ಎಡಿಜಿಪಿ ಅಲೋಕ್‌ ಕುಮಾರ್‌ರಿಂದ ₹1 ಕೋಟಿ ಲಂಚ ಬೇಡಿಕೆ: ಲೋಕಾಯುಕ್ತ ಪೊಲೀಸರ ʼಬಿʼ ವರದಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

ಹಾಲಿ ಪ್ರಕರಣವನ್ನು ಮತ್ತೆ ತನಿಖೆ ನಡೆಸಲು ಆದೇಶಿಸಿದರೆ ಸಂಬಂಧಿತ ತನಿಖಾ ಸಂಸ್ಥೆಯು ಅಂತಿಮ ವರದಿ ಸಲ್ಲಿಸಲು ಉದ್ದೇಶಪೂರ್ವಕವಾಗಿ ವಿಳಂಬ ತಂತ್ರ ಅನುಸರಿಸುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿರುವ ನ್ಯಾಯಾಲಯ.
Additional Director General of Police, Law & Order, Alok Kumar
Additional Director General of Police, Law & Order, Alok KumarTwitter

ಬೆಂಗಳೂರಿನ ವಯ್ಯಾಲಿಕಾವಲ್‌ನ ಬಾರ್‌ ಮತ್ತು ರೆಸ್ಟೊರೆಂಟ್‌ನಲ್ಲಿ ನಡೆದಿದ್ದ ಗಲಾಟೆ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಸೇರಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ವರದಿಯನ್ನು ವಿಶೇಷ ನ್ಯಾಯಾಲಯವು ಈಚೆಗೆ ತಿರಸ್ಕರಿಸಿದೆ.

ಬೆಂಗಳೂರಿನ ಮಾಹಿತಿದಾರ/ದೂರುದಾರ ಬಿ ಎಂ ಮಲ್ಲಿಕಾರ್ಜುನ್‌ ಅವರು ಲೋಕಾಯುಕ್ತ ಬೆಂಗಳೂರು ವಿಭಾಗದ ತನಿಖಾಧಿಕಾರಿಯಾದ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೊಹಮ್ಮದ್‌ ಮುಖರಾಮ್‌ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಬಿ ವರದಿಗೆ ಆಕ್ಷೇಪಿಸಿ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ ಭಟ್‌ ಅವರು ಪುರಸ್ಕರಿಸಿದ್ದಾರೆ.

“ಲೋಕಾಯುಕ್ತ ಪೊಲೀಸ್‌ ಸಲ್ಲಿಸಿರುವ 'ಬಿ' ವರದಿಯನ್ನು ತಿರಸ್ಕರಿಸಲಾಗಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 7, 13(1)(ಡಿ) ಜೊತೆಗೆ ಸೆಕ್ಷನ್‌ 13(2) ಅಡಿಯ ಅಪರಾಧಕ್ಕಾಗಿ ಅಲೋಕ್‌ ಕುಮಾರ್‌, ಅಂದಿನ ಸಹಾಯಕ ಪೊಲೀಸ್‌ ಆಯುಕ್ತ ದಾನೇಶ್ವರ್‌ ರಾವ್‌, ವಯ್ಯಾಲಿಕಾವಲ್‌ ಠಾಣೆಯ ಅಂದಿನ ಪೊಲೀಸ್‌ ಇನ್‌ಸ್ಪೆಕ್ಟರ್‌ ಶಂಕರಾಚಾರಿ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ ಚಂದ್ರು ಅಲಿಯಾಸ್‌ ಚಂದ್ರಶೇಖರ್‌ ಅವರ ವಿರುದ್ಧ ಸಂಜ್ಞೇಯ ಅಪರಾಧ ಪರಿಗಣಿಸಲಾಗಿದೆ.  ದೂರುದಾರ ಮಲ್ಲಿಕಾರ್ಜುನ್‌ ಅವರು 2023ರ ಜನವರಿ 31ರಂದು ನ್ಯಾಯಾಲಯದ ಮುಂದೆ ಹಾಜರಾಗಿ ದೃಢೀಕೃತ ಹೇಳಿಕೆ ದಾಖಲಿಸಲು ಅನುಮತಿಸಲಾಗಿದೆ” ಎಂದು ನ್ಯಾಯಾಲಯ ಆದೇಶ ಮಾಡಿದೆ.

