AAB
AAB 
ಸುದ್ದಿಗಳು

ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಯವರಿಗೆ ಎಎಬಿ ಪತ್ರ

Bar & Bench

ದೆಹಲಿಯ ನ್ಯಾಯಾಲಯವೊಂದರಲ್ಲಿ ಶುಕ್ರವಾರ ನಡೆದ ಶೂಟೌಟ್‌ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ವಕೀಲರ ರಕ್ಷಣಾ ಕಾಯಿದೆಯನ್ನು ಸುಗ್ರೀವಾಜ್ಞೆ ಮೂಲಕ ತುರ್ತಾಗಿ ಜಾರಿಗೆ ತರಬೇಕು ಎಂದು ಬೆಂಗಳೂರು ವಕೀಲರ ಸಂಘ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶನಿವಾರ ಪತ್ರ ಬರೆದಿರುವ ಸಂಘವು, ತಾವು ಈ ಮೊದಲು ಗೃಹ ಮತ್ತು ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ವಕೀಲರ ರಕ್ಷಣಾ ಕಾಯಿದೆ ಜಾರಿಗೆ ತರಲು ಮನವಿ ಮಾಡಲಾಗಿತ್ತು. ಮುಖ್ಯಂಮಂತ್ರಿಗಳಾಗಿ ಈಗ ವಕೀಲರ ರಕ್ಷಣಾ ಕಾಯಿದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಬೇಕು ಎಂದು ಕೋರಿದೆ.

ಅಲ್ಲದೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ನ್ಯಾಯಾಲಯಗಳಲ್ಲಿ ವಕೀಲರ ಮೇಲೆ ಹಲ್ಲೆ, ಹತ್ಯೆ, ಪ್ರಾಣಬೆದರಿಕೆಯಂತಹ ಘಟನೆಗಳು ನ್ಯಾಯಾಲಯದ ಆವರಣದಲ್ಲಿಯೇ ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವ ಧ್ಯೋತಕವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತುರ್ತಾಗಿ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸಬೇಕು. ಇಂತಹ ಘಟನೆಗಳಿಂದಾಗಿ ವಕೀಲರು ಭೀತಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಿದೆ ಎಂದು ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ನವದೆಹಲಿಯ ರೋಹಿಣಿ ನ್ಯಾಯಾಲಯದ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಶೂಟೌಟ್‌ನಲ್ಲಿ ಗ್ಯಾಂಗ್‌ಸ್ಟರ್‌ ಜಿತೇಂದ್ರ ಗೋಗಿ ಹಾಗೂ ಮತ್ತಿಬ್ಬರು ಗುಂಡಿಗೆ ಬಲಿಯಾಗಿದ್ದರು. ವಕೀಲರ ವೇಷದಲ್ಲಿದ್ದ ಇಬ್ಬರು ದಾಳಿಕೋರರು ಗೋಗಿಯ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದರು. ಆರೋಪಿಗಳನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದರು.