ಜೀವನಾಂಶ ಪ್ರಕರಣ: 'ಪತ್ನಿ, ಮಕ್ಕಳು ವೈಕಲ್ಯಕ್ಕೀಡಾದಾಗ ನೋಡಿಕೊಳ್ಳುವುದು ಪತಿಯ ಹೊಣೆ' ಕುರಾನ್‌ ನೆನಪಿಸಿದ ಹೈಕೋರ್ಟ್‌

17 ವರ್ಷದ ಪುತ್ರಿ ಅಂಗವಿಕಲೆಯಾಗಿದ್ದು, 14 ವರ್ಷದ ಮತ್ತೊಬ್ಬ ಪುತ್ರಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವುದನ್ನು ಪರಿಗಣಿಸಿ ನ್ಯಾಯಾಲಯ ಆದೇಶ ಮಾಡಿದೆ.
Qaran & Karnataka HC
Qaran & Karnataka HC
Published on

ಜೀವನಾಂಶ ಕುರಿತಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ಪಾವತಿಸಲು ಆದೇಶಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪುರಸ್ಕರಿಸಿರುವ ಕರ್ನಾಟಕ ಹೈಕೋರ್ಟ್‌, “ವಿಶೇಷವಾಗಿ ಅವರು ನಿಷ್ಕ್ರಿಯರಾಗಿರುವಾಗ ಪತ್ನಿ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಪತಿಯ ಕರ್ತವ್ಯ ಎಂದು ಪವಿತ್ರ ಕುರಾನ್‌ ಮತ್ತು ಹದಿತ್‌ ಹೇಳುತ್ತವೆ” ಎಂದಿದೆ.

ಪತ್ನಿ ಮತ್ತು ಅಪ್ರಾಪ್ತ ಮಕ್ಕಳಿಗೆ 25 ಸಾವಿರ ರೂಪಾಯಿ ಜೀವನಾಂಶ ಪಾವತಿಸುವಷ್ಟು ಆದಾಯ ಇಲ್ಲ ಎಂದು ಆಕ್ಷೇಪಿಸಿ ಬೆಂಗಳೂರಿನ ಮೊಹಮ್ಮದ್‌ ಅಮ್ಜದ್‌ ಪಾಷಾ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿದೆ.

“ವಿಶೇಷವಾಗಿ ಮಕ್ಕಳು ಮತ್ತು ಪತ್ನಿ ನಿಷ್ಕ್ರಿಯರಾಗಿರುವಾಗ ಅವರನ್ನು ನೋಡಿಕೊಳ್ಳುವುದು ಪತಿಯ ಕರ್ತವ್ಯ ಎಂದು ಪವಿತ್ರ ಕುರಾನ್‌ ಮತ್ತು ಹದಿತ್‌ ಹೇಳುತ್ತವೆ. ಪ್ರತಿವಾದಿ ಪತ್ನಿಯು ಉದ್ಯೋಗದಲ್ಲಿದ್ದಾರೆ ಅಥವಾ ಆಕೆಗೆ ಬೇರೆ ಆದಾಯದ ಮೂಲ ಇದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆ ಹಾಜರುಪಡಿಸಲಾಗಿಲ್ಲ. ಅದಾಗ್ಯೂ, ಅವರ ಉಸ್ತುವಾರಿ ನೋಡಿಕೊಳ್ಳುವ ಪ್ರಧಾನ ಕರ್ತವ್ಯ ಅರ್ಜಿದಾರರ ಹೆಗಲ ಮೇಲಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ವಿಚಾರಣಾಧೀನ ನ್ಯಾಯಾಲಯ ಪಾವತಿಸಲು ನಿರ್ದೇಶಿಸಿರುವ ಜೀವನಾಂಶದ ಮೊತ್ತವು ದುಬಾರಿಯಾಗಿದೆ ಎಂಬುದಕ್ಕೆ ಪೀಠವು “ರಕ್ತಕ್ಕಿಂತ ರೊಟ್ಟಿ ದುಬಾರಿಯಾಗಿರುವ ಇಂದಿನ ದಿನಮಾನಗಳಲ್ಲಿ ಅರ್ಜಿದಾರರ ವಾದ ಊರ್ಜಿತವಾಗುವುದಿಲ್ಲ” ಎಂದಿದೆ.

17 ವರ್ಷದ ಪುತ್ರಿ ಅಂಗವಿಕಲೆಯಾಗಿದ್ದು, 14 ವರ್ಷದ ಮತ್ತೊಬ್ಬ ಪುತ್ರಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವುದನ್ನು ಪರಿಗಣಿಸಿರುವ ನ್ಯಾಯಾಲಯವು “ವಿವಾಹ ವಿಫಲವಾದ ಮಾತ್ರಕ್ಕೆ ಅವಲಂಬಿತರು ಅಲೆಮಾರಿಗಳಾಗದಿರಲಿ, ಇತರೆ ಅವಲಂಬಿತರಿಗೆ ಅದು ಶಿಕ್ಷೆಯಾಗದಿರಲಿ ಎಂಬ ಕಾರಣಕ್ಕೆ ಮಧ್ಯಂತರ/ಶಾಶ್ವತ ಜೀವನಾಂಶಕ್ಕೆ ಆದೇಶಿಸಲಾಗುತ್ತದೆ” ಎಂದು ಆದೇಶದಲ್ಲಿ ಹೇಳಿದೆ.

Kannada Bar & Bench
kannada.barandbench.com