ಶಾಲೆಗಳು ವಿದ್ಯಾರ್ಥಿಯ ವರ್ಗಾವಣೆ ಪ್ರಮಾಣಪತ್ರವನ್ನು (ಟಿಸಿ) ಶುಲ್ಕದ ಬಾಕಿ ವಸೂಲಿ ಮಾಡುವ ಸಾಧನವಾಗಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಶುಕ್ರವಾರ ಎಚ್ಚರಿಕೆ ನೀಡಿರುವ ಮದ್ರಾಸ್ ಹೈಕೋರ್ಟ್ ಶಾಲಾ ಪ್ರವೇಶಾತಿಗೆ ಹಿಂದಿನ ಸಂಸ್ಥೆಗಳ ವರ್ಗಾವಣೆ ಪ್ರಮಾಣಪತ್ರ ತರುವಂತೆ ಒತ್ತಾಯಿಸಬಾರದು ಎಂದು ರಾಜ್ಯದ ಎಲ್ಲಾ ಶಾಲಾ ಆಡಳಿತ ಮಂಡಳಿಗೆ ಸುತ್ತೋಲೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ವಿದ್ಯಾರ್ಥಿಗಳು ಹಣ ಪಾವತಿಸಿಲ್ಲ ಅಥವಾ ಹಣ ಪಾವತಿ ವಿಳಂಬವಾಗಿದೆ ಎಂಬಂತಹ ಅನಗತ್ಯ ವಿವರಗಳನ್ನು ಟಿಸಿಗಳಲ್ಲಿ ನಮೂದಿಸುವುದನ್ನು ಶಾಲೆಗಳು ನಿಷೇಧಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣ್ಯಂ ಮತ್ತು ಸಿ ಕುಮಾರಪ್ಪನ್ ಅವರಿದ್ದ ಪೀಠ ಹೇಳಿದೆ.
ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಮತ್ತು ನಿಯಮಗಳು ಶಿಕ್ಷಣದ ಹಕ್ಕು (ಆರ್‌ಟಿಇ) ಕಾಯಿದೆಗೆ ಅನುಗುಣವಾಗಿವೆ ಎಂದು ಖಚಿತಪಡಿಸಿಕೊಳ್ಳಲು ತಮಿಳುನಾಡು ಶಿಕ್ಷಣ ನಿಯಮಾವಳಿ ಮತ್ತು ಮೆಟ್ರಿಕ್ಯುಲೇಷನ್ ಶಾಲೆಗಳ ನಿಯಂತ್ರಣ ಸಂಹಿತೆಗೆ ತಿದ್ದುಪಡಿ ಮಾಡುವುದನ್ನು ತಮಿಳುನಾಡು ಸರ್ಕಾರ ಪರಿಗಣಿಸಬೇಕು ಎಂದು ಅದು ಹೇಳಿದೆ.
ಎಲ್ಲಾ ಶುಲ್ಕ ಪಾವತಿಸುವವರೆಗೆ ವಿದ್ಯಾರ್ಥಿಗೆ ಟಿಸಿ ನೀಡದಿರುವುದು ಇಲ್ಲವೇ ಟಿಸಿಯಲ್ಲಿ ಶುಲ್ಕ ಪಾವತಿಸಬೇಕಾದ ವಿಚಾರವನ್ನು ಉಲ್ಲೇಖಿಸುವುದು ಆರ್‌ಟಿಇ ಕಾಯಿದೆಯ ಉಲ್ಲಂಘನೆಯಾಗಿದ್ದು ಆರ್ಟಿಇ ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ಮಾನಸಿಕ ಕಿರುಕುಳವಾಗುತ್ತದೆ ಎಂದು ಪೀಠ ಹೇಳಿದೆ.
