Live streaming 
ಸುದ್ದಿಗಳು

ಕಲಾಪದ ವಿಡಿಯೋಗಳನ್ನು ಸಾರ್ವಜನಿಕರು ಬಳಕೆ ಮಾಡುವುದಕ್ಕೆ ನಿರ್ಬಂಧ: ಹೈಕೋರ್ಟ್‌ ಕದತಟ್ಟಿದ ಎಎಬಿ

ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠವು ಮಂಗಳವಾರ (ಸೆ.24) ವಿಚಾರಣೆ ನಡೆಸಲಿದೆ.

Bar & Bench

“ಹೈಕೋರ್ಟ್ ಕಲಾಪಗಳ ಪ್ರಕ್ರಿಯೆಯನ್ನು ಸಾಮಾಜಿಕ ಜಾಲತಾಣ, ವೈಯಕ್ತಿಕ ಖಾತೆಗಳಲ್ಲಿ ನೇರ ಪ್ರಸಾರ ಮಾಡುವುದು, ಸಂಕಲನ ಮಾಡುವುದು ಅಥವಾ ಮರು ಪ್ರಸಾರ ಮಾಡುವುದನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಕೋರಿ ಬೆಂಗಳೂರು ವಕೀಲರ ಸಂಘ (ಎಎಬಿ) ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠವು ಮಂಗಳವಾರ (ಸೆ.24) ವಿಚಾರಣೆ ನಡೆಸಲಿದೆ.

Justice Hemant Chandangoudar

ಪ್ರಕರಣದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗಳು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌, ಡಿಜಿ–ಐಜಿಪಿ, ಯೂ–ಟ್ಯೂಬ್‌, ಮೆಟಾ (ಫೇಸ್‌ಬುಕ್‌), ಟ್ವಿಟರ್‌ ಕಮ್ಯುನಿಕೇಶನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ, ಕಹಳೆ ನ್ಯೂಸ್‌, ಫ್ಯಾನ್ಸ್‌ ಟ್ರೋಲ್‌, ರವೀಂದ್ರ ಜೋಶಿ ಕ್ರಿಯೇಶನ್ಸ್‌, ಪ್ರತಿಧ್ವನಿ ಮತ್ತು ‘ಅವನಿಯಾನʼ ಅಧಿಕೃತ ಪ್ರತಿನಿಧಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅರ್ಜಿಯಲ್ಲಿ ಏನಿದೆ?: ಇತ್ತೀಚಿನ ದಿನಗಳಲ್ಲಿ ಹೈಕೋರ್ಟ್‌ ಕಲಾಪಗಳ ನೇರ ಪ್ರಸಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಕಲಾಪಗಳ ಆಯ್ದ ತುಣುಕಗಳನ್ನು ಸಾಮಾಜಿಕ ಜಾಲತಾಣದ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೆ ಸಂಕಲನಗೊಳಿಸಿ ಪ್ರಸಾರ ಮಾಡುತ್ತಿವೆ. ಇದರಿಂದ ಇವುಗಳನ್ನು ವೀಕ್ಷಿಸುವ ಸಾರ್ವಜನಿಕರಲ್ಲಿ ನ್ಯಾಯಾಂಗದ ಬಗ್ಗೆ ತಪ್ಪು ಕಲ್ಪನೆ ಮೂಡಲು ಅವಕಾಶ ಕಲ್ಪಿಸಿದಂತಾಗಿದೆ. ಅಂತೆಯೇ, ಈ ಪ್ರವೃತ್ತಿಯು ಕಲಾಪದ ತುಣುಕಗಳನ್ನು ವಿಕ್ಷಿಪ್ತಗೊಳಿಸಿ ಯೂ–ಟ್ಯೂಬ್, ಫೇಸ್‌ ಬುಕ್, ಎಕ್ಸ್ ಕಾರ್ಪ್ (ಟ್ವಿಟರ್‌), ಇನ್‌ಸ್ಟಾಗ್ರಾಂ ಮತ್ತು ಇತರೆ ಸಾಮಾಜಿಕ ತಾಣಗಳ ಪ್ರತಿನಿಧಿಗಳು ಹಣ ಮಾಡಿಕೊಳ್ಳುವ ಮತ್ತು ಮನರಂಜನಾ ಸಾಧನದ ವಾಣಿಜ್ಯ ಚಟುವಟಿಕೆಗೆ ದಾರಿ ಮಾಡಿಕೊಟ್ಟಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. 

