kerala high court, Mother Mary Comes to Me 
ಸುದ್ದಿಗಳು

ವಿವಾದದ 'ಹೊಗೆʼ: ಅರುಂಧತಿ ರಾಯ್ ನೂತನ ಪುಸ್ತಕದ ಮುಖಪುಟದಲ್ಲಿ ಧೂಮಪಾನದ ಚಿತ್ರ ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಪಿಐಎಲ್

ಪುಸ್ತಕದ ವಸ್ತುವಿಷಯ ಅಥವಾ ಸಾಹಿತ್ಯದ ಬಗ್ಗೆ ತಮ್ಮ ತಕರಾರು ಇಲ್ಲ ಎಂದು ಅರ್ಜಿದಾರರು ಸ್ಪಷ್ಟಪಡಿಸಿದರು.

Bar & Bench

ಲೇಖಕಿ ಅರುಂಧತಿ ರಾಯ್ ಅವರ ಇತ್ತೀಚಿನ ಪುಸ್ತಕ ' ಮದರ್ ಮೇರಿ ಕಮ್ಸ್ ಟು ಮಿ ' ಮುಖಪುಟದಲ್ಲಿ ಕಡ್ಡಾಯ ಆರೋಗ್ಯ ಎಚ್ಚರಿಕೆ ಇಲ್ಲದೆ ಲೇಖಕಿ ಸಿಗರೇಟ್ ಸೇದುತ್ತಿರುವ ಭಾವಚಿತ್ರ ಪ್ರಕಟಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ರಾಜಸಿಂಹನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಲೇಖಕರು ಸಿಗರೇಟ್ ಸೇದುತ್ತಿರುವ ಚಿತ್ರವು ಅದನ್ನು ಬೌದ್ಧಿಕ ಮತ್ತು ಸೃಜನಶೀಲ ಅಭಿವ್ಯಕ್ತಿಯ ಸಂಕೇತವಾಗಿ ವೈಭವೀಕರಿಸುತ್ತದೆ ಎಂದು ವಾದಿಸಿ ವಕೀಲ ರಾಜಸಿಂಹನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ವಿಭಾಗೀಯ ಪೀಠ ಆಲಿಸಿತು.

ಪುಸ್ತಕದ ವಸ್ತುವಿಷಯ ಅಥವಾ ಸಾಹಿತ್ಯದ ಬಗ್ಗೆ ತಮ್ಮ ತಕರಾರು ಇಲ್ಲ ಎಂದು ಅರ್ಜಿದಾರರು ಸ್ಪಷ್ಟಪಡಿಸಿದರು. ದಾವೆದಾರರ ಪರವಾಗಿ ಹಿರಿಯ ವಕೀಲ ಎಸ್‌ ಗೋಪಿ ಕುಮಾರನ್‌ ನಾಯರ್‌ ವಾದ ಮಂಡಿಸಿದರು.

ಅರ್ಜಿದಾರರ ಆಕ್ಷೇಪಣೆಯ ಪ್ರಮುಖ ಅಂಶಗಳು

  • ಜಗತ್ತಿನಲ್ಲಿಯೇ ಮನ್ನಣೆ ಪಡೆದ ಬುದ್ಧಿಜೀವಿ ಎನಿಸಿಕೊಂಡಿರುವ ಮತ್ತು ಸಾರ್ವಜನಿಕ ವ್ಯಕ್ತಿತ್ವವುಳ್ಳ ಅರುಂಧತಿ ರಾಯ್‌  ಅವರ ಕೃತ್ಯ ಯುವಜನರು ಮತ್ತು ಓದಗರ ಮೇಲೆ ಅದರಲ್ಲಿಯೂ ಹದಿಹರೆಯದ ಹುಡುಗಿಯರು ಮತ್ತು ಯುವತಿಯರಿಗೆ ಧೂಮಪಾನ ಎಂಬುದು ಒಂದು ಫ್ಯಾಷನ್‌ ಎಂಬ ಭಾವನೆ ಮೂಡಿಸುವ ಸಾಧ್ಯತೆ ಇದೆ.

  • ಇದು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ, 2003 (- COTPA) ಮತ್ತು 2008ರ ನಿಯಮಗಳಿಗೆ ವಿರುದ್ಧ.

  • ಕಾಯಿದೆಯ ಸೆಕ್ಷನ್ 7 ಮತ್ತು 8 ಪ್ರಕಾರ, Smoking is injurious to health” ಅಥವಾ “Tobacco causes cancer” ಎಂಬ ಎಚ್ಚರಿಕೆ ಸಂದೇಶವನ್ನು ಧೂಮಪಾನದ ಯಾವುದೇ ಚಿತ್ರದ ಜೊತೆ ಪ್ರಕಟಿಸುವುದು ಕಡ್ಡಾಯ. ಆದರೆ ಪುಸ್ತಕದ ಮುಖಪುಟದಲ್ಲಿ ಇಂತಹ ಎಚ್ಚರಿಕೆ ಇಲ್ಲ.

  • ಇದು ತಂಬಾಕು ಉತ್ಪನ್ನಗಳನ್ನು ಪರೋಕ್ಷವಾಗಿ ಪ್ರಚುರಗೊಳಿಸಿದಂತಿದೆ.

  •  ಈ ಮುಖಪುಟ ಇರುವ ಪುಸ್ತಕದ ಮಾರಾಟ ಇಲ್ಲವೇ ಪ್ರಚಾರಕ್ಕೆ ಲೇಖಕರು ಮತ್ತು ಪ್ರಕಾಶಕರಿಗೆ ತಡೆ ನೀಡಬೇಕು.

  • ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಭಾರತೀಯ ಪತ್ರಿಕಾ ಮಂಡಳಿಗೆ ಕಾಯಿದೆಯನ್ನು ಪಾಲಿಸುವಂತೆ ಆದೇಶಿಸಬೇಕು.

  • ಕಾಯಿದಗೆ ಅನುಗುಣವಾಗಿ ಸೂಕ್ತ ಆರೋಗ್ಯ ಎಚ್ಚರಿಕೆಗಳನ್ನು ಪ್ರಕಟಿಸಿ ಪುಸ್ತಕವನ್ನು ಮರುಪ್ರಕಟಿಸಲು ಸೂಚಿಸಬೇಕು.