Money-prison 
ಸುದ್ದಿಗಳು

ಮೂರು ದಶಕಗಳ ಹಿಂದೆ ₹ 100 ಲಂಚ ಸ್ವೀಕಾರ: 82 ವರ್ಷದ ನಿವೃತ್ತ ಉದ್ಯೋಗಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ತಮ್ಮ ವಯಸ್ಸನ್ನು ಉಲ್ಲೇಖಿಸಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಅಪರಾಧಿ ಕೇಳಿದರೂ ಮೃದು ಧೋರಣೆ ತಳೆಯಲು ನ್ಯಾಯಾಲಯ ನಿರಾಕರಿಸಿತು.

Bar & Bench

ಮೂರು ದಶಕಗಳ ಹಿಂದೆ ಅಂದರೆ 1991ರಲ್ಲಿ ₹100 ಲಂಚ ಸ್ವೀಕರಿಸಿದ್ದಕ್ಕಾಗಿ 82 ವರ್ಷದ ನಿವೃತ್ತ ರೈಲ್ವೆ ಉದ್ಯೋಗಿಗೆ ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ತಮ್ಮ ವಯಸ್ಸನ್ನು ಉಲ್ಲೇಖಿಸಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಅಪರಾಧಿ ಕೇಳಿದರೂ ಮೃದು ಧೋರಣೆ ತಳೆಯಲು ವಿಶೇಷ ನ್ಯಾಯಾಧೀಶ ಅಜಯ್ ವಿಕ್ರಮ್ ಸಿಂಗ್ ನಿರಾಕರಿಸಿದರು. ಪ್ರಕರಣದಲ್ಲಿ ಮೃದು ಧೋರಣೆ ತಳೆದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

ಘಟನೆ 32 ವರ್ಷಗಳ ಹಿಂದೆ ನಡೆದಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗುವ ಮುನ್ನ ಎರಡು ದಿನ ಜೈಲಿನಲ್ಲಿ ಕಳೆದಿದ್ದೇನೆ ಎಂದು ಅಪರಾಧಿ ರಾಮ್ ನಾರಾಯಣ ವರ್ಮಾ ನ್ಯಾಯಾಲಯಕ್ಕೆ ತಿಳಿಸಿದರು. ಶಿಕ್ಷೆಯನ್ನು ಈಗಾಗಲೇ ಜೈಲಿನಲ್ಲಿ ಕಳೆದಿರುವ ಸಮಯಕ್ಕೆ ಸೀಮಿತಗೊಳಿಸಬೇಕು. ತನ್ನನ್ನು ಉಳಿದ ಶಿಕ್ಷೆಗೆ ಗುರಿಪಡಿಸಬಾರದು ಎಂದು ಅವರು ಪ್ರಾರ್ಥಿಸಿದರು.

ಅಪರಾಧಿಯ ಸ್ಥಿತಿ, ನೊಂದವರ ಹಿತ ಹಾಗೂ ಸಮಾಜದ ಮೇಲಿನ ಪರಿಣಾಮಗಳನ್ನು ಪರಿಗಣಿಸಿದ ನ್ಯಾಯಾಲಯ ಎರಡು ದಿನಗಳ ಜೈಲುವಾಸ ಸಾಲದು. ಒಂದು ವರ್ಷ ಸೆರೆವಾಸದಿಂದ ನ್ಯಾಯದ ಉದ್ದೇಶ ಈಡೇರುತ್ತದೆ ಎಂದು ನಿರ್ಧರಿಸಿ ಮನವಿಯನ್ನು ನಿರಾಕರಿಸಿತು.

ಶಿಕ್ಷೆ ವಿಧಿಸುವಾಗ ಆರೋಪಿಯ ಸ್ಥಿತಿ, ನೊಂದವರ ಹಿತ ಹಾಗೂ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನು ಪರಿಗಣಿಸಿ ಈ ಮೂರು ಅಂಶಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

ವರ್ಮಾ ವಿರುದ್ಧ ಉತ್ತರ  ರೈಲ್ವೆಯ ನಿವೃತ್ತ ಲೋಕೋ ಡ್ರೈವರ್ ರಾಮ್ ಕುಮಾರ್ ತಿವಾರಿ 1992ರಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಪಿಂಚಣಿ ಲೆಕ್ಕಾಚಾರಕ್ಕಾಗಿ ವೈದ್ಯಕೀಯ ಪರೀಕ್ಷೆ ನಡೆಸಲು ₹ 150 ಲಂಚ ನೀಡುವಂತೆ ವರ್ಮಾ ತಿವಾರಿ ಅವರನ್ನು ಕೇಳಿದ್ದರು. ತಿವಾರಿ ಅವರು ₹ 50 ಪಾವತಿಸಿ ಉಳಿದ ಹಣವನ್ನು ಕೆಲ ದಿನಗಳಲ್ಲಿ ನೀಡುವುದಾಗಿ ತಿಳಿಸಿದ್ದರು. ಆದರೆ ಬಾಕಿ ಹಣ ಪಾವತಿಸಲು ಬಯಸದ ತಿವಾರಿ ದೂರು ದಾಖಲಿಸಿದರು. ವರ್ಮಾ ₹ 100 ಲಂಚ ಸ್ವೀಕರಿಸುವಾಗಲೇ ಸಿಬಿಐ ಅಧಿಕಾರಿಗಳಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು.