ಆಧಾರ್‌ ಜೊತೆ ಮತದಾರರ ಚೀಟಿ ಸಂಪರ್ಕ ಕಲ್ಪಿಸುವ ಚುನಾವಣಾ ಕಾನೂನು ಮಸೂದೆಗೆ ಲೋಕಸಭೆ ಅಂಕಿತ

ಮತದಾರರಾಗಿ ನೋಂದಾಯಿಸಲು ಬಯಸುವ ಜನರ "ಗುರುತು ಪತ್ತೆ ಉದ್ದೇಶಕ್ಕಾಗಿ" ಆಧಾರ್ ಸಂಖ್ಯೆ ಪಡೆಯಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅವಕಾಶ ಮಾಡಿಕೊಡುತ್ತದೆ.
Aadhaar

Aadhaar

ಆಧಾರ್‌ ಸಂಖ್ಯೆ ಜೊತೆ ಮತದಾರರ ಗುರುತಿನ ಚೀಟಿಯನ್ನು ಜೋಡಿಸುವುದಕ್ಕೆ ಚುನಾವಣಾ ಆಯೋಗಕ್ಕೆ ಅವಕಾಶ ಮಾಡಿಕೊಡುವ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ 2021ಕ್ಕೆ ಸೋಮವಾರ ಲೋಕಸಭೆಯಲ್ಲಿ ಅನುಮೋದನೆ ದೊರೆತಿದೆ.

ಮತದಾರರಾಗಿ ನೋಂದಾಯಿಸಲು ಬಯಸುವ ಜನರ "ಗುರುತು ಪತ್ತೆ ಉದ್ದೇಶಕ್ಕಾಗಿ" ಆಧಾರ್ ಸಂಖ್ಯೆ ಪಡೆಯಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅವಕಾಶ ಮಾಡಿಕೊಡುತ್ತದೆ.

ಈಗಾಗಲೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ವ್ಯಕ್ತಿಗಳ ಕುರಿತಾದ ಮತದಾರರ ಪಟ್ಟಿಯಲ್ಲಿನ ವಿವಿಧ ಕಲಮುಗಳ ದೃಢೀಕರಣದ ಉದ್ದೇಶಕ್ಕಾಗಿ ಹಾಗೂ ಒಂದಕ್ಕಿಂತ ಹೆಚ್ಚಿನ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ವ್ಯಕ್ತಿಯೊಬ್ಬರು ಹೆಸರು ನಮೂದಾಗಿದ್ದರೆ ಅದನ್ನು ಪತ್ತೆ ಹಚ್ಚುವ ಸಲುವಾಗಿ ಆಧಾರ್‌ ಸಂಖ್ಯೆಯನ್ನು ಜನರಿಂದ ಕೋರಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಈ ಮಸೂದೆ ಅವಕಾಶ ಮಾಡಿಕೊಡಲಿದೆ.

ಪ್ರಜಾ ಪ್ರತಿನಿಧಿ ಕಾಯಿದೆ 1950ರ ಸೆಕ್ಷನ್‌ 23ಕ್ಕೆ ಉಪ ಸೆಕ್ಷನ್‌ (3) ಅನ್ನು ಸೇರಿಸಲಾಗಿದೆ. ಆಧಾರ್‌ (ಆರ್ಥಿಕ ಮತ್ತು ಇತರೆ ಪ್ರೋತ್ಸಾಹಧನ ಹಾಗೂ ಸವಲತ್ತು ಮತ್ತು ಸೇವೆಗಳನ್ನು ಗುರಿ ಕೇಂದ್ರಿತವಾಗಿ ಒದಗಿಸುವ) ಕಾಯಿದೆ 2016ರ ನಿಬಂಧನೆಯ ಪ್ರಕಾರ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ನೀಡಿರುವ ಆಧಾರ್‌ ಸಂಖ್ಯೆಯನ್ನು ಚುನಾವಣಾ ನೋಂದಣಿ ಅಧಿಕಾರಿಯು ಯಾವುದೇ ವ್ಯಕ್ತಿಯ ಗುರುತಿನ ದೃಢೀಕರಣದ ಸಲುವಾಗಿ ಅಂತಹ ವ್ಯಕ್ತಿಯ ಆಧಾರ್‌ ಸಂಖ್ಯೆ ಕೇಳಬಹುದಾಗಿದೆ.

ಸೇನೆ ಮತ್ತಿತರ ಸೇವೆಗಳಲ್ಲಿರುವವರ ಜೀವನ ಸಂಗಾತಿಗಳಿಗೆ ಮತದಾನ ಕಲ್ಪಿಸುವ ಪ್ರಜಾ ಪ್ರತಿನಿಧಿ ಕಾಯಿದೆಯ ಸೆಕ್ಷನ್‌ಗಳಾದ 20 ಮತ್ತು 60ರಲ್ಲಿ ಲಿಂಗ ತಟಸ್ಥತೆ ಸಾಧಿಸುವ ಉದ್ದೇಶದಿಂದ ತಿದ್ದುಪಡಿ ಮಾಡಲು ಸಹ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಇದರ ಅನ್ವಯ ಈ ಸೆಕ್ಷನ್‌ಗಳಲ್ಲಿ 'ಪತ್ನಿ' ಎನ್ನುವ ಪದದ ಬದಲಿಗೆ 'ಸಂಗಾತಿ' ಎಂದು ಬದಲಿಸುವ ಮೂಲಕ ಲಿಂಗ ತಟಸ್ಥತೆ ಸಾಧಿಸಲು ಮುಂದಾಗಲಾಗಿದೆ ಎಂದು ಹೇಳಲಾಗಿದೆ.

Also Read
ಪುದುಚೆರಿ ಬಿಜೆಪಿ ಪ್ರಚಾರ: ಆಧಾರ್‌ ಮಾಹಿತಿ ಸೋರಿಕೆ ಬಗ್ಗೆ ವಿಶ್ವಾಸಾರ್ಹ ಸಾಕ್ಷ್ಯ; ತನಿಖೆಗೆ ಹೈಕೋರ್ಟ್ ಆದೇಶ

ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು “ಈ ಕಾನೂನಿನಿಂದ ದೇಶದಲ್ಲಿ ನಕಲಿ ಮತದಾನಕ್ಕೆ ತಡೆ ಬೀಳಲಿದ್ದು, ಮತ್ತಷ್ಟು ಪಾರದರ್ಶಕತೆ ಸಾಧ್ಯ” ಎಂದರು.

ಮಸೂದೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷಗಳು “ಉದ್ದೇಶಿತ ಮಸೂದೆಯು ಆಧಾರ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿದೆ” ಎಂದು ಆಕ್ಷೇಪಿಸಿವೆ. ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು “ಆಧಾ‍ರ್‌ ವಸತಿಯ ಪುರಾವೆಯೇ ವಿನಾ ಪೌರತ್ವದ ಪುರಾವೆಯಲ್ಲ” ಎಂದು ಪ್ರಮುಖ ಆಕ್ಷೇಪವನ್ನು ಎತ್ತಿದ್ದಾರೆ.

Related Stories

No stories found.
Kannada Bar & Bench
kannada.barandbench.com