<div class="paragraphs"><p>Allahabad High Court and Aadhar with Justice Shekhar Yadav</p></div>

Allahabad High Court and Aadhar with Justice Shekhar Yadav

 
ಸುದ್ದಿಗಳು

ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌: ಸುಪ್ರೀಂ ತೀರ್ಪು ಮರು ಪರಿಶೀಲನಾ ಮನವಿ ಸಲ್ಲಿಕೆಗೆ ಅಲಾಹಾಬಾದ್‌ ಹೈಕೋರ್ಟ್‌ ಸಹಮತ

Bar & Bench

ಬ್ಯಾಂಕ್‌ ಜೊತೆ ಆಧಾರ್‌ ಸಂಖ್ಯೆ ಲಿಂಕ್‌ ಮಾಡುವುದು ಕಡ್ಡಾಯವಲ್ಲ ಎಂದು 2018ರಲ್ಲಿ ನ್ಯಾಯಮೂರ್ತಿ ಕೆ ಎಸ್‌ ಪುಟ್ಟಸ್ವಾಮಿ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ಆದೇಶದ ಪುನರ್‌ ಪರಿಶೀಲನೆಗೆ ಮನವಿ ಸಲ್ಲಿಸಲು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಸಹಮತ ವ್ಯಕ್ತಪಡಿಸಿದೆ.

ಅಲಾಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪೂನಮ್‌ ಶ್ರೀವಾಸ್ತವ ಅವರಿಗೆ ಆನ್‌ಲೈನ್‌ ಮೂಲಕ ವಂಚನೆ ಮಾಡಿದ್ದ ನಾಲ್ವರು ಆರೋಪಿಗಳ ಜಾಮೀನು ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶೇಖರ್‌ ಯಾದವ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಈ ಸಂದರ್ಭದಲ್ಲಿ ಪೀಠವು “ಆನ್‌ಲೈನ್‌ ವಂಚನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬ್ಯಾಂಕ್‌ ಖಾತೆದಾರರ ಸಂಖ್ಯೆಗೆ ಆಧಾರ್‌ ಲಿಂಕ್‌ ಮಾಡುವ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರುಪರಿಶೀಲಿಸುವ ಕುರಿತು ಪುನರ್‌ ಪರಿಶೀಲನಾ ಮನವಿ ಸಲ್ಲಿಸುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ಪಿ ಸಿಂಗ್‌ ಅವರ ವಾದಕ್ಕೆ ನ್ಯಾಯಾಲಯ ಸಹಮತ ಹೊಂದಿದೆ” ಎಂದು ಹೇಳಿದೆ.

ಬ್ಯಾಂಕ್‌ ಖಾತೆಗಳ ಜೊತೆ ಆಧಾರ್‌ ಲಿಂಕ್‌ ಕಡ್ಡಾಯ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನಿರಾಕರಿಸಿತ್ತು. ಇದರಿಂದ ಬ್ಯಾಂಕ್‌ಗಳು ಗ್ರಾಹಕರಿಗೆ ಆಧಾರ್‌ ಕಾರ್ಡ್‌ ನೀಡುವಂತೆ ಒತ್ತಡ ಹಾಕಲಾಗುತ್ತಿಲ್ಲ ಎಂದು ನ್ಯಾ. ಯಾದವ್‌ ಹೇಳಿದ್ದಾರೆ.

“ಬ್ಯಾಂಕ್‌ಗಳು ಗ್ರಾಹಕರ ಹಣದ ಬಗ್ಗೆ ಎಚ್ಚರಿಕೆ ವಹಿಸಬೇಕು. ಗ್ರಾಹಕರ ಖಾತೆಯಲ್ಲಿ ನುಸುಳಿ ವಂಚಕರು ಹಣ ದೋಚಿದರೆ ಬ್ಯಾಂಕ್‌ಗಳು ಜವಾಬ್ದಾರಿ ತೆಗೆದುಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.

ಬ್ಯಾಂಕ್‌ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿ ನಿವೃತ್ತ ನ್ಯಾಯಮೂರ್ತಿ ಪೂನಮ್‌ ಶ್ರೀವಾಸ್ತವ ಅವರ ಬ್ಯಾಂಕ್‌ ಖಾತೆಯ ಮಾಹಿತಿ ಪಡೆದು ಆರೋಪಿಗಳು ₹5 ಲಕ್ಷ ದೋಚಿದ್ದ ಕುರಿತು ಅವರು 2020ರ ಡಿಸೆಂಬರ್‌ 4ರಲ್ಲಿ ಪ್ರಕರಣ ದಾಖಲಿಸಿದ್ದರು.