ಪಾಲಕರಿಂದ ಬಾಕಿ ಶುಲ್ಕ ಸಂಗ್ರಹಿಸುವ ಅಥವಾ ಪೋಷಕರ ಆರ್ಥಿಕ ಸಾಮರ್ಥ್ಯ ಅಳೆಯುವ ಸಾಧನ ಟಿಸಿ ಅಲ್ಲ. ಅದು ಮಗುವಿನ ಹೆಸರಿನಲ್ಲಿ ನೀಡುವ ವೈಯಕ್ತಿಕ ದಾಖಲೆಯಾಗಿದೆ. ಟಿಸಿಯಲ್ಲಿ ಅನಗತ್ಯ ವಿವರ ಸೇರಿಸುವ ಮೂಲಕ ಶಾಲೆಗಳು ತಮ್ಮ ಸ್ವಂತದ ಸಮಸ್ಯೆಗಳನ್ನು ಮಗುವಿನ ಮೇಲೆ ಹಾಕುವಂತಿಲ್ಲ. ಶಾಲೆಗಳಿಗೆ ಬೋಧನಾ ಶುಲ್ಕ ಪಾವತಿಸುವುದು ಪೋಷಕರ ಕರ್ತವ್ಯವಾಗಿದೆ. ಅದನ್ನು ಪೋಷಕರಿಂದ ಅವು ವಸೂಲಿ ಮಾಬೇಕು. ಬದಲಿಗೆ ಮಗುವಿನ ಟಿಸಿಯಲ್ಲಿ ಶುಲ್ಕ ಪಾವತಿಸದಿರುವುದನ್ನು ಪ್ರಸ್ತಾಪಿಸುವುದು ಮಗುವಿಗೆ ಮಾಡುವ ಒಟ್ಟಾರೆ ಅವಮಾನವಾಗಿದೆ. ಪೋಷಕರು ಶುಲ್ಕ ಪಾವತಿಸಲು ವಿಫಲವಾದರೆ ಮಗು ಏನು ಮಾಡಲು ಸಾಧ? ಇದು ಮಗುವಿನ ತಪ್ಪಲ್ಲ. ಮಗುವಿಗೆ ಕಳಂಕ ತರುವುದು, ಕಿರುಕುಳ ನೀಡುವುದು ಆರ್‌ಟಿಇ ಕಾಯಿದೆಯ ಸೆಕ್ಷನ್ 17 ರ ಅಡಿಯಲ್ಲಿ ಒಂದು ರೀತಿಯಲ್ಲಿ ಮಾನಸಿಕ ಕಿರುಕುಳವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
"ವಿದ್ಯಾರ್ಥಿಯು ಪಾವತಿಸಬೇಕಾದ ಶುಲ್ಕದ ಬಾಕಿಯನ್ನು ವರ್ಗಾವಣೆ ಪತ್ರದಲ್ಲಿ ಪ್ರಸ್ತಾಪಿಸುವುದರಿಂದ ವಿದ್ಯಾರ್ಥಿ/ಪೋಷಕರ ವಿರುದ್ಧ ಯಾವುದೇ ಋಣಾತ್ಮಕ ಪರಿಣಾಮ ಉಂಟಾಗುವುದಿಲ್ಲ" ಎಂಬ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶಗಳನ್ನು ನೀಡಿದೆ.
ಅರ್ಜಿ ಸಲ್ಲಿಸಿದ್ದ ತಮಿಳುನಾಡು ಸರ್ಕಾರದ ಪರವಾಗಿ ಸರ್ಕಾರಿ ವಿಶೇಷ ವಕೀಲ (ಶಿಕ್ಷಣ) ಯುಎಂ ರವಿಚಂದ್ರನ್ ವಾದ ಮಂಡಿಸಿದರು. ಅಖಿಲ ಭಾರತ ಖಾಸಗಿ ಶಾಲೆಗಳ ಕಾನೂನು ಸಂರಕ್ಷಣಾ ಸೊಸೈಟಿಯ ಪರವಾಗಿ ಹಿರಿಯ ವಕೀಲ ಜಿ ಶಂಕರನ್ ಮತ್ತು ವಕೀಲ ಎಸ್ ನೆಡುಂಚೆಜಿಯನ್ ವಾದ ಮಂಡಿಸಿದರು.