕಿ 8 ಮಂದಿ ಮಹಿಳಾ ನ್ಯಾಯಮೂರ್ತಿಗಳು

  • ಗುವಾಹಟಿ: 24 ಮಂದಿಯ ಪೈಕಿ ಒಬ್ಬರು ಮಹಿಳಾ ನ್ಯಾಯಮೂರ್ತಿ

  • ಗುಜರಾತ್: 52 ಮಂದಿಯ ಪೈಕಿ 4 ಮಹಿಳಾ ನ್ಯಾಯಮೂರ್ತಿಗಳು

  • ಹಿಮಾಚಲ ಪ್ರದೇಶ: 13 ಮಂದಿಯ ಪೈಕಿ ಒಬ್ಬರು ಮಹಿಳಾ ನ್ಯಾಯಮೂರ್ತಿ

  • ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್: 17 ಮಂದಿಯ ಪೈಕಿ ಒಬ್ಬರು ಮಹಿಳಾ ನ್ಯಾಯಮೂರ್ತಿ

  • ಜಾರ್ಖಂಡ್: 25 ಮಂದಿಯ ಪೈಕಿ ಒಬ್ಬರು ಮಹಿಳಾ ನ್ಯಾಯಮೂರ್ತಿ

  • ಕರ್ನಾಟಕ: 62 ಮಂದಿಯ ಪೈಕಿ ಐವರು ಮಹಿಳಾ ನ್ಯಾಯಮೂರ್ತಿಗಳು

  • ಕೇರಳ: 47 ಮಂದಿಯ ಪೈಕಿ ಐವರು ಮಹಿಳಾ ನ್ಯಾಯಮೂರ್ತಿಗಳು

  • ಮಧ್ಯ ಪ್ರದೇಶ: 53 ಮಂದಿಯ ಪೈಕಿ ಮೂವರು ಮಹಿಳಾ ನ್ಯಾಯಮೂರ್ತಿಗಳು

  • ಮದ್ರಾಸ್: 75 ಮಂದಿಯ ಪೈಕಿ 9 ಮಹಿಳಾ ನ್ಯಾಯಮೂರ್ತಿಗಳು

  • ಒಡಿಶಾ: 27 ಮಂದಿಯ ಪೈಕಿ ಇಬ್ಬರು ಮಹಿಳಾ ನ್ಯಾಯಮೂರ್ತಿಗಳು

  • ರಾಜಸ್ಥಾನ: 80 ಮಂದಿಯ ಪೈಕಿ ಒಬ್ಬರು ಮಹಿಳಾ ನ್ಯಾಯಮೂರ್ತಿ

  • ಸಿಕ್ಕಿಂ: 3 ನ್ಯಾಯಮೂರ್ತಿಗಳ ಪೈಕಿ ಒಬ್ಬರು ಮಹಿಳಾ ನ್ಯಾಯಮೂರ್ತಿ

  • ಐವರು ಸದಸ್ಯ ಬಲದ ಮಣಿಪುರ ಹೈಕೋರ್ಟ್‌ನಲ್ಲಿ ಒಬ್ಬರೇ ಒಬ್ಬರು ಮಹಿಳಾ ನ್ಯಾಯಮೂರ್ತಿಯೂ ಇಲ್ಲ

  • ನಾಲ್ವರು ಸದಸ್ಯ ಬಲದ ಮೇಘಾಲಯ ಹೈಕೋರ್ಟ್‌ನಲ್ಲಿ ಒಬ್ಬರೇ ಒಬ್ಬರು ಮಹಿಳಾ ನ್ಯಾಯಮೂರ್ತಿಯೂ ಇಲ್ಲ

  • ನಾಲ್ವರು ಸದಸ್ಯ ಬಲದ ತ್ರಿಪುರ ಹೈಕೋರ್ಟ್‌ನಲ್ಲಿ ಒಬ್ಬರೇ ಒಬ್ಬರು ಮಹಿಳಾ ನ್ಯಾಯಮೂರ್ತಿಯೂ ಇಲ್ಲ

  • 53 ಸದಸ್ಯ ಬಲದ ಪಟ್ನಾ ಹೈಕೋರ್ಟ್‌ನಲ್ಲಿ ಒಬ್ಬರೇ ಒಬ್ಬರು ಮಹಿಳಾ ನ್ಯಾಯಮೂರ್ತಿಯೂ ಇಲ್ಲ

  • 24 ಸದಸ್ಯ ಬಲದ ತೆಲಂಗಾಣ ಹೈಕೋರ್ಟ್‌ನಲ್ಲಿ ಒಬ್ಬರೇ ಒಬ್ಬರು ಮಹಿಳಾ ನ್ಯಾಯಮೂರ್ತಿಯೂ ಇಲ್ಲ

  • 11 ಸದಸ್ಯ ಬಲದ ಉತ್ತರಾಖಂಡ ಹೈಕೋರ್ಟ್‌ನಲ್ಲಿ ಒಬ್ಬರೇ ಒಬ್ಬರು ಮಹಿಳಾ ನ್ಯಾಯಮೂರ್ತಿಯೂ ಇಲ್ಲ

ನ್ಯಾಯಾಧಿಕರಣ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ಮಾಹಿತಿಯು ಕ್ರಮವಾಗಿ ಸಚಿವಾಲಯ/ಇಲಾಖೆಗಳ ಹಾಗೂ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಅವುಗಳ ಕೇಂದ್ರೀಕೃತ ದತ್ತಾಂಶ ಕೇಂದ್ರ ಸರ್ಕಾರದ ಬಳಿ ಇಲ್ಲ ಎಂದು ಸಚಿವರು ಉತ್ತರಿಸಿದ್ದಾರೆ.