Calcutta High Court 
ಸುದ್ದಿಗಳು

ವೈಯಕ್ತಿಕ ಕಾನೂನಿನಡಿ 2ನೇ ಮದುವೆಯಾಗುವ ವ್ಯಕ್ತಿ ಮೊದಲ ಹೆಂಡತಿಯನ್ನು ಪೊರೆಯುವುದು ಕರ್ತವ್ಯ : ಕಲ್ಕತ್ತಾ ಹೈಕೋರ್ಟ್

ಅರ್ಜಿದಾರೆ 2003ರಲ್ಲಿ ವಿವಾಹವಾಗಿದ್ದರು. ಅದಾದ 9 ವರ್ಷಗಳ ಬಳಿಕ ಗಂಡನ ಮನೆಯಿಂದ ಆಕೆಯನ್ನು ಹೊರಹಾಕಲಾಗಿತ್ತು ಎಂಬ ವಿಚಾರವನ್ನು ನ್ಯಾ. ಶಂಪಾ ದತ್ (ಪಾಲ್) ಗಮನಿಸಿದರು.

Bar & Bench

ವೈಯಕ್ತಿಕ ಕಾನೂನಿನಡಿ ಎರಡನೇ ಮದುವೆಗೆ ಅರ್ಹನಾದ ವ್ಯಕ್ತಿ ತನ್ನ ಹೆಂಡತಿಯ ಜೀವನಾಂಶಕ್ಕೆ ಬದ್ಧನಾಗಿರಬೇಕು ಎಂದು ಸೋಮವಾರ ತಿಳಿಸಿರುವ ಕಲ್ಕತ್ತಾ ಹೈಕೋರ್ಟ್‌ ವ್ಯಕ್ತಿಯ ಮೊದಲ ಹೆಂಡತಿಗೆ ಮಾಸಿಕ ₹6,000ದ ಬದಲಿಗೆ ₹4,000 ಜೀವನಾಂಶ ನೀಡುವಂತೆ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ [ಸೆಫಾಲಿ ಖಾತುನ್‌ ಅಲಿಯಾಸ್‌ ಬೀಬಿ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ].

ಅರ್ಜಿದಾರ ಮಹಿಳೆ ಅಕ್ಟೋಬರ್ 12, 2003ರಂದು ವರಿಸಿದ್ದರು. ವರದಕ್ಷಿಣೆ ಬೇಡಿಕೆ ಈಡೇರಿಸದೇ ಇದ್ದುದಕ್ಕಾಗಿ ಅಕ್ಟೋಬರ್ 12, 2012ರಂದು ಆಕೆಯನ್ನು ಪತಿಯು ಮನೆಯಿಂದ ಹೊರಹಾಕಿದ್ದರು. ಸಂತ್ರಸ್ತೆಯ ಪತಿ ಬೇರೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾರೆ ಎಂಬ ವಿಚಾರವನ್ನು  ನ್ಯಾಯಮೂರ್ತಿ ಶಂಪಾ ದತ್ (ಪಾಲ್) ಅವರಿದ್ದ ಏಕಸದಸ್ಯ ಪೀಠ ಗಮನಿಸಿತು.

"(ವೈಯಕ್ತಿಕ ಕಾನೂನಿನ ಅಡಿಯಲ್ಲಿ ಅನುಮತಿರುವಂತೆ) ಎರಡನೇ ವಿವಾಹವಾದ ಪುರುಷ 9 ವರ್ಷಗಳ ಕಾಲ ತನ್ನ ಜೊತೆಗಿದ್ದ ಮೊದಲ ಪತ್ನಿಯನ್ನು ಪೊರೆಯಲು ಕರ್ತವ್ಯಬದ್ಧನಾಗಿರುತ್ತಾನೆ. ಒಬ್ಬ ಮಹಿಳೆ ಇಷ್ಟು ವರ್ಷಗಳ ಕಾಲ ಗಂಡನೊಂದಿಗೆ ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಪ್ರೀತಿಯಿಂದ ಜೀವನ ಸಾಗಿಸಿರುವಾಗ ಆಕೆ ಬಯಸಿದಷ್ಟು ಕಾಲ ಅಥವಾ ಅಗತ್ಯವಿರುವಷ್ಟು ಸಮಯ ಆಕೆಯನ್ನು ನೋಡಿಕೊಳ್ಳುವುದು ಪತಿಯ ಕರ್ತವ್ಯ" ಎಂದು ನ್ಯಾಯಾಲಯ ನುಡಿಯಿತು.

ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪತ್ನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆಕೆಗೆ ₹6,000 ಮಾಸಿಕ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಆದರೆ ಈ ಮೊತ್ತವನ್ನು ಸೆಷನ್ಸ್‌ ನ್ಯಾಯಾಲಯ ₹4,000ಕ್ಕೆ ಇಳಿಸಿತ್ತು. ಹೀಗಾಗಿ ಆಕೆ ಹೈಕೊರ್ಟ್‌ ಕದ ತಟ್ಟಿದ್ದರು.