Aarogya Setu app 
ಸುದ್ದಿಗಳು

ಆರೋಗ್ಯ ಸೇತು ಆ್ಯಪ್: ಬಳಕೆದಾರರ ಒಪ್ಪಿಗೆ ಪಡೆಯದೇ ದತ್ತಾಂಶ ಹಂಚಿಕೆ ಮಾಡದಂತೆ ಕೇಂದ್ರ, ಎನ್ಐಸಿಗೆ ಹೈಕೋರ್ಟ್ ಆದೇಶ

ಆರೋಗ್ಯ ಸೇತು ಪ್ರೊಟೊಕಾಲ್ 2020ರಲ್ಲಿ ಹೇಳಿದಂತೆ ಪ್ರತಿಕ್ರಿಯೆ ದತ್ತಾಂಶ ಹಂಚಿಕೊಳ್ಳುವ ಸಂಬಂಧ ಬಳಕೆದಾರರಿಗೆ ಮಾಹಿತಿ ನೀಡಿ ಅವರಿಂದ ಒಪ್ಪಿಗೆ ಪಡೆದಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಮಧ್ಯಂತರ ಆದೇಶದಲ್ಲಿ ಪೀಠ ಹೇಳಿದೆ.

Bar & Bench

ಆರೋಗ್ಯ ಸೇತು ಟ್ರ್ಯಾಕಿಂಗ್‌ ಅಪ್ಲಿಕೇಶನ್‌ ಮೂಲಕ ಪಡೆದ ಬಳಕೆದಾರರ ಮಾಹಿತಿಯನ್ನು ಅವರ ಒಪ್ಪಿಗೆ ಪಡೆಯದೇ ಮತ್ತೊಬ್ಬರ ಜೊತೆ ಹಂಚಿಕೊಳ್ಳದಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ ( ನ್ಯಾಷನಲ್‌ ಇನ್ಫಾರ್ಮ್ಯಾಟಿಕ್ಸ್‌ ಸೆಂಟರ್‌- ಎನ್‌ಐಸಿ) ಕರ್ನಾಟಕ ಹೈಕೋರ್ಟ್‌ ಸೋಮವಾರ ತಡೆ ವಿಧಿಸಿ, ಮಧ್ಯಂತರ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಮಧ್ಯಂತರ ಆದೇಶ ಹೊರಡಿಸಿದ್ದು, “ಆರೋಗ್ಯ ಸೇತು ದತ್ತಾಂಶ ಪ್ರವೇಶ ಮತ್ತು ಮಾಹಿತಿ ಹಂಚಿಕೆ ಪ್ರೋಟೊಕಾಲ್‌ 2020 ನಿಬಂಧನೆಗಳ ಅಡಿ ಬಳಕೆದಾರರ ಅರಿವುಪೂರ್ವಕ ಸಮ್ಮತಿ ಪಡೆಯದೇ ಅವರ ದತ್ತಾಂಶವನ್ನು ಹಂಚಿಕೊಳ್ಳದಂತೆ ಭಾರತ ಸರ್ಕಾರ ಮತ್ತು ನ್ಯಾಷನಲ್‌ ಇನ್ಫಾರ್ಮ್ಯಾಟಿಕ್ಸ್‌ ಸೆಂಟರ್‌ಗೆ ಮುಂದಿನ ಆದೇಶದವರೆಗೆ ತಡೆಯೊಡ್ಡಿದ್ದೇವೆ” ಎಂದು ಹೇಳಿದೆ.

