Sister Abhaya 
ಸುದ್ದಿಗಳು

ಅಭಯಾ ಹತ್ಯೆ: ಪಾದ್ರಿ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿಗೆ ಜೀವಾವಧಿ ಶಿಕ್ಷೆ

28 ವರ್ಷಗಳ ಹಿಂದಿನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಿಬಿಐ ನ್ಯಾಯಾಧೀಶ ಕೆ ಸನಿಲ್‌ಕುಮಾರ್ ಅವರು, ಪಾದ್ರಿ ಥಾಮಸ್ ಕೊಟ್ಟೂರ್ ಮತ್ತು ಸನ್ಯಾಸಿನಿ ಸೆಫಿ ತಪ್ಪಿತಸ್ಥರು ಎಂದು ಘೋಷಿಸಿದ್ದರು.

Bar & Bench

ಕೇರಳದ ಕೊಟ್ಟಾಯಂ ಜಿಲ್ಲೆಯ ಕಾನ್ವೆಂಟ್‌ ಒಂದರಲ್ಲಿ ಸಿಸ್ಟರ್ ಅಭಯ ಅವರನ್ನು 1992 ರಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದ್ರಿ ಥಾಮಸ್ ಕೊಟ್ಟೂರ್ ಮತ್ತು ಕ್ರೈಸ್ತ ಸನ್ಯಾಸಿನಿ ಸಿಸ್ಟರ್‌ ಸೆಫಿ ಅವರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ನ್ಯಾಯಾಲಯ ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ ಇಬ್ಬರೂ ತಲಾ ರೂ. 5 ಲಕ್ಷ ದಂಡ ಪಾವತಿಸಬೇಕಿದೆ. ಮನೆ ಅತಿಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಪತ್ಯೇಕವಾಗಿ ಪಾದ್ರಿ ಥಾಮಸ್‌ಗೆ ಹೆಚ್ಚುವರಿಯಾಗಿ ರೂ 1 ಲಕ್ಷ ದಂಡ ವಿಧಿಸಲಾಗಿದೆ.

ಪ್ರಕರಣದ ಸಂಬಂಧ ಡಿ.22ರಂದು 28 ವರ್ಷಗಳ ಹಿಂದಿನ ಈ ಪ್ರಕರಣದಲ್ಲಿ ಸಿಬಿಐ ನ್ಯಾಯಾಧೀಶ ಕೆ ಸನಿಲ್‌ಕುಮಾರ್‌ ಅವರು ಪಾದ್ರಿ ಥಾಮಸ್‌ ಕೊಟ್ಟೂರ್‌ ಮತ್ತು ಸನ್ಯಾಸಿನಿ ಸೆಫಿ ತಪ್ಪಿತಸ್ಥರು ಎಂದು ಘೋಷಿಸಿದ್ದರು. ಇವರಿಬ್ಬರಲ್ಲದೆ ಇನ್ನೊಬ್ಬರ ಮೇಲೆ (ಫಾದರ್‌ ಜೋಸ್‌ ಪೂತ್ರುಕಾಯಿಲ್) ಕೂಡ ಕೊಲೆ ಮತ್ತು ಸಾಕ್ಷ್ಯ ನಾಶ ಜೊತೆಗೆ ಮನೆ ಅತಿಕ್ರಮ ಪ್ರವೇಶದ ಆರೋಪ ಇತ್ತು (ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 302, 201, ಮತ್ತು 449). ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪೂತ್ರುಕಾಯಿಲ್ ಅವರನ್ನು 2018 ರಲ್ಲಿ ಖುಲಾಸೆಗೊಳಿಸಲಾಗಿತ್ತು.

