Justice Talwant Singh 
ಸುದ್ದಿಗಳು

ಆಕಾರ್ ಪಟೇಲ್ ಎಲ್ಒಸಿ: ಸಿಬಿಐ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಸಿಂಗ್

ಆಕಾರ್ ವಿರುದ್ಧ ತಾನು ಹೊರಡಿಸಿದ್ದ ಲುಕ್ ಔಟ್ ಸುತ್ತೋಲೆ ರದ್ದುಗೊಳಿಸಿದ ಆದೇಶ ಎತ್ತಿಹಿಡಿದಿದ್ದ ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ.

Bar & Bench

ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿರುದ್ಧ ಸಿಬಿಐ ಹೊರಡಿಸಿದ್ದ ಲುಕ್ ಔಟ್ ಸುತ್ತೋಲೆಯನ್ನು ರದ್ದುಗೊಳಿಸಿದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ತಲವಂತ್ ಸಿಂಗ್ ಬುಧವಾರ ಹಿಂದೆ ಸರಿದಿದ್ದಾರೆ [ಸಿಬಿಐ ಮತ್ತು ಆಕರ್ ಪಟೇಲ್ ನಡುವಣ ಪ್ರಕರಣ].

ಆಕಾರ್‌ ವಿರುದ್ಧ ಸಿಬಿಐ ನೀಡಿದ್ದ ಎಲ್‌ಒಸಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ರದ್ದುಗೊಳಿಸಿತ್ತು. ಇತ್ತ ಸಿಬಿಐ ನಿರ್ದೇಶಕರು ಆಕಾರ್‌ ಪಟೇಲ್‌ ಕ್ಷಮೆ ಯಾಚಿಸಬೇಕು ಎಂಬ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿದ ಸಿಬಿಐ ವಿಶೇಷ ನ್ಯಾಯಾಲಯ ಮತ್ತೊಂದೆಡೆ ಎಲ್‌ಒಸಿ ರದ್ದುಗೊಳಿಸಿದ ಆದೇಶವನ್ನು ಎತ್ತಿ ಹಿಡಿದಿತ್ತು. ಎಲ್‌ಒಸಿ ರದ್ದುಗೊಳಿಸಿದ ಆದೇಶ ಪುರಸ್ಕರಿಸಿರುವುದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ ಮೆಟ್ಟಿಲೇರಿದೆ.

ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಹಾಗೂ ಆಕಾರ್‌ ಪರವಾಗಿ ವಕೀಲ ತನ್ವೀರ್‌ ಅಹ್ಮದ್‌ ಪಟೇಲ್‌ ವಾದ ಮಂಡಿಸುತ್ತಿದ್ದ ಸಮಯದಲ್ಲಿ ನ್ಯಾಯಮೂರ್ತಿ ಸಿಂಗ್‌ ಅವರು ವಿಚಾರಣೆಯಿಂದ ಹಿಂದೆ ಸರಿಯುತ್ತಿರುವ ಅಂಶವನ್ನು ತಿಳಿಸಿದರು.

ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯಡಿ ದಾಖಲಿಸಿದ್ದ ಪ್ರಕರಣದಲ್ಲಿ ಆಕಾರ್ ಅವರ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಟೇಲ್‌ ಅವರನ್ನು ಅಮೆರಿಕಕ್ಕೆ ತೆರಳದಂತೆ ಏಪ್ರಿಲ್‌ 6ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಸಿಬಿಐನ ಈ ಕ್ರಮವನ್ನು ಆಕಾರ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.