ಸಾಮಾಜಿಕ ಮಾಧ್ಯಮಗಳಲ್ಲಿ ಕಲಾಪದ ಲೈವ್ ಸ್ಟ್ರೀಮಿಂಗ್ ದುರ್ಬಳಕೆಗೆ ಎಎಬಿ ತೀವ್ರ ಆಕ್ಷೇಪ: ಸಿಜೆಗೆ ಕಳಕಳಿಯ ಪತ್ರ

ಸಾಮಾಜಿಕ ಮಾಧ್ಯಮದಲ್ಲಿ ವಾಣಿಜ್ಯ ಮಾರುಕಟ್ಟೆ ಸೃಷ್ಟಿಯಾಗಿದ್ದು, ಕೆಲವೊಂದು ಚರ್ಚೆಗಳನ್ನು ಮನಬಂದಂತೆ ತಿರುಚಿ, ಟೀಕೆ ಮಾಡಲಾಗುತ್ತಿದೆ. ನ್ಯಾಯಮೂರ್ತಿಗಳು, ವಕೀಲರು, ಕಕ್ಷಿದಾರರೂ ಸೇರಿ ಇಡೀ ವ್ಯವಸ್ಥೆಯನ್ನೇ ಅವಮಾನಿಸಲಾಗುತ್ತಿದೆ ಎಂದು ಆಕ್ಷೇಪ.
Karnataka HC and Live streaming
Karnataka HC and Live streaming
Published on

ನ್ಯಾಯಾಲಯದ ಕಲಾಪಗಳ ನೇರಪ್ರಸಾರದ (ಲೈವ್ ಸ್ಟ್ರೀಮಿಂಗ್) ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮನಬಂದಂತೆ ಬಳಸಿಕೊಳ್ಳುತ್ತಿರುವುದರಿಂದ ಹೊಸ ಹೊಸ ಸಮಸ್ಯೆಗಳು ಉದ್ಭವಿಸುತ್ತಿದ್ದು, ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬೆಂಗಳೂರು ವಕೀಲರ ಸಂಘ ಮನವಿ ಮಾಡಿದೆ.

ಈ ಕುರಿತು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರಿಗೆ ವಕೀಲರ ಸಂಘದ ಅಧ್ಯಕ್ಷರೂ ಆದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಶನಿವಾರ ಪತ್ರ ಬರೆದಿದ್ದು, ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ವಕೀಲರು ಮತ್ತು ಅವರ ವೃತ್ತಿಯ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದ್ದು, ನ್ಯಾಯಾಲಯದ ಕಲಾಪಗಳ ನೇರ ಪ್ರಸಾರವು ನ್ಯಾಯಾಲಯದ ಚರ್ಚೆಗಳನ್ನು ಹೊಸ ಮತ್ತು ಅನಿರೀಕ್ಷಿತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಕೆಲ ಬೆಳವಣಿಗೆಗಳಿಂದ ನ್ಯಾಯಾಂಗ ಚರ್ಚೆಗಳ ನೇರ ಪ್ರಸಾರದ ವೇಳೆ ನ್ಯಾಯಾಲಯಗಳು, ನ್ಯಾಯಮೂರ್ತಿಗಳು ಹಾಗೂ ವಕೀಲರು ಅತ್ಯಂತ ಜಾಗರೂಕತೆಯಿಂದ ನಡೆದುಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ವಾಣಿಜ್ಯ ಮಾರುಕಟ್ಟೆ ಸೃಷ್ಟಿಯಾಗಿದ್ದು, ನ್ಯಾಯಾಲಯದ ಕೆಲವೊಂದು ಚರ್ಚೆಗಳನ್ನು ತಮಗೆ ಬೇಕಾದಂತೆ ತಿರುಚಿ, ಟೀಕೆ ಮಾಡಲಾಗುತ್ತಿದೆ. ನ್ಯಾಯಮೂರ್ತಿಗಳು, ವಕೀಲರು ಹಾಗೂ ಕಕ್ಷಿದಾರರೂ ಸೇರಿ ಇಡೀ ವ್ಯವಸ್ಥೆಯನ್ನೇ ಅವಮಾನಿಸಲಾಗುತ್ತಿದೆ. ಲಕ್ಷಾಂತರ ಲೈಕ್ಸ್ ಹಾಗೂ ವೀಕ್ಷಣೆ ಗಳಿಸಲು ಹಾತೊರೆಯುತ್ತಿರುವ ಸಾಮಾಜಿಕ ಮಾಧ್ಯಮಗಳಲ್ಲಿನ ವಾಣಿಜ್ಯ ಮಾರುಕಟ್ಟೆಗಳು ನ್ಯಾಯಾಲಯದ ಚರ್ಚೆಗಳನ್ನು ತಮ್ಮ ಮಾಧ್ಯಮಗಳಲ್ಲಿ ಪ್ರಕಟಿಸಿ ಹಣಗಳಿಸಲು ಮುಂದಾಗಿವೆ ಎಂದು ವಿವೇಕ್ ಸುಬ್ಬಾರೆಡ್ಡಿ ಪತ್ರದಲ್ಲಿ ವಿವರಿಸಿದ್ದಾರೆ.

ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ಹೈಕೋರ್ಟ್ ಕಲಾಪಗಳ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಅದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ನ್ಯಾಯಾಂಗ ಚರ್ಚೆಗಳು ಜನರಲ್ಲಿ ಜಾಗೃತಿ ಮೂಡಿಸಲು ಇವೆಯೇ ಹೊರತು, ಅವುಗಳನ್ನು ಬಳಸಿಕೊಂಡು ಹಣ ಮಾಡುವುದಕ್ಕಲ್ಲ. ಆದ್ದರಿಂದ, ನ್ಯಾಯಾಲಯದ ಕಲಾಪಗಳ ದೃಶ್ಯಗಳನ್ನು ಎಡಿಟ್ ಮಾಡುವುದು ಹಾಗೂ ಪೋಸ್ಟ್ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.

ನ್ಯಾಯಾಲಯದ ಕಲಾಪಗಳ ಯೂಟ್ಯೂಬ್ ನೇರ ಪ್ರಸಾರದ ಕಾಮೆಂಟ್ ವಿಭಾಗದಲ್ಲಿ ಸಾರ್ವಜನಿಕರಿಗೆ ಕಾಮೆಂಟ್ ಮಾಡಲು ಸ್ವಾತಂತ್ರ್ಯ ಕಲ್ಪಿಸಲಾಗಿದೆ. ವಿಷಾದದ ಸಂಗತಿಯೆಂದರೆ ವಕೀಲರು, ನ್ಯಾಯಮೂರ್ತಿಗಳು, ಕಕ್ಷಿದಾರರ ಬಗ್ಗೆ ಕೆಲವರು ಅಸಹ್ಯಕರ ಪದಗಳನ್ನು ಬಳಸಿ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರಕರಣಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದವರೂ ಸಹ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಆಶ್ಚರ್ಯಕರವಾಗಿದೆ. ವಕೀಲರು ಮತ್ತು ನ್ಯಾಯಮೂರ್ತಿಗಳನ್ನು ಅಪಮಾನಿಸುವ ಹಾಗೂ ಕೀಳುಮಟ್ಟದ ಪ್ರತಿಕ್ರಿಯೆ ಹಾಕುತ್ತಿರುವುದು ಆಘಾತ ಮೂಡಿಸಿದೆ. ಕೇವಲ ವಿಡಿಯೋ ನೋಡಿ ಕೀಳುಮಟ್ಟದ ಕಾಮೆಂಟ್ ಮಾಡುವ ಮೂಲಕ‌ ನ್ಯಾಯಮೂರ್ತಿಗಳು ಹಾಗೂ ವಕೀಲರ ಪ್ರಾಮಾಣಿಕತೆ ಮೇಲೆ ದಾಳಿ ನಡೆಸಲಾಗುತ್ತಿದೆ. ಆದ್ದರಿಂದ, ನ್ಯಾಯಾಂಗ ವ್ಯವಸ್ಥೆಯ ಹಿತದೃಷ್ಟಿಯಿಂದ ಹೈಕೋರ್ಟ್‌ನ ಯೂಟ್ಯೂಬ್ ನೇರ ಪ್ರಸಾರದ ಪ್ರತಿಕ್ರಿಯೆ ವಿಭಾಗವನ್ನು ನಿಷ್ಕ್ರಿಯಗೊಳಿಸಬೇಕು. ಇಲ್ಲವಾದರೆ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅರಿವಿಲ್ಲದವರೂ ಸಹ ಮನಬಂದಂತೆ ಪ್ರತಿಕ್ರಿಯಿಸಿ ಸಂಸ್ಥೆಯ ಘನತೆಯನ್ನು ಬೀದಿಗೆ ಎಳೆಯುತ್ತಾರೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Also Read
ಪೂರ್ವಾನುಮತಿಯಿಲ್ಲದೇ ಹೈಕೋರ್ಟ್‌ ಲೈವ್‌ ಸ್ಟ್ರೀಮಿಂಗ್‌ ವಿಡಿಯೋ ಬಳಕೆಗೆ ನಿರ್ಬಂಧ; ಕಲಾಪಕ್ಕೂ ಮುನ್ನ ಸಂದೇಶ ಬಿತ್ತರ

