ಸುದ್ದಿಗಳು

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಒಂದೇ ಮಾನದಂಡವಲ್ಲ: ಬಾಂಬೆ ಹೈಕೋರ್ಟ್

Bar & Bench

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಒಂದು ಮಾನದಂಡವಾಗಿದ್ದು ಆದರೆ ಅದುವೇ ಏಕೈಕ ಮಾನದಂಡವಲ್ಲ ಎಂದು ಬಾಂಬೆ ಹೈಕೋರ್ಟ್‌ ಕಳೆದ ವಾರ ತಿಳಿಸಿದೆ (ಗಣಪತ್ ಧರ್ಮ ಮೆಂಗಲ್ ಮತ್ತಿತರರು ಹಾಗೂ ತಹಸೀಲ್ದಾರ್ ಕಚೇರಿ, ಮುರ್ಬಾದ್ ಮತ್ತಿತರರ ನಡುವಣ ಪ್ರಕರಣ).

ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಪ್ರಯೋಜನಗಳನ್ನು ಪಡೆಯಲು ಫಲಾನುಭವಿಯು ಅವಲಂಬಿಸಬಹುದಾದ ಮತ್ತೊಂದು ದಾಖಲೆಯಿದ್ದು ಅದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ನೀಡಲಾದ ʼಪಡಿತರ ಕಾರ್ಡ್ʼಎಂದು ನ್ಯಾಯಾಲಯ ಹೇಳಿದೆ.

ಈ ನಿಟ್ಟಿನಲ್ಲಿ, ಫಲಾನುಭವಿಗಳನ್ನು ಗುರುತಿಸಲು ಆಧಾರ್ ಏಕೈಕ ಮಾನದಂಡವಲ್ಲ ಎಂದು ಕೇಂದ್ರ ಸರ್ಕಾರ ಫೆಬ್ರವರಿ 2017ರಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ತಿಳಿಸಿದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಆದ್ದರಿಂದ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಪ್ರಯೋಜನಗಳನ್ನು ಪಡೆಯಲು ಅಕ್ಟೋಬರ್ 13, 2016 ರಂದು ಮಹಾರಾಷ್ಟ್ರ ಸರ್ಕಾರ ಕೈಗೊಂಡಿದ್ದ ಸರ್ಕಾರಿ ನಿರ್ಣಯ (ಜಿಆರ್) ಫೆಬ್ರವರಿ 8, 2017 ರಂದು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ಸಂಪೂರ್ಣ ವ್ಯತಿರಿಕ್ತವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಇದರ ಆಧಾರದ ಮೇಲೆ ಆರ್‌ಸಿಎಂಎಸ್ ವ್ಯವಸ್ಥೆ / ಪೋರ್ಟಲ್‌ಗೆ ಆಧಾರ್ ಕಾರ್ಡ್ ಲಿಂಕ್‌ ಪಡೆಯದ ಥಾಣೆ ಜಿಲ್ಲೆಯ ಮುರ್ಬಾದ್‌ ಪ್ರದೇಶದ ಬುಡಕಟ್ಟು ಜನರಿಗೂ ಆಹಾರ ಧಾನ್ಯ ವಿತರಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ಜನ ಹಬ್ಬ ಹರಿದಿನಗಳನ್ನು ಆಚರಿಸುತ್ತಿರುವಾಗ ಸಮಾಜದ ಅಂಚಿನಲ್ಲಿರುವ ವರ್ಗಗಳು ಮೂಲಭೂತ ಅವಶ್ಯಕತೆಯಾದ ಆಹಾರಕ್ಕಾಗಿ ಬಲವಂತವಾಗಿ ನ್ಯಾಯಾಲಯದ ಮೊರೆ ಹೋಗುವಂತಾದದ್ದು ನಿರಾಶಾದಾಯಕ ಸ್ಥಿತಿ ಎಂದು ಕೂಡ ನ್ಯಾಯಾಲಯ ಖೇದ ವ್ಯಕ್ತಪಡಿಸಿತು.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಹಾಗೂ ಪಿಡಿಎಸ್‌ ಸ್ಕೀಂನಡಿಯ ನಿಬಂಧನೆಗಳಿಗೆ ಅನುಗುಣವಾಗಿ ಬುಡಕಟ್ಟು ಜನರಿಗೆ ಆಹಾರ ಧಾನ್ಯಗಳನ್ನು ವಿತರಿಸಲು ನಾಗರಿಕ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶಿಸಿತು.

"ಆಹಾರ ಧಾನ್ಯಗಳ ವಿತರಣೆಯ ಪ್ರಯೋಜನಗಳನ್ನು ಅರ್ಜಿದಾರರಿಗೆ ನಿರಾಕರಿಸಲು ಯಾವುದೇ ತರ್ಕ, ಕಾರಣ ಅಥವಾ ನ್ಯಾಯೋಚಿತತೆ ನಮಗೆ ಕಂಡುಬರುತ್ತಿಲ್ಲ ಮತ್ತು ಪ್ರತಿಕ್ರಿಯಿಸಿದ ಅಧಿಕಾರಿಗಳು ಕೆಲವು ತಾಂತ್ರಿಕ ಕಾರಣಗಳನ್ನು ಎತ್ತುತ್ತಾರೆ" ಎಂದು ಪೀಠ ಹೇಳಿದೆ.

ಗೌರವಯುತ ಜೀವನ ನಡೆಸುವುದು ಸಾಂವಿಧಾನಿಕ ಆಶ್ವಾಸನೆ ಎಂದು ಸುಪ್ರೀಂಕೋರ್ಟ್ ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ನ್ಯಾಯಾಲಯ ಅವಲಂಬಿಸಿತ್ತು. ನವೆಂಬರ್ 4, 2021 ರೊಳಗೆಇಡೀ ಪ್ರಕ್ರಿಯೆಪೂರ್ಣಗೊಳಿಸಲು ಪೀಠ ಅಧಿಕಾರಿಗಳಿಗೆನಿರ್ದೇಶನ ನೀಡಿದೆ.