ADGP Seemanth Kumar Singh and Karnataka HC
ADGP Seemanth Kumar Singh and Karnataka HC  Twitter
ಸುದ್ದಿಗಳು

ತಮ್ಮ ವಿರುದ್ಧದ ಟೀಕೆಗಳನ್ನು ತೆಗೆದು ಹಾಕಲು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಎಸಿಬಿ ಎಡಿಜಿಪಿ

Bar & Bench

ತಮ್ಮ ವಿರುದ್ಧ ಇತ್ತೀಚೆಗೆ ಹೈಕೋರ್ಟ್‌ ನ್ಯಾಯಮೂರ್ತಿಗಳು ಮಾಡಿರುವ ಮೌಖಿಕ ಟೀಕೆಗಳನ್ನು ತೆಗೆದುಹಾಕುವಂತೆ ಹಾಗೂ ಮುಂದಿನ ದಿನಗಳಲ್ಲಿ ತಮ್ಮ ವಿರುದ್ಧ ಯಾವುದೇ ಟೀಕೆ ಮಾಡದಂತೆ ಮತ್ತು ತಮ್ಮ ಸೇವಾ ದಾಖಲೆಯನ್ನು ಸಲ್ಲಿಸಲು ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸೀಮಂತ್‌ ಕುಮಾರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್‌ ಅವರ ಲಂಚ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ನ್ಯಾ.ಎಚ್‌.ಪಿ. ಸಂದೇಶ್‌ ಎಸಿಬಿ ಹಾಗೂ ಅದರ ಎಡಿಜಿಪಿಯಾದ ಸೀಮಂತ್‌ ಕುಮಾರ್‌ ಅವರ ವಿರುದ್ಧ ಗಂಭೀರ ಟೀಕೆಗಳನ್ನು ಮಾಡಿದ್ದರು. ತಮಗೆ ವರ್ಗಾವಣೆ ಬೆದರಿಕೆ ಇರುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದರು. ಇದಾವುದಕ್ಕೂ ಜಗ್ಗುವುದಿಲ್ಲ ಎಂದಿದ್ದ ಅವರು ಎಸಿಬಿ ಎಡಿಜಿಪಿಯವರ ಸೇವಾ ದಾಖಲೆಯನ್ನು ಸಲ್ಲಿಸುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದರು.

ತಾವು ಎಸಿಬಿಯ ಎಡಿಜಿಪಿ ಹುದ್ದೆಯಲ್ಲಿ ಅತೀವ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಎಡಿಜಿಪಿ ಸೀಮಂತ್‌ ಕುಮಾರ್ ಸಿಂಗ್‌ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಲಂಚ ಪ್ರಕರಣವೊಂದರಲ್ಲಿ ಆರೋಪಿಯೊಬ್ಬರು ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ತಾವಾಗಲಿ ಅಥವಾ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಕಾರ್ಯದರ್ಶಿಯವರಾಗಲಿ ಪ್ರತಿವಾದಿಯಾಗಿಲ್ಲ ಎಂದಿದ್ದಾರೆ.

ಮುಂದುವರೆದು, ಅರೋಪಿಯು ಸಲ್ಲಿಸಿರುವ ಅರ್ಜಿಯು ಜಾಮೀನು ಅರ್ಜಿಯಷ್ಟೇ ಆಗಿದೆ. ಆದರೆ, ನ್ಯಾಯಮೂರ್ತಿಗಳು ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಂತೆ ಪರಿಗಣಿಸಿ ವಿಚಾರಣೆ ನಡೆಸಿದ್ದಾರೆ. ತಮ್ಮ ಹಾಗೂ ತಮ್ಮ ನೇತೃತ್ವದ ಎಸಿಬಿ ಸಂಸ್ಥೆಯ ಪ್ರಾಮಾಣಿಕತೆ, ಬದ್ಧತೆಯ ಬಗ್ಗೆ ಅನಗತ್ಯ ಟೀಕೆ ಮಾಡಿದ್ದಾರೆ. ತಮ್ಮ ಸೇವಾ ವರದಿಯನ್ನು ಸಲ್ಲಿಸಲು ಕೋರಿರುವುದು ಸಹ ಜಾಮೀನು ಅರ್ಜಿಯ ವ್ಯಾಪ್ತಿಯ ಹೊರಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.