ಅಭಯಾ ಸಾವನ್ನಪ್ಪಿ 28 ವರ್ಷಗಳ ಬಳಿಕ ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿ ಶಿಕ್ಷೆ ವಿಧಿಸಲಾಗಿದೆ. 1992ರ ಮಾರ್ಚ್‌ 27ರಂದು ಅಭಯಾ ಶವ ಕಾನ್ವೆಂಟ್‌ನ ಬಾವಿಯೊಂದರಲ್ಲಿ ಪತ್ತೆಯಾಗಿತ್ತು. ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. 1993ರಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತೀರ್ಮಾನಿಸಿದ್ದ ಕೇರಳ ಪೊಲೀಸರು ಪ್ರಕರಣ ಮುಚ್ಚಿ ಹಾಕಿದ್ದರು. ಜೋಮನ್‌ ಪುಥೆನ್‌ಪುರಕ್ಕಳ್‌ ಎಂಬ ಸಾಮಾಜಿಕ ಕಾರ್ಯಕರ್ತರ ಹೋರಾಟದ ಫಲವಾಗಿ ಪ್ರಕರಣವನ್ನು ನ್ಯಾಯಾಲಯ ಸಿಬಿಐಗೆ ವಹಿಸಿತ್ತು.

ಆದರೂ 1996ರಲ್ಲಿ ಸಿಬಿಐ ಇದು ಆತ್ಮಹತ್ಯೆಯೋ, ಹತ್ಯೆಯೋ ಎಂದು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಸಲ್ಲಿಸಿತು. ಆದರೆ ವರದಿಯನ್ನು ಒಪ್ಪದ ನ್ಯಾಯಾಲಯ ಮರು ತನಿಖೆಗೆ ಆದೇಶಿಸಿತ್ತು. ಒಂದು ವರ್ಷದ ಬಳಿಕ ಇದೊಂದು ಹತ್ಯೆ ಎಂದು ತೀರ್ಮಾನಕ್ಕೆ ಸಿಬಿಐ ಬಂದಿತಾದರೂ ಯಾವುದೇ ಪುರಾವೆಗಳಿಲ್ಲದೆ ಪ್ರಕರಣ ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿತ್ತು. ಆದರೆ ನ್ಯಾಯಾಲಯ ಮತ್ತೆ ಈ ವರದಿಯನ್ನೂ ತಿರಸ್ಕರಿಸಿತು. ಸಿಬಿಐ ಮೂರನೇ ಸುತ್ತಿನ ತನಿಖೆ ಆರಂಭಿಸಿತು. ಹತ್ತು ವರ್ಷಗಳ ಬಳಿಕ (ಕೊಲೆಯಾಗಿ ಹದಿನಾರು ವರ್ಷಗಳ ಬಳಿಕ) 2008ರಲ್ಲಿ ಮೊದಲ ಬಾರಿಗೆ ಫಾದರ್‌ ಥಾಮಸ್‌ ಕೊಟ್ಟೂರ್‌, ಫಾದರ್‌ ಜೋಸ್‌ ಪೂತ್ರುಕಾಯಿಲ್‌ ಹಾಗೂ ಸಿಸ್ಟರ್‌ ಸೆಫಿ ಅವರನ್ನು ಬಂಧಿಸಲಾಯಿತು. ಕೇರಳ ಹೈಕೋರ್ಟ್‌ 2009ರಲ್ಲಿ ಆರೋಪಿಗಳಿಗೆ ಜಾಮೀನು ನೀಡಿತ್ತು. ಈ ವರ್ಷ ಹೈಕೋರ್ಟ್‌ ನ್ಯಾ. ವಿ ಜಿ ಅರುಣ್‌ ಅವರಿದ್ದ ಪೀಠ ವಿಚಾರಣೆ ಪೂರ್ಣಗೊಳ್ಳಲು ದೀರ್ಘ ವಿಳಂಬವಾಗುತ್ತಿದ್ದು, ನ್ಯಾಯದ ಚಕ್ರಗಳು ಸ್ಥಗಿತಗೊಳ್ಳಲಾಗದು ಎಂದು ಹೇಳಿ ದಿನಂಪ್ರತಿ ಆಧಾರದಲ್ಲಿ ವಿಚಾರಣೆ ನಡೆಸಬೇಕು ಎಂದು ನಿರ್ದೇಶಿಸಿದ್ದರು.