ಮೋಟಾರು ಅಪಘಾತ ಪ್ರಕರಣದ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾದ ಜನ್ಮ ದಿನಾಂಕವನ್ನು ಬಳಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿತು [ಸರೋಜ್ ಮತ್ತಿತರರು ಹಾಗೂ ಇಫ್ಕೋ-ಟೋಕಿಯೊ ಜನರಲ್ ಇನ್ಶುರೆನ್ಸ್ ಕಂಪನಿ ಇನ್ನಿತರರ ನಡುವಣ ಪ್ರಕರಣ].
ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾದ ಜನ್ಮ ದಿನಾಂಕಕ್ಕೆ ಬದಲು, ಶಾಲಾ ವರ್ಗಾವಣೆ ಪ್ರಮಾಣಪತ್ರದಲ್ಲಿ ನಮೂದಿಸಲಾದ ಜನ್ಮ ದಿನಾಂಕದಿಂದ ಮೃತಪಟ್ಟವರ ವಯಸ್ಸನ್ನು ಅಧಿಕೃತವಾಗಿ ನಿರ್ಧರಿಸಬಹುದು ಎಂಬುದಾಗಿ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿದೆ.
ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ ಸೆಕ್ಷನ್ 94 ರ ಅಡಿಯಲ್ಲಿ ಶಾಲಾ ವರ್ಗಾವಣೆ ಪ್ರಮಾಣಪತ್ರದಲ್ಲಿ ನಮೂದಿಸಲಾದ ಜನ್ಮ ದಿನಾಂಕ ಶಾಸನಬದ್ಧ ಮಾನ್ಯತೆ ಪಡೆದಿದೆ ಎಂದು ನ್ಯಾಯಾಲಯ ಹೇಳಿದೆ.
ಮೋಟಾರು ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ನೀಡುವ ಸಲುವಾಗಿ ಒದಗಿಸಲಾಗಿದ್ದ ಸಂತ್ರಸ್ತರ ಶಾಲಾ ವರ್ಗಾವಣೆ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾಗಿದ್ದ ಜನ್ಮ ದಿನಾಂಕಗಳಲ್ಲಿ ವ್ಯತ್ಯಾಸ ಬಂದಿದ್ದರಿಂದ ಪ್ರಕರಣ ನ್ಯಾಯಾಲಯದ ಅಂಗಳ ತಲುಪಿತ್ತು.
ಸಂತ್ರಸ್ತರ ಕಾನೂನಾತ್ಮಕ ಪ್ರತಿನಿಧಿಗಳಿಗೆ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಮೊದಲು ₹ 19,35,400 ಪರಿಹಾರ ನೀಡಿತ್ತು. ಆದರೆ ವಯಸ್ಸನ್ನು ತಪ್ಪಾಗಿ ನಮೂದಿಸಿರುವುದನ್ನು ಪರಿಗಣಿಸಿದ ಹೈಕೋರ್ಟ್ ಪರಿಹಾರ ಮೊತ್ತವನ್ನು ₹ 9,22,336ಕ್ಕೆ ಇಳಿಸಿತ್ತು.
ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾಗಿದ್ದ ದಿನಾಂಕ ಆಧರಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸಂತ್ರಸ್ತರ ಕಾನೂನು ಪ್ರತಿನಿಧಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಅರ್ಜಿದಾರರ ವಾದ ಮನ್ನಿಸಿದ ಸುಪ್ರೀಂ ಕೋರ್ಟ್, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) 2023 ರ ಸುತ್ತೋಲೆಯಲ್ಲಿ ತಿಳಿಸಿರುವ ಪ್ರಕಾರ ಗುರುತು ಪತ್ತೆಗಾಗಿ ಆಧಾರ್ ಕಾರ್ಡನ್ನು ಬಳಸಬಹುದೇ ವಿನಾ ಜನ್ಮ ದಿನಾಂಕ ಪುರಾವೆಯಾಗಿ ಅಲ್ಲ ಎಂದಿದೆ. ಆ ಮೂಲಕ ಅರ್ಜಿದಾರರಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ₹ 15 ಲಕ್ಷಕ್ಕೆ ಹೆಚ್ಚಿಸಿದೆ.
ಆಧಾರ್ ಕಾರ್ಡ್‌ನಲ್ಲಿ ಅಪಘಾತದಲ್ಲಿ ಮೃತರಾದ ವ್ಯಕ್ತಿಯ ವಯಸ್ಸು 47 ಎಂದಿದ್ದರೆ, ಶಾಲಾ ವರ್ಗಾವಣೆ ಪತ್ರದಲ್ಲಿ ಅದು 45 ಎಂದಿತ್ತು. ಅಂತಿಮವಾಗಿ ನ್ಯಾಯಾಲಯವು ಶಾಲಾ ವರ್ಗಾವಣೆ ಪತ್ರದ ಜನ್ಮ ದಿನಾಂಕವನ್ನು ಪರಿಗಣಿಸಿ ಪರಿಹಾರ ನಿಗದಿಪಡಿಸಿತು.