ದೆಹಲಿಯಲ್ಲಿನ ಅಧಿಕಾರಿಗಳ ವರ್ಗಾವಣೆ ಮತ್ತು ನಿಯುಕ್ತಿಗೆ ಸಂಬಂಧಿಸಿದ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ನಡುವಿನ ವಿವಾದ ಮತ್ತು ಅಧಿಕಾರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಸಾಂವಿಧಾನಿಕ ಪೀಠ ನಿರ್ಧರಿಸಬೇಕು ಎಂದು ಸಾಲಿಸಿಟರ್ ಜನರಲ್ (ಎಸ್.ಜಿ.) ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು [ದೆಹಲಿ ಸರ್ಕಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ದೆಹಲಿಯಲ್ಲಿ ಸೇವೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಕರಣ ಸಂವಿಧಾನದ 239 ಎ ಎ ವಿಧಿಯಡಿಯಲ್ಲಿ ವಿಸ್ತೃತ ಪೀಠಕ್ಕೆ ಉಲ್ಲೇಖಿಸಲು ಅರ್ಹವಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಹೆಚ್ಚುವರಿ ಲಿಖಿತ ಟಿಪ್ಪಣಿಯಲ್ಲಿ ಎಸ್ ಜಿ ತುಷಾರ್ ಮೆಹ್ತಾ ತಿಳಿಸಿದ್ದಾರೆ.
"ಇದು ಸಾಂವಿಧಾನಿಕ ಪ್ರಾಮುಖ್ಯತೆ ಮತ್ತು ದೊಡ್ಡ ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದರಿಂದ ಗಣನೀಯ ಕಾನೂನು ಪ್ರಶ್ನೆಯನ್ನು ಒಳಗೊಂಡಿರುತ್ತದೆ, ಇದು ಪೂರಕ ಅಥವಾ ಪ್ರಾಸಂಗಿಕ ವಿಷಯವಲ್ಲ, ಹೀಗಾಗಿ, ಸಂವಿಧಾನದ 145(3)ನೇ ವಿಧಿ ಪ್ರಕಾರ ಸಂವಿಧಾನ ಪೀಠಕ್ಕೆ ಉಲ್ಲೇಖಿಸಲು ಇದು ಅರ್ಹವಾಗಿದೆ," ಎಂದು ತಮ್ಮ ಲಿಖಿತ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.
ದೆಹಲಿಯು ರಾಷ್ಟ್ರ ರಾಜಧಾನಿಯಾಗಿದ್ದು ಶಾಸಕಾಗ ಸಭೆ ಅಥವಾ ಮಂತ್ರಿ ಮಂಡಳಿಯನ್ನು ಪರಿಚಯಿಸಿದರೂ ಕೂಡ ದೆಹಲಿ ಆಡಳಿತ ಮಾದರಿಯಲ್ಲಿ ಕೇಂದ್ರ ಸರ್ಕಾರ, ತನ್ನ ಪಾತ್ರ ನಿರ್ವಹಿಸಬೇಕಿರುವ ದೃಷ್ಟಿಯಿಂದ ದೆಹಲಿ ಸರ್ಕಾರ ಎತ್ತಿರುವ ಸಮಸೆಗಳು ಅದು ಅಂದುಕೊಂಡಿರುವುದಕ್ಕಿಂತಲೂ ಮಹತ್ವದ್ದಾಗಿದೆ ಎಂದು ಕೂಡ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಏಪ್ರಿಲ್ 28 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ ಪ್ರಕರಣವನ್ನು ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವುದಾಗಿ ತಿಳಿಸಿ ಆದೇಶ ಕಾಯ್ದಿರಿಸಿತ್ತು.