“ಶಂಕರಾಚಾರಿ ಮತ್ತು ದಾನೇಶ್ವರ್‌ ರಾವ್‌ ಅವರಿಗೆ ಐದು ಲಕ್ಷ ರೂಪಾಯಿ ಲಂಚ ನೀಡಿರುವುದಾಗಿ ಮಲ್ಲಿಕಾರ್ಜುನ್‌ ಮಾಡಿರುವ ಆರೋಪ ಸಾಬೀತುಪಡಿಸಲು ದೃಢೀಕೃತ ದಾಖಲೆಗಳು ಇಲ್ಲ. ಲಂಚಕ್ಕೆ ಬೇಡಿಕೆ ಮತ್ತು ಅದನ್ನು ಪಡೆದಿರುವುದಕ್ಕೆ ಸಾಕ್ಷ್ಯವಿಲ್ಲ. ಇದನ್ನು ಸಾಬೀತುಪಡಿಸಲು ಸೂಕ್ತ ದೃಢೀಕೃತ ದಾಖಲೆ ಒದಗಿಸಲು ಮಲ್ಲಿಕಾರ್ಜುನ್‌ ವಿಫಲರಾಗಿದ್ದಾರೆ ಎಂದು ತನಿಖಾಧಿಕಾರಿಯು ಹಾಲಿ ಪ್ರಕರಣದಲ್ಲಿ ಬಿ ವರದಿ ಸಲ್ಲಿಸುವುದಕ್ಕೆ ಕಾರಣ ನೀಡಿದ್ದಾರೆ. ಇಲ್ಲಿ ತನಿಖಾಧಿಕಾರಿಯು ಪುಟ್ಟೇಗೌಡ (ವಯ್ಯಾಲಿಕಾವಲ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಗೂ ಮಲ್ಲಿಕಾರ್ಜುನ್‌ ಸಂಬಂಧಿ) ಅವರು ತನಿಖೆಯ ಸಂದರ್ಭದಲ್ಲಿ ನೀಡಿರುವ ಹೇಳಿಕೆಯನ್ನು ನಂಬಿಲ್ಲ. ಪುಟ್ಟೇಗೌಡ ಹೇಳಿಕೆ ದೃಢೀಕರಿಸಲಾಗಿಲ್ಲ ಎಂದು ಬಿ ವರದಿಯಲ್ಲಿ ಹೇಳಿರುವುದು ಸಮರ್ಥನೀಯವಲ್ಲ. ನೇರ ಸಾಕ್ಷ್ಯ ಲಭ್ಯ ಇರುವಾಗ ಅದನ್ನು ದೃಢೀಕರಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ತನಿಖಾಧಿಕಾರಿಯು ಬಿ ವರದಿಯಲ್ಲಿ ನೀಡಿರುವಾಗ ಕಾರಣಗಳು ನೋಡಿದರೆ ಲಭ್ಯವಿರುವ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡುವುದಕ್ಕೆ ಬದಲಾಗಿ ತನಿಖಾಧಿಕಾರಿಯು ಆರೋಪಿಗಳನ್ನು ರಕ್ಷಿಸಲು ಮುಂದಾಗಿದ್ದಾರೆ ಎಂದು ತೋರುತ್ತದೆ. ಅಂತಿಮವಾಗಿ ಬಿ ವರದಿಯಲ್ಲಿ ಬಾರ್‌ ಮತ್ತು ರೆಸ್ಟೊರೆಂಟ್‌ನಲ್ಲಿ ನಡೆದಿರುವ ಘಟನೆಯಲ್ಲಿ ದೂರುದಾರ ಮಲ್ಲಿಕಾರ್ಜುನ್‌ ಭಾಗಿಯಾಗಿರುವ ಕುರಿತು ವಿಸ್ತೃತವಾಗಿ ಉಲ್ಲೇಖಿಸಲಾಗಿದೆ. ಆದರೆ, ಆ ಪ್ರಕರಣವು ಹಾಲಿ ಲಂಚ ಬೇಡಿಕೆ ಮತ್ತು ಅದನ್ನು ಪಡೆದಿರುವುದಕ್ಕೆ ಯಾವುದೇ ರೀತಿಯಲ್ಲೂ ಪ್ರತ್ಯಕ್ಷ ಮತ್ತು ಪರೋಕ್ಷ ಸಂಪರ್ಕ ಹೊಂದಿಲ್ಲ. ಹೀಗಾಗಿ, ಗಲಾಟೆ ಪ್ರಕರಣವು ಯಾವ ರೀತಿಯಲ್ಲಿಯೂ ಹಾಲಿ ಪ್ರಕರಣದಲ್ಲಿ ಪರಿಣಾಮ ಉಂಟು ಮಾಡುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