ಕಲಾಪದ ತುಣುಕುಗಳನ್ನು ಭಾಗಶಃ ಸಂಕಲನ ಮಾಡಿ ಬಿತ್ತಿರಿಸುವ ಕಾರಣ ಕಮೆಂಟ್‌ ಬಾಕ್ಸ್‌ಗಳಲ್ಲಿ, ನ್ಯಾಯಮೂರ್ತಿಗಳು ಮತ್ತು ವಕೀಲರ ಬಗ್ಗೆ ಅವಹೇಳನಕಾರಿ, ಮಾನಹಾನಿಕರ ಮತ್ತು ನ್ಯಾಯಾಂಗದ ಘನತೆಗೆ ಧಕ್ಕೆ ಉಂಟಾಗುವಂತಹ ಟೀಕೆ ಟಿಪ್ಪಣಿ ಮಾಡಲಾಗುತ್ತಿದೆ. ಇದರಿಂದ ವಕೀಲ ವೃಂದಕ್ಕೆ ವೃತ್ತಿಗೆ ತೊಂದರೆ ಉಂಟು ಮಾಡುತ್ತಿದ್ದರೆ ಕಕ್ಷಿದಾರರಿಗೆ ನ್ಯಾಯಾಂಗ ಅಧಿಕಾರಿಗಳು ಮತ್ತು ವಕೀಲರ ಬಗ್ಗೆ ತಪ್ಪು ಕಲ್ಪನೆಗೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ, ಯೂ–ಟ್ಯೂಬ್‌ ನೇರ ಪ್ರಸಾರದಲ್ಲಿ ಬಿತ್ತರಗೊಂಡ ವಿಡಿಯೊಗಳು, ವಿಡಿಯೊ ಕ್ಲಿಪ್‌ಗಳು ಹಾಗೂ ಸಂಕಲನ ಮಾಡಿದ ವಿಡಿಯೊಗಳನ್ನು ತಕ್ಷಣ ತೆರವು ಮಾಡಬೇಕು. ಇವುಗಳ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸಂಘವು ಅರ್ಜಿಯಲ್ಲಿ ಮನವಿ ಮಾಡಿದೆ. 

ಮಹಿಳೆಯರ, ಮಕ್ಕಳ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ

ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ) ಮತ್ತು ವೈವಾಹಿಕ ಕಲಹಗಳು, ದಾಂಪತ್ಯ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣಗಳು ಅತ್ಯಂತ ಸೂಕ್ಷ್ವ ಮತ್ತು ಸಂವೇದನಾಶೀಲ ಸಂಗತಿಗಳಾಗಿರುತ್ತವೆ. ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಇಂತಹ ಪ್ರಕರಣಗಳನ್ನು ಮಾಧ್ಯಮಗಳ ಮುಖಾಂತರ ಬಿತ್ತರಗೊಳಿಸುವುದು ಕಕ್ಷಿದಾರರ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಎಂಬುದನ್ನು ಸುಪ್ರೀಂ ಕೋರ್ಟ್‌ ಅನೇಕ ಬಾರಿ ಎಚ್ಚರಿಸಿದೆ. ಹಾಗಾಗಿ, ನೇರ ಪ್ರಸಾರದ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಕಾನೂನು ಬಾಹಿರ ಕೃತ್ಯ ಎಂದು ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ.

ಅರ್ಜಿದಾರರ ಮನವಿ ಏನು?

  • ಕೋರ್ಟ್ ಕಲಾಪದ ದೃಶ್ಯಗಳನ್ನು ಅಕ್ರಮವಾಗಿ ಬಳಸದಂತೆ ಸಾಮಾಜಿಕ ಜಾಲತಾಣ, ಮಾಧ್ಯಮ ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ನಿರ್ಬಂಧಿಸಿ ಸೂಕ್ತ ಆದೇಶ ಹೊರಡಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶಿಸಬೇಕು.

  • ಕೋರ್ಟ್ ಪ್ರಕ್ರಿಯೆಯ ದೃಶ್ಯಾವಳಿ ಬಳಸಿಕೊಂಡು ಪ್ರತಿವಾದಿ ಪಟ್ಟಿಯಲ್ಲಿರುವ ಯೂಟ್ಯೂಬ್ ಚಾನಲ್‌ಗಳೂ ಸೇರಿ ಇತರ ಯಾವುದೇ ವ್ಯಕ್ತಿಗಳು ಸೃಷ್ಟಿಸಿರುವ ವಿಡಿಯೊಗಳನ್ನು ಅಳಿಸಿಹಾಕಲು ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್‌ಬುಕ್ ಹಾಗೂ ಟ್ವಿಟರ್‌ ಸಂಸ್ಥೆಗಳಿಗೆ ನಿರ್ದೇಶಿಸಬೇಕು.

  • ಕೋರ್ಟ್ ಕಲಾಪಗಳು / ನೇರ ಪ್ರಸಾರಗೊಂಡ ದೃಶ್ಯಾವಳಿಗಳನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹಾಗೂ ಡಿಜಿ-ಐಜಿಪಿಗೆ ನಿರ್ದೇಶಿಸಬೇಕು.

  • ಕೋರ್ಟ್ ಕಲಾಪಗಳ ನೇರಪ್ರಸಾರ ಸ್ಥಗಿತಗೊಳಿಸುವ ಹಾಗೂ ಈಗಾಗಲೇ ಸಂಗ್ರಹಿಸಿರುವ ವಿಡಿಯೊಗಳನ್ನು ಅಳಿಸಿಹಾಕುವ ಕುರಿತು ನಿರ್ಧರಿಸಲು ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳು ಅಥವಾ ಪೂರ್ಣಪೀಠದ ಮುಂದೆ ಮಂಡಿಸಲು ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಬೇಕು.