Rouse Avenue District Court,ED and Satyendar Jain  
ಸುದ್ದಿಗಳು

ಆಪ್ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಜಾಮೀನು ನಿರಾಕರಿಸಿದ ವಿಶೇಷ ನ್ಯಾಯಾಲಯ

ತಾನು ಯಾವುದೇ ಅಕ್ರಮ ಎಸಗಿಲ್ಲ ಎಂಬ ಆಧಾರದಲ್ಲಿ ಜೈನ್ ಜಾಮೀನು ಬಯಸಿದರೆ ಇತ್ತ ಜಾರಿ ನಿರ್ದೇಶನಾಲಯ ಅವರು ಕಪ್ಪು ಹಣ ಬಿಳಿಯಾಗಿಸುವ, ಸಾಕ್ಷಿಗಳನ್ನು ತಿರುಚುವ ಪ್ರಭಾವಿ ರಾಜಕಾರಣಿ ಎಂದು ವಾದಿಸಿತು.

Bar & Bench

ಜಾರಿ ನಿರ್ದೇಶನಾಲಯ ಹೂಡಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ರಾಜಕಾರಣಿ ಮತ್ತು ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿರುದ್ಧದ ಭ್ರಷ್ಟಾಚಾರ ಮತ್ತಿತರ ಅಪರಾಧ ಪ್ರಕರಣಗಳ ಕುರಿತು ವ್ಯವಹರಿಸುವ ವಿಶೇಷ ನ್ಯಾಯಾಲಯ  ಗುರುವಾರ ತಿರಸ್ಕರಿಸಿದೆ. [ಸತ್ಯೇಂದ್ರ ಜೈನ್ ಮತ್ತು ಇ ಡಿ ನಡುವಣ ಪ್ರಕರಣ] .

ಜೈಲಿನಲ್ಲಿರುವ ಎಎಪಿ ನಾಯಕ ಹಾಗೂ ಇನ್ನಿಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ತಿರಸ್ಕರಿಸಿದರು. ತಾನು ಯಾವುದೇ ಅಕ್ರಮ ಎಸಗಿಲ್ಲ ಎಂಬ ಆಧಾರದಲ್ಲಿ ಜೈನ್‌ ಜಾಮೀನು ಬಯಸಿದರೆ ಇತ್ತ ಜಾರಿ ನಿರ್ದೇಶನಾಲಯ ಅವರು ಕಪ್ಪು ಹಣ ಬಿಳಿಯಾಗಿಸುವ, ಸಾಕ್ಷಿಗಳನ್ನು ತಿರುಚುವ ಪ್ರಭಾವಿ ರಾಜಕಾರಣಿ ಎಂದು ವಾದಿಸಿತು.  

ಸಿಬಿಐ ಆರಂಭದಲ್ಲಿ ಜೈನ್‌ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ, 1988 ರ ಸೆಕ್ಷನ್ 13(2) (ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ದುಷ್ಕೃತ್ಯ) 13 (ಇ) (ಆದಾಯ ಮೀರಿದ ಆಸ್ತಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿತ್ತು.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ  ಜಾರಿ ನಿರ್ದೇಶನಾಲಯ ಅಕಂಚನ್‌ ಡೆವಲಪರ್ಸ್‌, ಇಂಡೋ ಮೆಟಲ್‌ ಇಂಪೆಕ್ಸ್‌ ಪ್ರೈ., ಲಿಮಿಟೆಡ್‌, ಪರ್ಯಾಸ್‌ ಇನ್ಫೋ ಸಲ್ಯೂಷನ್ಸ್‌ ಮಾಂಗಲ್ಯತನ್‌ ಪ್ರಾಜೆಕ್ಟ್ಸ್‌ ಪ್ರೈ ಲಿಮಿಟೆಡ್‌, ಜೆಜೆ ಐಡಿಯಲ್‌ ಎಸ್ಟೇಟ್‌ ಪ್ರೈ ಲಿಮಿಟೆಡ್‌ಗೆ ಸೇರಿದ ₹4.81 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಿತ್ತು.

ಜೈನ್ ಅವರು 2015 ಮತ್ತು 2017 ರ ನಡುವೆ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಚರಾಸ್ತಿ (ಚೆಕ್ ಅವಧಿ) ಖರೀದಿಸಿದ್ದಾರೆ ಎಂಬ ಸಿಬಿಐ ಆರೋಪವನ್ನು ಈ ಪ್ರಕರಣ ಆಧರಿಸಿತ್ತು.

ಜೈನ್ ಅವರ  ಒಡೆತನ ಮತ್ತು ನಿಯಂತ್ರಣದಲ್ಲಿರುವʼ ಈ ಕಂಪನಿಗಳು, ಕೋಲ್ಕತ್ತಾ ಮೂಲದ ಎಂಟ್ರಿ ಆಪರೇಟರ್‌ಗಳಿಗೆ ಹವಾಲಾ ಮಾರ್ಗದ ಮೂಲಕ ವರ್ಗಾವಣೆ ಮಾಡಿ  ಶೆಲ್ ಕಂಪನಿಗಳಿಂದ ₹4.81 ಕೋಟಿ ಹಣ ಸ್ವೀಕರಿಸಿವೆ ಎಂದು ಇ ಡಿ ಆರೋಪಿಸಿತ್ತು.