“ಆರೋಪಿತ ಪೊಲೀಸ್‌ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ಅದನ್ನು ಪಡೆದಿರುವ ಕುರಿತು ದೂರುದಾರ ಮಲ್ಲಿಕಾರ್ಜುನ ಸಾಬೀತಪಡಿಸಬಲ್ಲರೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಇದೆ. ತನಿಖಾಧಿಕಾರಿ ಸಲ್ಲಿಸಿರುವ ಬಿ ವರದಿಯು ಪೂರ್ಣ ಪ್ರಮಾಣದಲ್ಲಿ ನ್ಯಾಯಯುತವಾಗಿಲ್ಲ. ಮಲ್ಲಿಕಾರ್ಜುನ್‌ ಮತ್ತು ಸಾಕ್ಷಿಯ ಹೇಳಿಕೆ ಹಾಗೂ ರೆಕಾರ್ಡ್‌ ಮಾಡಿಕೊಂಡಿರುವ ಸಂಭಾಷಣೆಯನ್ನು ಪರಿಗಣಿಸಿದಾಗ ಮೇಲ್ನೋಟಕ್ಕೆ ಆರೋಪಿ ಪೊಲೀಸ್‌ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಮತ್ತು ಅದನ್ನು ಸ್ವೀಕರಿಸುವುದಕ್ಕೆ ಪೂರಕ ದಾಖಲೆಗಳು ಕಾಣಿಸುತ್ತಿವೆ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ಅಲ್ಲದೇ, “ಬಿ ವರದಿಯನ್ನು ಬದಿಗೆ ಸರಿಸಬೇಕು. ಆರೋಪಿತ ಪೊಲೀಸ್‌ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವ ಸಂಬಂಧ ತಮ್ಮ ದೃಢೀಕೃತ ಹೇಳಿಕೆ ದಾಖಲಿಸಲು ಅವಕಾಶ ಕಲ್ಪಿಸುವಂತೆ ಪ್ರತಿಭಟನಾ ಅರ್ಜಿಯಲ್ಲಿ ಮಲ್ಲಿಕಾರ್ಜುನ್‌ ಕೋರಿದ್ದಾರೆ. ಬಿ ವರದಿ ಪರಿಗಣಿಸಿದ ಬಳಿಕ ಮೇಲ್ನೋಟಕ್ಕೆ ತನಿಖೆಯನ್ನು ನ್ಯಾಯಯುತವಾಗಿ ನಡೆಸಿಲ್ಲ ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿದೆ. ಪ್ರಥಮ ಮಾಹಿತಿ ಹೇಳಿಕೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ಪರಿಗಣಿಸಲು ತನಿಖೆ ಮತ್ತು ಜಪ್ತಿ ಮಹಜರ್‌ ಸಂದರ್ಭದಲ್ಲಿ ಕೆಲವು ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿರುವುದು ಇಲ್ಲಿ ಪ್ರಸ್ತುತವಾಗಿದೆ. ಬಿ ವರದಿ ಸಲ್ಲಿಸಲು ನಿರ್ಧರಿಸುವುದಕ್ಕೆ ತನಿಖಾಧಿಕಾರಿ ನೀಡಿರುವುದು ಸಕಾರಣಗಳಲ್ಲ. ಹೀಗಾಗಿ, ತನಿಖಾಧಿಕಾರಿಯು ಬಿ ವರದಿ ಸಲ್ಲಿಸಲು ನೀಡಿರುವ ಕಾರಣಗಳನ್ನು ತಿರಸ್ಕರಿಸಲಾಗಿದೆ” ಎಂದು ಆದೇಶದಲ್ಲಿ ಹೇಳಿದೆ.