ಇತ್ತೀಚೆಗೆ ಸಾಮಾಜಿಕ‌‌ ಮಾಧ್ಯಮಗಳಲ್ಲಿ ನ್ಯಾಯಾಲಯದ ಕಲಾಪಗಳ ದೃಶ್ಯಗಳಿಗೆ ಪ್ರಚೋದನಾತ್ಮಕ ಶೀರ್ಷಿಕೆಯನ್ನು ನೀಡಿ ಪ್ರಸಾರ ಮಾಡಲಾಗುತ್ತಿದೆ. ಉದ್ದೇಶಪೂರ್ವಕವಾಗಿ ವಕೀಲರನ್ನು ಅವಮಾನಿಸಲು ಹಾಗೂ ವೀಕ್ಷಕರ‌ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಲುವಾಗಿ ಈ ರೀತಿ ಕೀಳುಮಟ್ಟದ ಶೀರ್ಷಿಕೆಗಳನ್ನು ನೀಡಲಾಗುತ್ತಿದೆ.  ವಕೀಲರನ್ನು ನ್ಯಾಯಮೂರ್ತಿಗಳು ಬೈಯುತ್ತಿರುವ ವಿಡಿಯೋಗಳು ಹೆಚ್ಚು ವೀಕ್ಷಕರನ್ನು ಆಕರ್ಷಿಸುತ್ತಿವೆ. ನ್ಯಾಯಮೂರ್ತಿಗಳಿಂದ ತರಾಟೆಗೆ ಒಳಗಾದ ಯುವ ವಕೀಲರೊಬ್ಬರ ಪೋಟೋವನ್ನು ಪರದೆ ಮೇಲೆ ತೋರಿಸಲಾಗಿದೆ. ಇದರಿಂದ, ಆ ವಕೀಲನ ವೃತ್ತಿಪರತೆ ಹಾಗೂ ಸಾಮರ್ಥ್ಯದ ಬಗ್ಗೆ ಆತನ ಸಂಬಂಧಿಕರೂ ಸೇರಿ ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ‌. ಈ ಒಂದು ಋಣಾತ್ಮಕ ಜನಪ್ರಿಯತೆಯ ಘಾಸಿಯಿಂದ ಹೊರಬರಲು ಆತನಿಗೆ ಹಲವು ವರ್ಷಗಳೇ ಬೇಕಾಗುತ್ತದೆ. ಆದ್ದರಿಂದ, ಯುವ ವಕೀಲರ ಕಾರ್ಯಕ್ಷಮತೆ ಬಗ್ಗೆ ವ್ಯತಿರಿಕ್ತವಾಗಿ ಕಾಮೆಂಟ್ ಮಾಡುವಾಗ ನಾವು ಅವರ ಭವಿಷ್ಯವನ್ನು ಅಪಾಯಕ್ಕೆ ದೂಡುತ್ತಿದ್ದೇವೆ ಎಂಬ ಅರಿವು ನಮ್ಮಲ್ಲಿ‌ ಇರಬೇಕಾಗುತ್ತದೆ. ಕಲಾಪದ ನೇರ ಪ್ರಸಾರದ ವೇಳೆ ವಕೀಲರು ಮತ್ತವರ ಕಾರ್ಯಕ್ಷಮತೆ ಬಗ್ಗೆ ಪ್ರತಿಕ್ರಿಯಿಸುವಾಗ ನ್ಯಾಯಮೂರ್ತಿಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಇದು ಲಘುವಾಗಿ ಪರಿಗಣಿಸುವ ವಿಚಾರವಲ್ಲ. ವಕೀಲರ ಸಂಘದ ಅಧ್ಯಕ್ಷರಾಗಿ ಈ ಪ್ರಮುಖ ವಿಚಾರವನ್ನು ಒತ್ತಿ ಹೇಳುತ್ತಿದ್ದೇನೆ ಎಂದು ವಿವೇಕ್ ರೆಡ್ಡಿ ಪತ್ರದಲ್ಲಿ ಹೇಳಿದ್ದಾರೆ.

ಅನೇಕ ನ್ಯಾಯಮೂರ್ತಿಗಳು ಈ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸುತ್ತಿದ್ದು, ವಕೀಲರ ಕಾರ್ಯಕ್ಷಮತೆ ಬಗ್ಗೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡುವುದರಿಂದ ದೂರ ಉಳಿದಿದ್ದಾರೆ. ಆದರೆ, ಕೆಲವರು ವಕೀಲರ ಭವಿಷ್ಯಕ್ಕೆ ತೊಂದರೆಯಾಗಬಾರದೆಂಬ ಕಾಳಜಿ ವಹಿಸಿ ಸಂವೇದನೆಶೀಲತೆಯಿಂದ ವರ್ತಿಸಬೇಕಾದ ಅಗತ್ಯವಿದೆ. ಆದ್ದರಿಂದ, ನ್ಯಾಯಮೂರ್ತಿಗಳು ವಕೀಲರ ವೈಯಕ್ತಿಕ ಕಾರ್ಯಕ್ಷಮತೆ ಬಗ್ಗೆ ಅಭಿಪ್ರಾಯ ನೀಡುವುದನ್ನು ಬಿಟ್ಟು, ಪ್ರಕರಣದ ಕಾನೂನಾತ್ಮಕ ಅಂಶಗಳ‌ ಮೇಲೆ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ವಿವೇಕ್ ರೆಡ್ಡಿ ಪತ್ರದಲ್ಲಿ ಮನವಿ ಮಾಡಿದ್ದಾರೆ.

Attachment
PDF
LETTER OF AAB TO CJ OF KARNATAKA ON DANGERS OF LIVE STREAMING - & DEMAND NOT TO COMMENT ON LAWYERS.pdf
Preview
Kannada Bar & Bench
kannada.barandbench.com