Justice DY Chandrachud, Justice MR Shah
Justice DY Chandrachud, Justice MR Shah 
ಸುದ್ದಿಗಳು

ವೃತ್ತಿಪರ ಶಿಕ್ಷಣ ಪ್ರವೇಶಿಕೆ ಸರ್ಕಾರದ ಉಡುಗೊರೆಯಲ್ಲ: ಸುಪ್ರೀಂ ಕೋರ್ಟ್‌

Bar & Bench

ಉನ್ನತ ಶಿಕ್ಷಣ ಪಡೆಯುವ ಹಕ್ಕು ಸರ್ಕಾರದ ಉಡುಗೊರೆಯಲ್ಲ, ಬದಲಿಗೆ ದೃಢೀಕೃತ ಹೊಣೆಗಾರಿಕೆ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪಿನಲ್ಲಿ ಹೇಳಿದೆ (ಫರ್ಜಾನಾ ಬತೂಲ್‌ ವರ್ಸ್‌ ಭಾರತ ಸರ್ಕಾರ).

ಕೇಂದ್ರ ಸರ್ಕಾರದ ಯೋಜನೆಯ ಅನ್ವಯ ಕೇಂದ್ರದ ಪಟ್ಟಿಯಿಂದ (ಸೆಂಟ್ರಲ್‌ ಪೂಲ್‌) ಆಯ್ಕೆಯಾಗಿರುವ ತಮಗೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸುವ ಸಂಬಂಧ ನಿರ್ದೇಶನ ನೀಡುವಂತೆ ಕೋರಿ ಲಡಾಖ್‌ನ ಇಬ್ಬರು ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿ ಕುರಿತು ತೀರ್ಪು ನೀಡುವಾಗ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಂ ಆರ್‌ ಶಾ ನೇತೃತ್ವದ ವಿಭಾಗೀಯ ಪೀಠವು ಮೇಲಿನಂತೆ ಹೇಳಿದೆ.

“ಉನ್ನತ (ವೃತ್ತಿಪರ) ಶಿಕ್ಷಣ ಪಡೆಯುವ ಹಕ್ಕನ್ನು ಸಂವಿಧಾನದ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕಾಗಿ ಹೇಳಲಾಗಿಲ್ಲವಾದರೂ ವೃತ್ತಿಪರ ಶಿಕ್ಷಣದ ಪ್ರವೇಶವು ಸರ್ಕಾರವು ನೀಡುವ ಉಡುಗೊರೆಯಲ್ಲ, ಬದಲಿಗೆ ಎಲ್ಲಾ ಹಂತಗಳಲ್ಲೂ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ದೃಢೀಕೃತ ಹೊಣೆಗಾರಿಕೆ ಸರ್ಕಾರದ ಮೇಲಿದೆ” ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಜಾತಿ, ವರ್ಗ, ಲಿಂಗ, ಧರ್ಮ, ಅಂಗವಿಕಲತೆ ಮತ್ತು ಭೌಗೋಳಿಕ ಪ್ರದೇಶದ ಕಾರಣಕ್ಕಾಗಿ ಶಿಕ್ಷಣಕ್ಕೆ ಪ್ರವೇಶ ಪಡೆಯಲು ತೊಂದರೆಪಡುವ ವಿದ್ಯಾರ್ಥಿಗಳಿಗೆ ಸರ್ಕಾರದ ಈ ಬಾಧ್ಯತೆಯು ಹೆಚ್ಚಿನ ಮಹತ್ವವನ್ನು ಪಡೆಯುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಕಳೆದ ವರ್ಷದ ನವೆಂಬರ್‌ನಲ್ಲ ಕೇಂದ್ರದ ಪಟ್ಟಿಯಿಂದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿರುವ ಲೇಡಿ ಹಾರ್ಡಿಂಜ್‌ ವೈದ್ಯಕೀಯ ಕಾಲೇಜು ಮತ್ತು ಮೌಲಾನಾ ಆಜಾದ್‌ ವೈದ್ಯಕೀಯ ಕಾಲೇಜಿನಲ್ಲಿ ತಲಾ ಒಂದೊಂದು ಸೀಟನ್ನು ಇಬ್ಬರು ವಿದ್ಯಾರ್ಥಿಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಂಚಿಕೆ ಮಾಡಿತ್ತು. ಇದನ್ನು ಆಧರಿಸಿ ಕೇಂದ್ರಾಡಳಿತ ಪ್ರದೇಶದ ಆಡಳಿತವು ಮೇಲಿನ ಕಾಲೇಜುಗಳಲ್ಲಿ ಪ್ರವೇಶ ನೀಡುವಂತೆ ಶಿಫಾರಸ್ಸು ಮಾಡಿತ್ತು. ಇದನ್ನು ಕಾಲೇಜು ಆಡಳಿತ ಮನ್ನಿಸದಿದ್ದಾಗ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಇದೇ ರೀತಿ ಕೇಂದ್ರದ ಪಟ್ಟಿಯಿಂದ ಸ್ಥಾನ ಪಡೆದಿದ್ದ ಅಭ್ಯರ್ಥಿಗಳು ಇತರ ಕಡೆ ಪ್ರವೇ‍ಶ ಪಡೆದಿದ್ದಾರೆ ಎಂದು ಅವರು ವಾದಿಸಿದರು.