“2015ರ ಮೇ 30ರಂದು ಮಲ್ಲಿಕಾರ್ಜುನ್‌ ನೀಡಿರುವ ಪ್ರಥಮ ಮಾಹಿತಿ ಹೇಳಿಕೆಯ ಸತ್ಯಾಸತ್ಯತೆ ಅರಿಯಲು ಮತ್ತು ಅವರು ಸಲ್ಲಿಸಿರುವ ಪ್ರತಿಭಟನಾ ಅರ್ಜಿಯಲ್ಲಿನ ಆರೋಪಗಳನ್ನು ಸಾಬೀತುಪಡಿಸಲು ಅವರಿಗೆ ಅವಕಾಶ ನೀಡಬೇಕಿದೆ. ರೆಕಾರ್ಡ್‌ ಮಾಡಲಾಗಿರುವ ವಿಚಾರಗಳು ಮತ್ತು ದಾಖಲೆಯಲ್ಲಿ ಲಭ್ಯವಿರುವ ಇತರೆ ವಿಚಾರಗಳು ಆರೋಪಿ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಂಜ್ಞೇ ಅಪರಾಧ ಪರಿಗಣಿಸಲು ಯೋಗ್ಯ ಆಧಾರಗಳಾಗಿವೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಹಾಲಿ ಪ್ರಕರಣವನ್ನು ಮತ್ತೆ ತನಿಖೆ ನಡೆಸಲು ಆದೇಶಿಸಿದರೆ ಸಂಬಂಧಿತ ತನಿಖಾ ಸಂಸ್ಥೆಯು ಅಂತಿಮ ವರದಿ ಸಲ್ಲಿಸಲು ಉದ್ದೇಶಪೂರ್ವಕವಾಗಿ ವಿಳಂಬ ತಂತ್ರ ಅನುಸರಿಸುವ ಸಾಧ್ಯತೆ ಇದೆ. 2015ರ ಜೂನ್‌ 15ರಂದು ಪ್ರಕರಣ ದಾಖಲಾಗಿದ್ದರೂ ಲೋಕಾಯುಕ್ತ ಪೊಲೀಸರು ಬಿ ವರದಿ ಸಲ್ಲಿಸಲು ಏಳು ವರ್ಷ ತೆಗೆದುಕೊಂಡಿದ್ದು, 2022ರ ಮಾರ್ಚ್‌ 19ರಂದು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ” ಎಂದು ಪೀಠವು ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

