ಆನ್‌ಲೈನ್‌ ರಮ್ಮಿ ನಿಷೇಧ ಅಸಾಂವಿಧಾನಿಕ: ಕೇರಳ ಹೈಕೋರ್ಟ್

ಬಾಜಿಗಾಗಿ ಆನ್‌ಲೈನ್‌ ರಮ್ಮಿಆಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆ ಜಾರಿಗೊಳಿಸಲು ಸಾಧ್ಯವಿಲ್ಲ, ಏಕೆಂದರೆ ಇದು ಮುಖ್ಯವಾಗಿ ಕೌಶಲ್ಯಕ್ಕೆ ಸಂಬಂಧಿಸಿದ ಆಟ ಎಂದು ನ್ಯಾಯಾಲಯ ಹೇಳಿದೆ.
Online Rummy
Online RummyRepresentative image

ಬಾಜಿ ಕಟ್ಟಿ ಆಡಲಾಗುವ ಆನ್‌ಲೈನ್‌ ರಮ್ಮಿಯು ಬಹುತೇಕವಾಗಿ ಕೌಶಲ್ಯಯುಕ್ತ ಆಟವಾಗಿರುವುದರಿಂದ ಅದನ್ನು ನಿಷೇಧಿಸಿ ಕೇರಳ ಸರ್ಕಾರವು ಹೊರಡಿಸಿರುವ ಆದೇಶವು ಅಸಾಂವಿಧಾನಿಕ ಎಂದು ರಾಜ್ಯ ಹೈಕೋರ್ಟ್‌ ಸೋಮವಾರ ತೀರ್ಪು ನೀಡಿದೆ (ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ).

ಆನ್‌ಲೈನ್‌ ರಮ್ಮಿ ನಿಷೇಧಿಸಿರುವುದನ್ನು ಪ್ರಶ್ನಿಸಿದ್ದ ಕೆಲ ಅರ್ಜಿಗಳನ್ನು ನ್ಯಾಯಮೂರ್ತಿ ಟಿ ಆರ್ ರವಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಗೆ ಅನುಮತಿಸಿತು. ರಮ್ಮಿಯಂತಹ ಹಣಕ್ಕಾಗಿ ಆಡುವ ಕೌಶಲ್ಯದ ಆನ್‌ಲೈನ್ ಆಟಗಳನ್ನು ನಿಷೇಧಿಸುವುದು ಸ್ವೇಚ್ಛೆಯಿಂದ ಕೂಡಿದ್ದು, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯದ ತೀರ್ಪು ಹೇಳಿದೆ.

ಹಣಕ್ಕಾಗಿ ಆಡುವ ಆನ್‌ಲೈನ್‌ ರಮ್ಮಿಯನ್ನು ಪರಿಣಾಮಕಾರಿಯಾಗಿ ನಿಷೇಧಿಸಿ ಕೇರಳ ಗೇಮಿಂಗ್ ಕಾಯಿದೆ 1960ರ ನಿಯಮಗಳ ಅಡಿಯಲ್ಲಿ ರಾಜ್ಯ ಸರ್ಕಾರ ಫೆಬ್ರವರಿ 23, 2021ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.

Also Read
ತಮಿಳುನಾಡು: ಆನ್‌ಲೈನ್‌ ಗೇಮ್ ನಿಷೇಧ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಯಶಸ್ಸು ಹೆಚ್ಚಿನ ಪ್ರಮಾಣದಲ್ಲಿ ಕೌಶಲ್ಯದ ಮೇಲೆ ಅವಲಂಬಿಸಿರುವ ಸ್ಪರ್ಧೆಗಳು ಜೂಜಿಗೆ ಸಮನಲ್ಲ ಎಂದು ಸುಪ್ರೀಂಕೋರ್ಟ್‌ ಈಗಾಗಲೇ ತೀರ್ಪು ನೀಡಿದೆ. ಹೀಗಾಗಿ ರಾಜ್ಯದ ಗೇಮಿಂಗ್‌ ಕಾಯಿದೆಯಡಿ ಆನ್‌ಲೈನ್‌ ರಮ್ಮಿಗೆ ನಿಷೇಧ ಹೇರಲಾಗದು. ಆದ್ದರಿಂದ ಅರ್ಜಿದಾರರರು ಪಡೆವ ಲಾಭ ಸಂವಿಧಾನದ 19 (1) (ಜಿ) ಅಡಿ ಸುರಕ್ಷಿತ ವ್ಯಾಪಾರ. ಅಲ್ಲದೆ ಜೂಜಿನ ನಿಯಮಗಳಿಂದ ವಿನಾಯಿತಿ ಪಡೆಯುವ ಕೌಶಲ್ಯದ ಆಟ ಯಾವುದು ಎಂಬುದನ್ನು ನಿರ್ದಿಷ್ಟಪಡಿಸುವುದಕ್ಕೆ ಮಾತ್ರ ಕೇರಳ ಕಾಯಿದೆಯ ಸೆಕ್ಷನ್ 14 ಎ ಸೀಮಿತವಾಗಿದೆ. ರಾಜ್ಯ ಜೂಜು ಮತ್ತು ಗೇಮಿಂಗ್ ನಿಯಮಗಳಡಿ ರಮ್ಮಿ ಒಂದು ಕೌಶಲ್ಯದ ಆಟ ಎಂಬುದು ಸಾಬೀತಾಗಿರುವುದರಿಂದ, ಆನ್‌ಲೈನ್ ರಮ್ಮಿಯನ್ನು ನಿಷೇಧಿಸುವ ಅಧಿಸೂಚನೆಯು ಸಂವಿಧಾನದ 246 ನೇ ವಿಧಿಯ ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದರು.

ವಾದವನ್ನು ಮನ್ನಿಸಿದ ನ್ಯಾಯಾಲಯ ಆನ್‌ಲೈನ್‌ ರಮ್ಮಿಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಆದೇಶಿಸಿತು.

ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ ಕೂಡ ಇಂಥದ್ದೇ ನಿರ್ಧಾರ ಕೈಗೊಂಡಿತ್ತು. ಆನ್‌ಲೈನ್ ರಮ್ಮಿ ಮತ್ತು ಆನ್‌ಲೈನ್ ಪೋಕರ್ ಸೇರಿದಂತೆ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಸಂಬಂಧ ತಮಿಳುನಾಡು ಗೇಮಿಂಗ್ ಕಾಯಿದೆ- 1930ಕ್ಕೆ ರಾಜ್ಯ ಸರ್ಕಾರ ಮಾಡಿದ್ದ ತಿದ್ದುಪಡಿಯನ್ನು ಅದು ರದ್ದುಗೊಳಿಸಿತ್ತು.

Related Stories

No stories found.
Kannada Bar & Bench
kannada.barandbench.com