Supreme Court
Supreme Court 
ಸುದ್ದಿಗಳು

931 ಕ್ರಿಮಿನಲ್ ಜಾಮೀನು ಅರ್ಜಿಗಳು, ಶಿಕ್ಷೆ ಅಮಾನತು ಕೋರಿದ 141 ಪ್ರಕರಣಗಳು ಬಾಕಿ ಇವೆ: ಆರ್‌ಟಿಐಗೆ ʼಸುಪ್ರೀಂʼ ಉತ್ತರ

Bar & Bench

ಡಿ. 18ರವರೆಗಿನ ಮಾಹಿತಿಯಂತೆ ಸುಪ್ರೀಂಕೋರ್ಟ್‌ನಲ್ಲಿ 931 ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳು ಬಾಕಿ ಇವೆ ಎಂದು ಸರ್ವೋಚ್ಛ ನ್ಯಾಯಾಲಯದ ರೆಜಿಸ್ಟ್ರಿ ತಿಳಿಸಿದೆ. ಈ 931 ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ಅರ್ಜಿಗಳು ಕೂಡ ಸೇರಿವೆ. ಮಾಹಿತಿ ಹಕ್ಕು ಕಾರ್ಯಕರ್ತ ಸಾಕೇತ್‌ ಗೋಖಲೆ ಅವರು ಮಾಹಿತಿ ಹಕ್ಕಿನಡಿ ಕೇಳಿದ್ದ ಪ್ರಶ್ನೆಗೆ ರೆಜಿಸ್ಟ್ರಿ ಈ ವಿವರ ನೀಡಿದೆ.

ಶಿಕ್ಷೆ ಅಮಾನತುಗೊಳಿಸುವಂತೆ ಕೋರಿದ್ದ 141 ಪ್ರಕರಣಗಳು ಕೂಡ ಬಾಕಿ ಇವೆ ಎಂದು ಐಸಿಎಂಐಎಸ್ ಸಾಫ್ಟ್‌ವೇರ್ ಒದಗಿಸಿದ ವಿವರಗಳನ್ನು ಆಧರಿಸಿ ರೆಜಿಸ್ಟ್ರಿ ಮಾಹಿತಿ ನೀಡಿದೆ. ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ತ್ವರಿತ ವಿಚಾರಣೆ ನಡೆದ ಬಳಿಕ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದ ಎಷ್ಟು ಜಾಮೀನು ಅರ್ಜಿಗಳು ನ್ಯಾಯಾಲಯದಲ್ಲಿ ಬಾಕಿ ಇವೆ ಎಂದು ತಿಳಿಯಲು ಗೋಖಲೆ ಅವರು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು.

ಒಳಾಂಗಣ ವಿನ್ಯಾಸಕರೊಬ್ಬರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಹಿನ್ನೆಲೆಯಲ್ಲಿ ಅರ್ನಾಬ್‌ ಅವರನ್ನು ಬಂಧಿಸಿ ಮಹಾರಾಷ್ಟ್ರದ ತಳೋಜಾ ಜೈಲಿನಲ್ಲಿರಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಡೀ ದಿನ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಅರ್ನಾಬ್‌ ಅವರಿಗೆ ಜಾಮೀನು ನೀಡಿತ್ತು. ಈ ಸಂದರ್ಭದಲ್ಲಿ ಪೀಠ “ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಆತ್ಮಹತ್ಯೆಗೆ ಪ್ರಚೋದಿಸುವ ಅಂಶ ಮೇಲ್ನೋಟಕ್ಕೆ ಎಫ್‌ಐಆರ್‌ನಲ್ಲಿ ಕಂಡುಬಂದಿಲ್ಲ” ಎಂದು ಹೇಳಿತ್ತು.

ಅರ್ನಾಬ್‌ ಅವರಿಗೆ ತುರ್ತಾಗಿ ಜಾಮೀನು ನೀಡಿದ ಮರುದಿನವೇ ಸುಪ್ರೀಂಕೋರ್ಟ್‌ ಪ್ರಕರಣ ಪಟ್ಟಿ ಮಾಡಿದ ವೈಖರಿಯನ್ನು ಸುಪ್ರೀಂಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ದುಶ್ಯಂತ್‌ ದವೆ ಅವರು ಪ್ರಶ್ನಿಸಿ ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿಯವರಿಗೆ ಕಠೋರ ಮಾತುಗಳಿಂದ ಕೂಡಿದ ಪತ್ರ ಬರೆದಿದ್ದರು. ಪ್ರಕರಣ ಆಲಿಸುವಂತೆ ʼಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿಂದ ವಿಶೇಷ ನಿರ್ದೇಶನವೇನಾದರೂ ಬಂದಿದೆಯೇ?ʼ ಎಂದು ಕೂಡ ಪ್ರಶ್ನಿಸಿದ್ದರು.