“ಬಿ ವರದಿ ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿರುವ ಪ್ರತಿಭಟನಾ ಅರ್ಜಿಯನ್ನು ಸಿಆರ್‌ಪಿಸಿ ಸೆಕ್ಷನ್‌ 2(ಡಿ) ಮತ್ತು 200ರ ಅಡಿ ದೂರು ಎಂದು ಪರಿಗಣಿಸಬೇಕಿದೆ. ಪ್ರಥಮ ಮಾಹಿತಿ ಹೇಳಿಕೆ ಮತ್ತು ಪ್ರತಿಭಟನಾ ಅರ್ಜಿಯಲ್ಲಿನ ವಿವರಣೆಯು ಆರೋಪಿಗಳ ವಿರುದ್ಧ ಸಂಜ್ಞೇ ಅಪರಾಧವಾಗಿದೆ. ಆರೋಪಿ ಅಧಿಕಾರಿಗಳ ವಿರುದ್ಧ ಪ್ರಕ್ರಿಯೆ ಆರಂಭಿಸಲು ಸಂಜ್ಞೇ ಅಪರಾಧ ಪರಿಗಣಿಸುವುದು ಅಗತ್ಯವಾಗಿದೆ” ಎಂದು ನ್ಯಾಯಾಲಯದಲ್ಲಿ ವಿವರಿಸಿದೆ.

“ಚಂದ್ರು ಮತ್ತು ಮಲ್ಲಿಕಾರ್ಜುನ್‌ ನಡುವಿನ ಸಂಭಾಷಣೆಯಲ್ಲಿ ಮೇಲ್ನೋಟಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದನ್ನು ಪಡೆದಿರುವ ಬಗ್ಗೆ ವಿವರಣೆ ಇದೆ. ಸಂಭಾಷಣೆಯಲ್ಲಿ 2014ರ ಸೆಪ್ಟೆಂಬರ್‌ 1ರಂದು ಆರೋಪಿಗಳಿಗೆ ಮಲ್ಲಿಕಾರ್ಜುನ್‌ 2 ಲಕ್ಷ ರೂಪಾಯಿ ಪಾವತಿಸಲು ಒಪ್ಪಿದ್ದಾರೆ. ಅದೇ ದಿನ ದಾನೇಶ್ವರ್‌ ರಾವ್‌ ಅವರಿಗೆ 5 ಲಕ್ಷ ರೂಪಾಯಿ ಪಾವತಿಸಲಾಗಿದೆ ಎಂದು ದೂರಿನಲ್ಲಿ ಮಲ್ಲಿಕಾರ್ಜುನ್‌ ಆರೋಪಿಸಿದ್ದಾರೆ. 2014ರ ಸೆಪ್ಟೆಂಬರ್‌ 2ರಂದು ದಾನೇಶ್ವರ್‌ ರಾವ್‌ ಮೂಲಕ ಅಲೋಕ್‌ ಕುಮಾರ್‌ ಅವರು 24 ಗಂಟೆಗಳಲ್ಲಿ ಒಂದು ಕೋಟಿ ರೂಪಾಯಿ ಪಾವತಿಸುವಂತೆ ನಿರ್ದೇಶಿಸಿದ್ದಾಗಿ ಮಲ್ಲಿಕಾರ್ಜುನ್‌ ಆರೋಪಿಸಿದ್ದಾರೆ. ಪಿಎಸ್‌ಐ ಹಾಗೂ ಸಂಬಂಧಿ ಪುಟ್ಟೇಗೌಡ ಅವರ ಮೂಲಕ ಒಂದು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಒಂದು ಕೋಟಿ ರೂಪಾಯಿ ಲಂಚಕ್ಕೆ ಅಲೋಕ್‌ ಕುಮಾರ್‌ ಬೇಡಿಕೆ ಇಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸ್‌ ಅಧಿಕಾರಿ ಮೊಹಮ್ಮದ್‌ ಮುಖರಾಮ್‌ ಅವರು 2015ರ ಜೂನ್‌ 15ರಂದು ವಯ್ಯಾಲಿಕಾವಲ್‌ ಠಾಣೆಯ ಕಾನ್‌ಸ್ಟೆಬಲ್‌ ಚಂದ್ರು ಅಲಿಯಾಸ್‌ ಚಂದ್ರಶೇಖರ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 7, 13 (1) (ಡಿ) ಜೊತೆಗೆ 13 (2)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಬಿ ವರದಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಮಲ್ಲಿಕಾರ್ಜುನ್‌ ಅವರು 2022ರ ಜೂನ್‌ 10ರಂದು ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ಮಲ್ಲಿಕಾರ್ಜುನ್‌ ಆಕ್ಷೇಪ ಏನು?