“ಆರೋಗ್ಯ ಸೇತು ಪ್ರೊಟೊಕೋಲ್‌ 2020ರಲ್ಲಿ ಹೇಳಿರುವಂತೆ ಪ್ರತಿಕ್ರಿಯೆ ದತ್ತಾಂಶ ಹಂಚಿಕೊಳ್ಳುವ ಸಂಬಂಧ ಬಳಕೆದಾರರಿಗೆ ಮಾಹಿತಿ ನೀಡಿ ಅವರಿಂದ ಒಪ್ಪಿಗೆ ಪಡೆದಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಮಧ್ಯಂತರ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಖಾಸಗಿ ನೀತಿಯಲ್ಲಿ ನೀಡಲಾಗಿರುವ ಮಾಹಿತಿ ಸಂಗ್ರಹ ಮತ್ತು ಮಾಹಿತಿ ಸಂಗ್ರಹಿಸುವ ವಿಚಾರವು ಬಳಕೆದಾರರಿಗೆ ತಿಳಿವಳಿಕೆ ನೀಡಿ ಒಪ್ಪಿಗೆ ಪಡೆಯುವುದಕ್ಕೆ ಸೀಮಿತವಾಗಿರುತ್ತದೆ ಎಂಬುದನ್ನು ಪೀಠ ಪರಿಗಣಿಸಿದೆ. ಯಾವುದೇ ಪ್ರಜೆಯು ಆರೋಗ್ಯ ಸೇತು ಅಪ್ಲಿಕೇಶನ್‌ ಅಳವಡಿಸಿಕೊಂಡಿಲ್ಲ ಎಂದ ಮಾತ್ರಕ್ಕೆ ಅವರಿಗೆ ಯಾವುದೇ ತೆರನಾದ ಸೌಲಭ್ಯ ಅಥವಾ ಸೇವೆಗಳನ್ನು ನಿರಾಕರಿಸುವುದಿಲ್ಲ ಎಂಬ ಕೇಂದ್ರ ಸರ್ಕಾರದ ಭರವಸೆಯನ್ನೂ ನ್ಯಾಯಾಲಯ ದಾಖಲಿಸಿಕೊಂಡಿದೆ.

ಆದೇಶ ಹೊರಡಿಸಿದ ಪೀಠವು ಮೌಖಿಕವಾಗಿ “ಮಧ್ಯಂತರ ಪರಿಹಾರವು ದತ್ತಾಂಶ ಹಂಚಿಕೆ ಪ್ರೋಟೋಕೋಲ್‌ಗೆ ಸೀಮಿತವಾಗಿರುತ್ತದೆ” ಎಂದು ಹೇಳಿದೆ.

ಆರೋಗ್ಯ ಸೇತು ಅಪ್ಲಿಕೇಶನ್‌ ಅಳವಡಿಸಿಕೊಂಡಿಲ್ಲ ಎಂದು ಪ್ರಜೆಗಳಿಗೆ ಯಾವುದೇ ಸೇವೆ ಅಥವಾ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ ಎಂದು ಹೇಳಿ ಅನಿವರ್‌ ಅರವಿಂದ್‌ ಸಲ್ಲಿಸಿದ್ದ ರಿಟ್‌ ಮನವಿಯನ್ನು ಆಧರಿಸಿ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿದೆ.

“ಆರೋಗ್ಯ ಸೇತುವಿನಲ್ಲಿ ಎರಡು ವಿಧಗಳಿದ್ದು, ಅಪ್ಲಿಕೇಶನ್‌ನಲ್ಲಿ ಖಾಸಗಿ ನೀತಿಯನ್ನು ಅಪ್‌ಲೋಡ್‌ ಮಾಡಲಾಗಿರುವುದಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ಮಧ್ಯಂತರ ಆದೇಶ ಪರಿಹಾರ ನೀಡಿಲ್ಲ. ಪ್ರೋಟೊಕೋಲ್‌ಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ಹೊರಡಿಸಿದ್ದೇವೆ…” ಎಂದು ನ್ಯಾಯಾಲಯ ಹೇಳಿದೆ. ಡಿಸೆಂಬರ್‌ 17ರಂದು ನ್ಯಾಯಾಲಯವು ಆದೇಶ ಕಾಯ್ದಿರಿಸಿತ್ತು.