Delhi Govt vs LG bench 
ಸುದ್ದಿಗಳು

ಎಲ್ಲವನ್ನೂ ಕೇಂದ್ರ ಸರ್ಕಾರವೇ ನಿರ್ಧರಿಸುವುದಾದರೆ ದೆಹಲಿಯಲ್ಲಿ ಚುನಾಯಿತ ಸರ್ಕಾರ ಇದ್ದೇನು ಪ್ರಯೋಜನ? ಸುಪ್ರೀಂ ಕೋರ್ಟ್

ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯುಕ್ತಿ ಕುರಿತಾದ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ದೆಹಲಿ ಸರ್ಕಾರ ನಡುವಿನ ಪ್ರಕರಣದ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಲಯ.

Bar & Bench

ಆಡಳಿತ ಮತ್ತು ಅಧಿಕಾರಿಗಳ ನಿಯಂತ್ರಣ ಕೇಂದ್ರ ಸರ್ಕಾರದಲ್ಲಿಯೇ ಇರುವುದಾದರೆ ದೆಹಲಿಯಲ್ಲಿ ಚುನಾಯಿತ ಸರ್ಕಾರ ಇದ್ದೇನು ಪ್ರಯೋಜನ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕೇಂದ್ರವನ್ನು ಪ್ರಶ್ನಿಸಿದೆ [ದೆಹಲಿ ಸರ್ಕಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ದೆಹಲಿಯಂತಹ ಕೇಂದ್ರಾಡಳಿತ ಪ್ರದೇಶವು  ಭಾರತ ಒಕ್ಕೂಟದ ವಿಸ್ತರಣೆಯಾಗಿದ್ದು ಒಕ್ಕೂಟ ತನ್ನದೇ ಆದ ಅಧಿಕಾರಿಗಳ ಮೂಲಕ ಆಡಳಿತ ನಡೆಸುತ್ತದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ವಾದಿಸಿದಾಗ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು “ಎಲ್ಲವೂ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇರುವುದಾದರೆ ಚುನಾಯಿತ ಸರ್ಕಾರ ಇದ್ದು ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಸಂಬಂಧಿಸಿದಂತೆ ವಿಶೇಷ ನಿಯಮಾವಳಿಗಳನ್ನು ರೂಪಿಸಲಾದ ಸಂವಿಧಾನದ 239AA ವಿಧಿಯನ್ನು 2018 ರಲ್ಲಿ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ವ್ಯಾಖ್ಯಾನಿಸುವ ಮೂಲಕ ಪ್ರಕರಣ ಉದ್ಭವಿಸಿತ್ತು. ದೆಹಲಿ ಸರ್ಕಾರದ ವಿಚಿತ್ರ ಸ್ಥಿತಿ ಮತ್ತು ಅಲ್ಲಿ ಶಾಸಕಾಂಗ ಸಭೆ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರಗಳು ಮತ್ತು ಅವುಗಳ ಪರಸ್ಪರ ಕ್ರಿಯೆಯನ್ನು ಪ್ರಕರಣದಲ್ಲಿ ಚರ್ಚಿಸಲಾಗಿತ್ತು. ಸಚಿವ ಸಂಪುಟದ ಸಹಾಯ ಮತ್ತು ಸಲಹೆಯಿಲ್ಲದೆ ಲೆಫ್ಟಿನೆಂಟ್‌ ಗವರ್ನರ್‌ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಮತ್ತು ದೆಹಲಿ ಸರ್ಕಾರದೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆಗ ತೀರ್ಪು ನೀಡಿತ್ತು.

ಇಂದಿನ ವಿಚಾರಣೆ ವೇಳೆ ನ್ಯಾಯಾಲಯ “ಒಬ್ಬ ಅಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ಆತನನ್ನು ವರ್ಗಾವಣೆ ಮಾಡುವುಂತಿಲ್ಲ ಎಂದು ಹೇಳಲು ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ. ಶಿಕ್ಷಣ, ಪರಿಸರ ಮುಂತಾದ ಇಲಾಖೆಗಳಲ್ಲಿ ಅಧಿಕಾರಿಗಳನ್ನು ನಿಯುಕ್ತಿ ಮಾಡಲು ದೆಹಲಿ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ನೀವು ಹೇಳುವಿರಾ? ಇದರಿಂದ ಏನು ಪ್ರಯೋಜನ?” ಎಂದು ಪ್ರಶ್ನಿಸಿತು. ಅಲ್ಲದೆ ರಾಜ್ಯ ಮತ್ತು ಸಮವರ್ತಿ ಪಟ್ಟಿಯಲ್ಲಿರುವ ಎಲ್ಲಾ ಅಂಶಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ರಚಿಸಲು ದೆಹಲಿ ವಿಧಾನಸಭೆಗೆ ಕಾನೂನಾತ್ಮಕ ಅಧಿಕಾರವಿದೆಯೇ ಎಂದು ಎಸ್‌ಜಿ ಮೆಹ್ತಾ ಅವರನ್ನು ಕೇಳಿತು. "ಕೇಂದ್ರದ ಸೇವೆ ಮತ್ತು ರಾಜ್ಯದ ಸೇವೆಗಳ ರೀತಿಯಲ್ಲಿ ಕೇಂದ್ರಾಡಳಿತ ಸೇವೆ ಇಲ್ಲ. ಇದು ಪ್ರಜ್ಞಾಪೂರ್ವಕ ಹೊರಗಿಡುವಿಕೆಯಾಗಿದೆ" ಎಂದು ಎಸ್‌ಜಿ ಉತ್ತರಿಸಿದರು.

ಆಗ ಸಿಜೆಐ  “ಕಾರ್ಯಾಂಗದ ನಿಯಂತ್ರಣ ಕೇಂದ್ರ ಸರ್ಕಾರದ ಬಳಿ ಇದ್ದರೆ ದೆಹಲಿ ಸರ್ಕಾರ ಶಾಸಕಾಂಗ ಅಧಿಕಾರ ಹೊಂದಿರುವ ಅರ್ಥವಾದರೂ ಏನು?” ಎಂದು ಪ್ರಶ್ನಿಸಿದರು.