ಅರ್ಜಿದಾರರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ನಿಗದಿತ ಕಾಲೇಜುಗಳಲ್ಲಿ ಅರ್ಜಿದಾರರಿಗೆ ಪ್ರವೇಶ ನೀಡುವುದರ ಜೊತೆಗೆ ಈ ಪ್ರಕ್ರಿಯೆಯು ಒಂದು ವಾರದೊಳಗೆ ಪೂರ್ಣಗೊಳ್ಳಬೇಕು ಎಂದು ಗಡುವು ವಿಧಿಸಿತ್ತು. “ಕೇಂದ್ರ ಪಟ್ಟಿಯಡಿ ನ್ಯಾಯಸಮ್ಮತವಾಗಿ ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿರುವ ಸೀಟುಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಆರ್ಥಿಕ ತೊಂದರೆಗಳು ಅಡ್ಡಿಯಾಗಬಾರದು” ಎಂದು ಪೀಠ ಹೇಳಿದೆ.

ಇದೇ ಸಂದರ್ಭದಲ್ಲಿ ಪೀಠವು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ (ಐಸಿಇಎಸ್‌ಸಿಆರ್‌) ಶಿಫಾರಸ್ಸುಗಳನ್ನು ಉದಾಹರಿಸಿತು. “ಸಬಲೀಕರಣದ ಹಕ್ಕಿನ ರೀತಿಯಲ್ಲಿಯೇ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಮಾಜದ ಅಂಚಿನಲ್ಲಿರುವ ವಯಸ್ಕರು ಮತ್ತು ಮಕ್ಕಳು ತಾವು ಬಡತನದಿಂದ ಮೇಲೇರಲು ಮತ್ತು ಸಮುದಾಯದ ಚಟುವಟಿಕೆಗಳಲ್ಲಿ ಸಕಾರಾತ್ಮಕವಾಗಿ ಭಾಗವಹಿಸಲು ಶಿಕ್ಷಣ ಪ್ರಾಥಮಿಕ ವಾಹನವಾಗಿದೆ" ಎಂದು ಪೀಠವು ಹೇಳಿತು.

ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ ಎಂದಿರುವ ಪೀಠವು “ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಭಾರತವು ಸಹಿ ಹಾಕಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಲಡಾಖ್‌ನ ಆರೋಗ್ಯ ಸೇವೆಗಳ ನಿರ್ದೇಶಕರು (ಡಿಎಚ್‌ಎಸ್‌ಎಲ್‌) ಸಹಕಾರದ ಮೂಲಕ ಕೇಂದ್ರದ ಪಟ್ಟಿಯಲ್ಲಿ ಹಂಚಿಕೆಯಾಗಿರುವ ಸೀಟುಗಳ ಅಡಿಯಲ್ಲಿ ವಿದ್ಯಾರ್ಥಿಗಳು ಪ್ರವೇಶಿಕೆ ಪಡೆಯಲು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು” ಎಂದಿದೆ.

ಕೇಂದ್ರದ ಪಟ್ಟಿಯಡಿ ಸೀಟು ಪಡೆದ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕೋರ್ಸ್‌ಗೆ ಪ್ರವೇಶ ಪಡೆಯುವುದನ್ನು ಖಾತರಿಪಡಿಸಲು ನೋಡಲ್‌ ಅಧಿಕಾರಿಯನ್ನು ನೇಮಿಸುವಂತೆಯೂ ನ್ಯಾಯಾಲಯ ಶಿಫಾರಸ್ಸು ಮಾಡಿದೆ. ಹೀಗೆ ಮಾಡಿದಲ್ಲಿ ಸಮಸ್ಯೆ ಎದುರಿಸುವ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ ಎಂದು ಪೀಠ ಸಲಹೆ ನೀಡಿದೆ. “ಸಾಂಸ್ಥಿಕ ಚೌಕಟ್ಟು ರೂಪಿಸುವುದರಿಂದ ಸೂಕ್ತ ಕೋರ್ಸ್‌ಗೆ ನ್ಯಾಯಸಮ್ಮತ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವುದಿಲ್ಲ. ಇದು ನಮ್ಮ ಮುಂದಿರುವ ವಿಶಾಲವಾದ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆರ್‌ ಎಸ್‌ ಸೂರಿ ಅವರು ಕೇಂದ್ರ ಸರ್ಕಾರದ ಪರ, ಮತ್ತೊಬ್ಬ ಹೆಚ್ಚುವರಿ ಸಾಲಿಸಿಟರ್‌ ಕೆ ಎಂ ನಟರಾಜ್‌ ಅವರು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ ಪರ ವಾದಿಸಿದರು.