Karnataka HC 
ಸುದ್ದಿಗಳು

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಆರ್ಥಿಕ ನೆರವು: ನಿಲುವು ತಿಳಿಸಲು ಕೇಂದ್ರಕ್ಕೆ ಹೈಕೋರ್ಟ್‌ ಆದೇಶ

ಚಿಕಿತ್ಸೆಗಾಗಿ ಕ್ರೌಡ್‌ ಫಂಡಿಂಗ್‌ನಿಂದ 8.24 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಇನ್ನೂ 7.76 ಕೋಟಿ ರೂಪಾಯಿ ಅಗತ್ಯವಿದೆ. 18ರಿಂದ 24 ತಿಂಗಳು ತುಂಬುವುದರೊಳಗೆ ಚಿಕಿತ್ಸೆ ಕೊಡಿಸದಿದ್ದರೆ, ಜೀವಕ್ಕೇ ಅಪಾಯವಿದೆ ಎಂದ ಅರ್ಜಿದಾರರ ಪರ ವಕೀಲರು.

Bar & Bench

ಬೆನ್ನುಮೂಳೆ ಸ್ನಾಯುಗಳ ಕ್ಷೀಣತೆ (ಸ್ಪೈನಲ್ ಮಸ್ಕ್ಯುಲರ್ ಆಸ್ಟ್ರೊಫಿ ಟೈಪ್-1) ಕಾಯಿಲೆಯಿಂದ ಬಳಲುತ್ತಿರುವ ಬೆಂಗಳೂರಿನ 17 ತಿಂಗಳ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು ಒದಗಿಸುವ ವಿಚಾರದಲ್ಲಿ ನಿಲುವು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದ್ದು, ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ.

ವಿಶಿಷ್ಟ ಕಾಯಿಲೆಯಿಂದ ಬಳಲುತ್ತಿರುವ ಮಗು ಜನೀಶ್ ತಂದೆ ನವೀನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ಚದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಇದು ಮಗುವಿನ ಜೀವದ ಪ್ರಶ್ನೆಯಾಗಿರುವುದರಿಂದ ಚಿಕಿತ್ಸೆಗೆ ಆರ್ಥಿಕ ನೆರವು ಒದಗಿಸುವ ಬಗ್ಗೆ ಕೇಂದ್ರ ಸರ್ಕಾರವು ಶೀಘ್ರ ನಿಲುವು ತಿಳಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವೈದ್ಯಕೀಯ ದಾಖಲೆಗಳನ್ನು ಮಗುವಿನ ತಂದೆ ಸರ್ಕಾರಕ್ಕೆ ಒದಗಿಸಬೇಕು” ಎಂದು ಪೀಠ ಹೇಳಿದ್ದು, ವಿಚಾರಣೆಯನ್ನು ಅಕ್ಟೋಬರ್‌ 1ಕ್ಕೆ ಮುಂದೂಡಿತು.

ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯ ವಿಭಾಗೀಯ ಅಧಿಕಾರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗೀಯ ಅಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪೀಠ ನೋಟಿಸ್ ಜಾರಿಗೊಳಿಸಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ಅವರು “17 ತಿಂಗಳ ಮಗು ಜನೀಶ್ ಅನುವಂಶೀಯ ಸ್ಪೈನಲ್ ಮಸ್ಕ್ಯುಲರ್ ಆಸ್ಟ್ರೊಫಿ ಟೈಪ್-1 ಕಾಯಿಲೆಯಿಂದ ಬಳಲುತ್ತಿದ್ದು, ಇದಕ್ಕೆ ಭಾರತದಲ್ಲಿ ಯಾವುದೇ ಔಷಧ ಲಭ್ಯವಿಲ್ಲ. ಚಿಕಿತ್ಸೆಗೆ ಅಗತ್ಯವಿರುವ ಚುಚ್ಚುಮದ್ದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಿದ್ದು, ಅದಕ್ಕಾಗಿ ಅಂದಾಜು 16 ಕೋಟಿ ರೂಪಾಯಿ ವೆಚ್ಚವಾಗುತ್ತದೆ” ಎಂದು ಪೀಠಕ್ಕೆ ವಿವರಿಸಿದರು.

“ಸದ್ಯ ಕ್ರೌಡ್‌ ಫಂಡಿಂಗ್ ಮೂಲಕ 8.24 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಉಳಿದ 7.76 ಕೋಟಿ ರೂಪಾಯಿ ಅಗತ್ಯವಿದೆ. ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. 18ರಿಂದ 24 ತಿಂಗಳು ತುಂಬುವುದರೊಳಗೆ ಚಿಕಿತ್ಸೆ ಕೊಡಿಸದಿದ್ದರೆ, ಜೀವಕ್ಕೇ ಅಪಾಯವಿದೆ. ಆದ್ದರಿಂದ, ಮಗುವಿನ ಚಿಕಿತ್ಸೆ ಮೇಲ್ವಿಚಾರಣೆಗಾಗಿ ವೈದ್ಯಕೀಯ ಮಂಡಳಿಯೊಂದನ್ನು ರಚಿಸಲು ನಿರ್ದೇಶಿಸಬೇಕು. ಸದ್ಯ ಸಂಗ್ರಹಿಸಲಾಗಿರುವ ಹಣವನ್ನು ಮಂಡಳಿಗೆ ವರ್ಗಾಯಿಸಲಾಗುವುದು. ಆಗ ಮಂಡಳಿ ವತಿಯಿಂದಲೇ ಮಗುವಿಗೆ ಚಿಕಿತ್ಸೆ ಕೊಡಿಸಬಹುದು ಅಥವಾ ಚಿಕಿತ್ಸೆಗೆ ಅಗತ್ಯವಿರುವ ಬಾಕಿ ಹಣವನ್ನು ಶೀಘ್ರವಾಗಿ ಒದಗಿಸಲು ಸರ್ಕಾರಗಳಿಗೆ ನಿರ್ದೇಶಿಸಬೇಕು” ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಪರ ವಕೀಲರು “ವಿಶಿಷ್ಟ ಕಾಯಿಲೆಗಳ ಚಿಕಿತ್ಸೆಗೆಂದೇ ಪ್ರತ್ಯೇಕ ನೀತಿ ಇದೆ. ಈ ಬಗ್ಗೆ ವೈದ್ಯಕೀಯ ತಜ್ಞರು ತೀರ್ಮಾನಿಸಬೇಕಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.