ವೈಯ್ಯಾಲಿಕಾವಲ್‌ ವ್ಯಾಪ್ತಿಯ ಆರೆಂಜ್ ಬಾರ್‌ ರೆಸ್ಟೊರೆಂಟ್‌ಗೆ ಸ್ನೇಹಿತನೊಂದಿಗೆ ತೆರಳಿದ್ದು, ಅಲ್ಲಿ ಬಾರ್‌ ಮ್ಯಾನೇಜ್‌ಮೆಂಟ್‌ ಜೊತೆಗೆ ಗಲಾಟೆಯಾಗಿತ್ತು. ಈ ಸಂಬಂಧ ಈ ಸಂಬಂಧ ವೈಯ್ಯಾಲಿಕಾವಲ್‌ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿತ್ತು.

ಈ ಮಧ್ಯೆ, ಅಲೋಕ್‌ ಕುಮಾರ್‌, ದಾನೇಶ್ವರ್‌ ರಾವ್‌ ಮತ್ತು ಶಂಕರಾಚಾರಿ ಅವರು ತನ್ನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದಾನೇಶ್ವರ್‌ ರಾವ್‌ ಮತ್ತು ಶಂಕರಾಚಾರಿ ಅವರಿಗೆ ಐದು ಲಕ್ಷ ರೂಪಾಯಿಯನ್ನು 2014ರ ಸೆಪ್ಟೆಂಬರ್‌ 1ರಂದು ಪಾವತಿಸಲಾಗಿತ್ತು. ಈ ಸಂಬಂಧ 2015ರ ಮೇ 30ರಂದು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಯ ಮುಂದೆ ಪ್ರಥಮ ಮಾಹಿತಿ ಹೇಳಿಕೆ ದಾಖಲಿಸಿದ್ದು, ಇದನ್ನು ಆಧರಿಸಿ 2015ರ ಜೂನ್‌ 15ರಂದು ಚಂದ್ರು ಅಲಿಯಾಸ್‌ ಚಂದ್ರಶೇಖರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು ಎಂಬುದು ಮಲ್ಲಿಕಾರ್ಜುನ್‌ ವಾದ.

ಮುಂದುವರಿದು, ಅಲೋಕ್‌ ಕುಮಾರ್‌ ಅವರು ಒಂದು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಎರಡು ದಿನಗಳಲ್ಲಿ ಅದನ್ನು ಪಾವತಿಸುವಂತೆ ನಿರ್ದೇಶಿಸಿದ್ದರು. ಲಂಚದ ಹಣ ಪಾವತಿಸದಿದ್ದರೆ ತನ್ನನ್ನು ಐಪಿಸಿ ಮತ್ತು ಶಸ್ರ್ರಾಸ್ತ್ರ ಕಾಯಿದೆ ಅಡಿ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ, ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು. ತಮ್ಮ ಸಂಬಂಧಿ ಪುಟ್ಟೇಗೌಡ ಅವರು ವಯ್ಯಾಲಿಕಾವಲ್‌ ಠಾಣೆಯಲ್ಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದು, ಲಂಚದ ಹಣ ಪಡೆದುಕೊಳ್ಳಲು ಅಲೋಕ್‌ ಕುಮಾರ್‌ ನಿರ್ದೇಶನದಂತೆ ಆರೋಪಿಗಳು ಪುಟ್ಟೇಗೌಡ ಅವರನ್ನು ಅಮಾನತಿನಲ್ಲಿಟ್ಟಿದ್ದರು. ತನಿಖೆಯ ಸಂದರ್ಭದಲ್ಲಿ ಪುಟ್ಟೇಗೌಡ ಅವರು ತಾನು ಮಾಡಿದ್ದ ಆರೋಪವನ್ನು ಪುನರುಚ್ಚರಿಸಿದ್ದರು ಎಂದು ವಿವರಿಸಿದ್ದಾರೆ.

