ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಶಿಕ್ಷಣ ಸ್ಥಗಿತಗೊಳ್ಳಬಾರದು ಎಂದಿರುವ ಕರ್ನಾಟಕ ಹೈಕೋರ್ಟ್ ದೇಶದ ಪ್ರಗತಿಗೆ ಶಿಕ್ಷಣ ಅತ್ಯಗತ್ಯ ಎಂದು ಪ್ರತಿಪಾದಿಸಿದೆ. ಸಾಂಕ್ರಾಮಿಕ ರೋಗದ ಅವಧಿಯಲ್ಲಿ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳ ವಿವರಗಳನ್ನು ರಾಜ್ಯ ಸರ್ಕಾರ ಸಲ್ಲಿಸಿದ್ದು ಅದನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಈ ಹೇಳಿಕೆ ನೀಡಿದೆ.
“6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳ ಹಾಜರಾತಿ ವರದಿಗಳನ್ನು ಗಮನಿಸಿದರೆ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣ ಹೆಚ್ಚು.” ಎಂದಿರುವ ನ್ಯಾಯಾಲಯ ವಿದ್ಯಾರ್ಥಿಗಳ ಗೈರುಹಾಜರಿಗೆ ಕಾರಣಗಳನ್ನು ಪತ್ತೆ ಹಚ್ಚುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. “ಹೆಚ್ಚಿನ ಮಕ್ಕಳು ಶಾಲೆಗಳಿಗೆ ಹಾಜರಾಗುತ್ತಿಲ್ಲ. ಮಕ್ಕಳು ಶಾಲೆಗೆ ಏಕೆ ಹೋಗುತ್ತಿಲ್ಲ ಅವರು ಉದ್ಯೋಗದಲ್ಲಿ ತೊಡಗಿದ್ದಾರೆಯೇ ಅವರನ್ನು ಕಳ್ಳಸಾಗಣೆ ಮಾಡಲಾಗಿದೆಯೇ ಅಥವಾ ಮದುವೆಯಾಗಿರುವರೇ ಎಂಬುದನ್ನು ಸಮೀಕ್ಷೆ ನಡೆಸಿ ಪತ್ತೆಹಚ್ಚಿ” ಎಂದು ಅದು ಹೇಳಿದೆ.
"ಹೆಚ್ಚಿನ ಶೇಕಡಾವಾರು ಶಾಲೆಗಳಿಗೆ ಹಾಜರಾಗುತ್ತಿಲ್ಲ. ಸಮೀಕ್ಷೆ ನಡೆಸಿ ಮಕ್ಕಳು ಶಾಲೆಗೆ ಏಕೆ ಹೋಗುತ್ತಿಲ್ಲ, ಅವರು ಕೆಲಸ ಮಾಡುತ್ತಿದ್ದಾರೆಯೇ, ಅವರನ್ನು ಕಳ್ಳಸಾಗಣೆ ಮಾಡಲಾಗಿದೆಯೇ ಅಥವಾ ಅವರು ಮದುವೆಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಿ" ಎಂದು ನ್ಯಾಯಪೀಠ ಹೇಳಿದೆ
ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತಿತರ ಡಿಜಿಟಲ್ ಸಂಪನ್ಮೂಲಗಳನ್ನು ಉಚಿತವಾಗಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಾಲಯ ಈ ಅವಲೋಕನಗಳನ್ನು ಮುಂದಿಟ್ಟಿತು.
9 ರಿಂದ 12 ನೇ ತರಗತಿವರೆಗೆ ನಿಯಮಿತವಾಗಿ ತರಗತಿಗಳು ಆರಂಭವಾಗಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಕ್ರಮೇಣ ಸುಧಾರಣೆ ಕಂಡುಬರುತ್ತಿದೆ ಎಂದು ಸರ್ಕಾರಿ ವಕೀಲರು ತಿಳಿಸಿದರು. ಅಲ್ಲದೆ ವಿದ್ಯಾಗಮ ಯೋಜನೆಯ ಪ್ರಯೋಜನಗಳನ್ನು ವಿವರಿಸಿದ ವಕೀಲರು ವಿದ್ಯಾರ್ಥಿಗಳಲ್ಲಿ ಕೋವಿಡ್ ಸಾಂಕ್ರಾಮಿಕ ದೃಢಪಟ್ಟ ಕಾರಣ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು ಎಂದರು. 6 ರಿಂದ 8 ನೇ ತರಗತಿಗಳಿಗೆ ಹಾಜರಾತಿ ಕಡಿಮೆಯಾಗುವುದನ್ನು ಗಮನಿಸಿದ ನ್ಯಾಯಾಲಯ ಈ ನಿಟ್ಟಿನಲ್ಲಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿತು.10 ನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಕೊರತೆ ಬಗ್ಗೆಯೂ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು. ಸರ್ಕಾರದ ದಾಖಲೆಗಳ ಪ್ರಕಾರ 10 ನೇ ತರಗತಿ ವಿದ್ಯಾರ್ಥಿಗಳಲ್ಲಿ ಕೇವಲ ಶೇ 47 ಮಂದಿ ಮಾತ್ರ ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.
"2021ರ ಮಾರ್ಚ್ 1ಕ್ಕೆ ಅನ್ವಯವಾಗುವಂತೆ ವಿದ್ಯಾಗಾಮದ ಮೂಲಕ ವಿದ್ಯಾರ್ಥಿಗಳ ಹಾಜರಾತಿಯ ಶೇಕಡಾವಾರು ಪ್ರಮಾಣಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿ ನೀಡುವಂತೆ ನಾವು ನಿರ್ದೇಶಿಸುತ್ತೇವೆ. ಸುಧಾರಣೆ ಕಂಡುಬಂದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ. ಪ್ರಕರಣ ಮಾರ್ಚ್ 16 ರಂದು ವಿಚಾರಣೆಗೆ ಬರಲಿದೆ.