ಸುದ್ದಿಗಳು

ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನಿರಾಕರಿಸುವಂತಿಲ್ಲ: ಸುಪ್ರೀಂಕೋರ್ಟ್

“ಸರ್ಕಾರ ಮುಂದೆ ಬಂದು ಹಣ ಒದಗಿಸಬೇಕು ಇಲ್ಲದಿದ್ದರೆ ಮಕ್ಕಳು ಶಾಲೆಯಿಂದ ದೂರ ಉಳಿಯುತ್ತಾರೆ. ಕೋವಿಡ್ ಸಂದರ್ಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

Bar & Bench

ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ (ಇಡಬ್ಲ್ಯೂಎಸ್) ಮತ್ತು ಸಮಾಜದ ಅಶಕ್ತ ಗುಂಪುಗಳ (ಡಿಜಿ) ಮಕ್ಕಳಿಗೆ ಸಮರ್ಪಕ ರೀತಿಯಲ್ಲಿ ಕಂಪ್ಯೂಟರ್ ಆಧಾರಿತ ಉಪಕರಣಗಳನ್ನು ಒದಗಿಸಿ ಆನ್‌ಲೈನ್‌ ಶಿಕ್ಷಣ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಸೂಚಿಸಿದೆ.

ಕೋವಿಡ್ ನಡುವೆ ಆನ್‌ಲೈನ್ ತರಗತಿಗಳಿಗೆ ಹಾಜರಾಗುವ ಮಕ್ಕಳಿಗೆ ತಂತ್ರಜ್ಞಾನದ ಸೌಲಭ್ಯ ಒದಗಿಸುವಂತೆ ಕೋರಿ ಅನುದಾನರಹಿತ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಕ್ರಿಯಾ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ವಿಕ್ರಮ್ ನಾಥ್ ಹಾಗೂ ಬಿ ವಿ ನಾಗರತ್ನ ಅವರಿದ್ದ ಪೀಠದಲ್ಲಿ ನಡೆಯಿತು.

ಈ ಸಂಬಂಧ ನೋಟಿಸ್‌ ನೀಡಿರುವ ನ್ಯಾಯಾಲಯ ಅರ್ಜಿಯನ್ನು ದೆಹಲಿ ಹೈಕೋರ್ಟ್‌ನ ಸೆಪ್ಟೆಂಬರ್ 2020ರ ತೀರ್ಪಿನ ವಿರುದ್ಧ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಸಲ್ಲಿಸಿರುವ ಬಾಕಿ ಇರುವ ವಿಶೇಷ ಅನುಮತಿ ಅರ್ಜಿಗಳೊಂದಿಗೆ (ಎಸ್‌ಎಲ್‌ಪಿ) ಸೇರಿಸಿದೆ.

ಖಾಸಗಿ ಅನುದಾನರಹಿತ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಂತಹ ಸರ್ಕಾರಿ ಶಾಲೆಗಳಲ್ಲಿ ಆನ್‌ಲೈನ್ ಕಲಿಕೆಗೆ ಅನುಕೂಲವಾಗುವಂತೆ ಇಡಬ್ಲ್ಯೂಎಸ್ ವರ್ಗದ ವಿದ್ಯಾರ್ಥಿಗಳಿಗೆ ಗ್ಯಾಜೆಟ್‌ ಮತ್ತು ಇಂಟರ್‌ನೆಟ್‌ ಸೌ್‌ಲಭ್ಯ ಒದಗಿಸುವಂತೆ ದೆಹಲಿ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಸೂಚಿಸಿತ್ತು.

“ಸರ್ಕಾರ ಮುಂದೆ ಬಂದು ಇದಕ್ಕೆ ಹಣ ಒದಗಿಸಬೇಕು ಇಲ್ಲದಿದ್ದರೆ ಮಕ್ಕಳು ಶಾಲೆಯಿಂದ ದೂರ ಉಳಿಯುತ್ತಾರೆ. ಕೋವಿಡ್‌ ಸಂದರ್ಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ವಿಚಾರಣೆಯ ಒಂದು ಹಂತದಲ್ಲಿ ನ್ಯಾ. ನಾಗರತ್ನ ತಿಳಿಸಿದರು. ಅಲ್ಲದೆ ಆನ್‌ಲೈನ್ ಶಿಕ್ಷಣದ ಕೊರತೆಯಿಂದಾಗಿ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿನ ಶಾಲೆಗಳು ದೊಡ್ಡ ಪ್ರಮಾಣದ ಕುಸಿತ ಕಂಡಿವೆ ಎಂದು ಅವರು ಹೇಳಿದರು.

ಸರ್ಕಾರ ಕಾರ್ಪೊರೇಟ್‌ ಕಂಪೆನಿಗಳಿಂದ ಸಂಗ್ರಹಿಸಿದ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯನ್ನು ಇದಕ್ಕೆ ಬಳಸಿಕೊಳ್ಳಬಹುದು ಎಂದು ನ್ಯಾ. ಡಿ ವೈ ಚಂದ್ರಚೂಡ್‌ ಅವರು ಸಲಹೆ ನೀಡಿದರು.

ಈ ವರ್ಷದ ಫೆಬ್ರವರಿಯಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್‌ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ ತಡೆಹಿಡಿದಿತ್ತು ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯ ಹೇಳಿದ ಪ್ರಮುಖ ಅಂಶಗಳು:

  • ಸಾಂಕ್ರಾಮಿಕ ರೋಗ ಕಡಿಮೆಯಾಗುತ್ತಿದ್ದಂತೆ ಶಾಲೆಗಳನ್ನು ಕ್ರಮೇಣ ಪುನರಾರಂಭಿಸಿದರೂ ಮನವಿಯಲ್ಲಿನ ಸಮಸ್ಯೆಗಳಿಗೆ ಬೇಗನೆ ಪರಿಹಾರ ಒದಗಿಸಬೇಕಿದೆ.

  • ಈ ಪರಿಸ್ಥಿತಿಯಲ್ಲಿ, ದೇಶದ ಎಳೆಯ ಮಕ್ಕಳ ಅಗತ್ಯಗಳನ್ನು ನಿರ್ಲಕ್ಷಿಸಲಾಗದು... ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ (ಇಡಬ್ಲ್ಯೂಎಸ್) ಮತ್ತು ಸಮಾಜದ ಅಶಕ್ತ ಗುಂಪುಗಳ (ಡಿಜಿ) ಮಕ್ಕಳಿಗೆ ಸಂಪನ್ಮೂಲಗಳ ಲಭ್ಯತೆ ನಿರಾಕರಿಸಲಾಗದಂತೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪರಿಹಾರ ಒದಗಿಸಬೇಕು.

  • ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) 2009 ರ ಉದ್ದೇಶವನ್ನು ಎತ್ತಿಹಿಡಿಯುವ ಯೋಜನೆಯನ್ನು ದೆಹಲಿ ಸರ್ಕಾರವು ರೂಪಿಸುವುದು ಅಗತ್ಯ. ಕೇಂದ್ರ ಸರ್ಕಾರ ರಾಜ್ಯಗಳ ಜೊತೆಗೂಡಿ ಸಮವರ್ತಿ ಜವಾಬ್ದಾರಿ ಹಂಚಿಕೊಳ್ಳಬೇಕು.