ಚಂದ್ರು ಮತ್ತು ದಾನೇಶ್ವರ್‌ ರಾವ್‌ ಅವರ ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದು, 2015ರ ಜೂನ್‌ 18ರಂದು ಪೊಲೀಸರು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಜಪ್ತಿ ಮಹಜರ್‌ ನಡೆಸಿದ್ದರು. ಈ ಸಂದರ್ಭದಲ್ಲಿ ತನ್ನ ಪ್ರಥಮ ಮಾಹಿತಿ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಜಪ್ತಿ ಮಾಡಿದ್ದ ಮೂರು ಸಿ ಡಿಗಳನ್ನು ಹಾಜರುಪಡಿಸಿದ್ದೆ. ಪೊಲೀಸರು ಸಲ್ಲಿಸಿರುವ ಬಿ ವರದಿಯಲ್ಲಿ ಸಿ ಡಿಯಲ್ಲಿರುವ ವಿಚಾರವನ್ನು ಉಲ್ಲೇಖಿಸಲಾಗಿದೆ. ಬಿ ವರದಿ ಪ್ರಕಾರ ತನಿಖಾಧಿಕಾರಿಯು ಸಿ ಡಿಯನ್ನು ವಿಧಿ ವಿಜ್ಞಾನ ವಿಶ್ಲೇಷಣೆಗೆ ಕಳುಹಿಸಿಲ್ಲ ಅಥವಾ ತಜ್ಞರ ವರದಿಯನ್ನು ಪಡೆದಿಲ್ಲ. ಆರೋಪಿ ಚಂದ್ರಶೇಖರ್‌ ಅವರು ಮಲ್ಲಿಕಾರ್ಜುನ್‌ ಜೊತೆ ಸಂಭಾಷಣೆ ನಡೆಸಿರುವುದನ್ನು ಒಪ್ಪಿಕೊಂಡಿರುವುದನ್ನು ಸಿ ಡಿ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ ಎಂದು ಉಲ್ಲೇಖಿಸಿದ್ದಾರೆ ಎಂದು ಮಲ್ಲಿಕಾರ್ಜುನ್‌ ಪ್ರತಿಭಟನಾ ಅರ್ಜಿಯಲ್ಲಿ ವಿವರಿಸಿದ್ದರು.

ಆರೋಪಿಗಳಿಗಿಂತ ಕೆಳಗಿನ ದರ್ಜೆಯ ತನಿಖಾಧಿಕಾರಿಯು ಸೂಕ್ತ ರೀತಿಯಲ್ಲಿ ತನಿಖೆ ನಡೆಸದೇ ಬಿ ವರದಿ ಸಲ್ಲಿಸಿದ್ದಾರೆ. ಎಫ್‌ಐಆರ್‌ ಜೊತೆಗೆ ಉಪ ಪೊಲೀಸ್‌ ವರಿಷ್ಠಾಧಿಕಾರಿಯ ಪ್ರಾಥಮಿಕ ತನಿಖಾ ವರದಿಯನ್ನು ಸೇರಿಸಲಾಗಿದೆ. ಆನಂತರ ಚಂದ್ರು ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಅಲೋಕ್‌ ಕುಮಾರ್‌, ದಾನೇಶ್ವರ್‌ ರಾವ್‌ ಮತ್ತು ಶಂಕರಾಚಾರಿ ಅವರನ್ನು ರಕ್ಷಿಸಲು ಅವರ ವಿರುದ್ದ ಸಂಬಂಧಿತ ಪೊಲೀಸ್‌ ಅಧಿಕಾರಿ ಎಫ್‌ಐಆರ್‌ ದಾಖಲಿಸಿಲ್ಲ ಎಂದು ಆಕ್ಷೇಪಿಸಿದ್ದರು.

Kannada Bar & Bench
kannada.barandbench.com