Aakar Patel and CBI
Aakar Patel and CBI 
ಸುದ್ದಿಗಳು

ಆಕಾರ್ ಪಟೇಲ್‌ಗೆ ಲುಕೌಟ್‌ ನೋಟಿಸ್: ದೆಹಲಿ ನ್ಯಾಯಾಲಯದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಸಿಬಿಐ ನ್ಯಾಯಾಲಯ

Bar & Bench

ಸರ್ಕಾರೇತರ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿರುದ್ಧ ಸಿಬಿಐ ಹೊರಡಿಸಿದ್ದ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ರದ್ದುಗೊಳಿಸಿ ದೆಹಲಿ ನ್ಯಾಯಾಲಯವೊಂದು ನೀಡಿದ್ದ ಆದೇಶಕ್ಕೆ ವಿಶೇಷ ಸಿಬಿಐ ವಿಶೇಷ ನ್ಯಾಯಾಲಯ ತಾನು ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿದೆ.

ಮಂಗಳವಾರ ಈ ಆದೇಶ ನೀಡಿದ ಸಿಬಿಐ ನ್ಯಾಯಾಧೀಶ ಸಂತೋಷ್‌ ಸ್ನೇಹಿ ಮಾನ್‌ ಅವರು ಸಿಬಿಐ ಸಲ್ಲಿಸಿರುವ ಪರಿಷ್ಕರಣೆ ಅರ್ಜಿ ಹಾಗೂ ಪಟೇಲ್ ಅವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥವಾಗುವವರೆಗೆ ಆದೇಶ ಜಾರಿಗೆ ಬರುವುದನ್ನು ಸಂಪೂರ್ಣ ತಡೆ ಹಿಡಿಯಲಾಗಿದೆ ಎಂದರು. ಪ್ರಸ್ತುತ ಪ್ರಕರಣದ ಆದೇಶ ನಾಳೆ (ಏಪ್ರಿಲ್‌ 13) ಹೊರಬೀಳುವ ಸಾಧ್ಯತೆ ಇದೆ.

ಸಿಬಿಐ ಪರ ಹಾಜರಾದ ವಕೀಲ ನಿಖಿಲ್ ಗೋಯೆಲ್ ಅವರು ಎಲ್ಒಸಿ ನೀಡಲು ನಾಲ್ಕೈದು ಕಾರಣಗಳಿವೆ ಎಂದರು. ಆಕಾರ್‌ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಅವರ ಪಾಸ್‌ಪೋರ್ಟ್‌ ಕುರಿತ ಪ್ರಕರಣ ಗುಜರಾತ್‌ ನ್ಯಾಯಾಲಯದಲ್ಲಿದೆ ಎಂದು ವಿವರಿಸಿದರು. ಅಲ್ಲದೆ ಎಲ್‌ಒಸಿಯನ್ನು ಬದಿಗೆ ಸರಿಸಿದ್ದ ದೆಹಲಿಯ ಎಸಿಎಂಎಂ ನ್ಯಾಯಾಲಯದ ಆದೇಶಕ್ಕೂ ಅವರು ವಿರೋಧ ವ್ಯಕ್ತಪಡಿಸಿದರು.

ಆಕಾರ್‌ ಪರವಾಗಿ ವಾದಿಸಿದ ವಕೀಲ ತನ್ವೀರ್‌ ಅಹ್ಮದ್‌ ಮಿರ್‌ ಅವರು “26 ತಿಂಗಳಿನಿಂದಲೂ ತನಿಖೆ ಎದುರಿಸುತ್ತಿರುವ ನಮ್ಮ ಕಕ್ಷೀದಾರರು ದೇಶದಿಂದ ಪಲಾಯನ ಮಾಡಲಿಲ್ಲ. ಆದರೆ ಈಗ ದಿಢೀರನೆ ದೇಶ ತೊರೆಯುತ್ತಾರೆ ಎಂಬ ಆತಂಕ ಸೃಷ್ಟಿಸಲಾಗುತ್ತಿದೆ” ಎಂದರು.

ಪಟೇಲ್‌ ಅವರು ಅಮೆರಿಕಕ್ಕೆ ತೆರಳದಂತೆ ಏಪ್ರಿಲ್‌ 6ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಇದರ ವಿರುದ್ಧ ಅವರು ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣವನ್ನು ಆಲಿಸಿದ್ದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ಪವನ್‌ ಕುಮಾರ್‌ ಅವರು ಲುಕ್‌ ಔಟ್‌ ಸುತ್ತೋಲೆಯನ್ನು ಬದಿಗೆ ಸರಿಸಿದ್ದರು.

ಇತ್ತ ಪಟೇಲ್‌ ಅವರು ಗುರುವಾರ ಮತ್ತೆ ಅಮೆರಿಕ ಪ್ರಯಾಣಕ್ಕೆ ಮುಂದಾದ ವೇಳೆ ಅವರನ್ನು ಮರಳಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ವಲಸೆ ಅಧಿಕಾರಿಗಳು ನ್ಯಾಯಾಲಯದ ಆದೇಶ ಕುರಿತು ತನಿಖಾಧಿಕಾರಿಯಿಂದ ಮಾಹಿತಿ ಪಡೆಯಲು ಮುಂದಾದರು. ಆದರೆ, ಅಧಿಕಾರಿಯ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಇದರಿಂದ ಪಟೇಲ್‌ ಅವರನ್ನು ವಿಮಾನ ಹತ್ತಲು ಬಿಟ್ಟಿರಲಿಲ್ಲ. ಘಟನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಆಕಾರ್‌ ನ್ಯಾಯಾಲಯದ ಆದೇಶವನ್ನು ತನಿಖಾಧಿಕಾರಿ ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಾರೆ ಎಂದಿದ್ದರು.