ಇಂಗ್ಲೆಂಡ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ಮೂಲಕ ಭಾರತೀಯ ನ್ಯಾಯಿಕ ವ್ಯವಸ್ಥೆಗೆ ಅಪಕೀರ್ತಿ ಉಂಟು ಮಾಡುವ ಕೆಲಸವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಾಟ್ಜು ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿದಾರರಾದ ನಂದ್ ಕಿಶೋರ್ ಗಾರ್ಗ್ ಅವರು ವಕೀಲ ಶಶಾಂಕ್ ದಿಯೋ ಸುಧಿ ಅವರ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದು, “ಇಂಗ್ಲೆಂಡ್‌ನ ವಿದೇಶಿ ನ್ಯಾಯಾಲಯವಾದ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೆಸಿ ಸಮ್ಮುಖದಲ್ಲಿ ಖಾಟ್ಜು ಅವರು ಸಾಕ್ಷ್ಯ ನುಡಿಯುವಾಗ ಮಾನಹಾನಿ ಆರೋಪಗಳ ಮೂಲಕ ಭಾರತದ ನ್ಯಾಯಾಂಗದ ಚಿತಾವಣೆ ನಡೆಸಿದ್ದಾರೆ.” ಈ ಮೂಲಕ ಭಾರತದ ನ್ಯಾಯಿಕ ವ್ಯವಸ್ಥೆಯ ವರ್ಚಸ್ಸು ಕುಂದಿಸುವ ಕೆಲಸ ಮಾಡಿದ್ದಾರೆ ಎಂದು ವಿವರಿಸಲಾಗಿದೆ.
ಸುಸ್ತಿದಾರ ಉದ್ಯಮಿ ನೀರವ್ ಮೋದಿ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗೆ ಇಂಗ್ಲೆಂಡ್ ನ್ಯಾಯಾಲಯದಲ್ಲಿ ನಿವೃತ್ತ ನ್ಯಾಯಮೂರ್ತಿ ಖಾಟ್ಜು ಅವರು ಸಾಕ್ಷ್ಯ ನುಡಿದಿದ್ದಾರೆ. ಭಾರತದಲ್ಲಿ ನೀರವ್ ಮೋದಿಯನ್ನು ನ್ಯಾಯಸಮ್ಮತವಾದ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಕಡಿಮೆ. ಅವರನ್ನು “ಅನುಕೂಲಕರ ಬಲಿಪಶು”ವನ್ನಾಗಿಸುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
“ಸಾಕ್ಷ್ಯ ನುಡಿಯುವ ಸಂದರ್ಭದಲ್ಲಿ ಖಾಟ್ಜು ಅವರು ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ನಿಂದನಾತ್ಮಕ ಮತ್ತು ಅವಮಾನಕರವಾದ ರೀತಿಯಲ್ಲಿ ಬಿಂಬಿಸಿದ್ದಾರೆ. ಖಾಟ್ಜು ಅವರ ಆರೋಪವು ಲಕ್ಷಾಂತರ ಜನರು ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇಟ್ಟಿರುವ ನಂಬಿಕೆ ಮತ್ತು ಭರವಸೆಯ ವಿಶ್ವಾಸಾರ್ಹತೆ ಪ್ರಶ್ನಿಸುವುದಕ್ಕೆ ಸಮನಾಗಿದೆ.”
“ದೇಶಭ್ರಷ್ಟ ಆರೋಪಿಯನ್ನು ರಕ್ಷಿಸುವ ಉದ್ದೇಶದಿಂದ ಮಾನಹಾನಿಕಾರವಾದ ಗಂಭೀರವಾದ ಆರೋಪಗಳನ್ನು ಮಾಡಿ ಸಾಕ್ಷಿ ನುಡಿಯಲಾಗಿದ್ದು, ನಮ್ಮ ನ್ಯಾಯಾಂಗ ವ್ಯವಸ್ಥೆಯ ವರ್ಚಸ್ಸಿಗೆ ಕುಂದುಂಟು ಮಾಡಲಾಗಿದೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅನುಮಾನ ಸೃಷ್ಟಿಯಾಗುವ ರೀತಿಯಲ್ಲಿ ನಿಂದನಾತ್ಮಕ ಸಾಕ್ಷ್ಯ ನುಡಿದಿರುವ ಸದರಿ ಪ್ರಕರಣವನ್ನು ಭಾರತದ ನ್ಯಾಯಾಂಗವು ಸರಳವಾಗಿ ಪರಿಗಣಿಸಬಾರದು” ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಖಾಟ್ಜು ವಿರುದ್ಧ ಕಾನೂನು ಕ್ರಮದ ಜೊತೆಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷಾಧಿಕಾರ ಸಮಿತಿ ರಚಿಸುವ ಮೂಲಕ ನಿವೃತ್ತ ನ್ಯಾಯಮೂರ್ತಿ ನೀಡಿರುವ ಅವಮಾನಕರ ಹೇಳಿಕೆಗಳನ್ನು ಪರಿಶೀಲಿಸಬೇಕಿದೆ. ಹಿಂದೆ ಭಾರತದ ನ್ಯಾಯಾಂಗದ ಭಾಗವಾಗಿದ್ದವರು ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗದ ಬಗ್ಗೆ ಸಾರ್ವಜನಿಕವಾಗಿ ಟೀಕೆ ಮಾಡುವುದಕ್ಕೆ ಸಂಬಂಧಿಸಿದಂತೆ ವಿಸ್ತೃತ ಮಾರ್ಗಸೂಚಿ ರೂಪಿಸಬೇಕು. ವಿದೇಶಿ ನ್ಯಾಯಾಲಯಗಳಲ್ಲಿ ನೀಡುವ ಹೇಳಿಕೆ ಮತ್ತು ಸಾಕ್ಷ್ಯ ನುಡಿಯುವುದಕ್ಕೆ ಸಂಬಂಧಿಸಿದಂತೆಯೂ ವಿಸ್ತೃತ ಮಾರ್ಗಸೂಚಿ ರೂಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.