Rameshwaram café 
ಸುದ್ದಿಗಳು

ಹುಳು ಬಿದ್ದಿರುವ ತಿನಿಸು ಪೂರೈಕೆ ಆರೋಪ: ರಾಮೇಶ್ವರಂ ಕೆಫೆಯ ದಿವ್ಯಾ, ರಾಘವೇಂದ್ರ ರಾವ್‌ ವಿರುದ್ಧದ ಪ್ರಕರಣಕ್ಕೆ ತಡೆ

ನಿಖಿಲ್‌ 24-07-2025ರಂದು ಸುಮಾರು 8 ಗಂಟೆ ವೇಳೆಗೆ ಸ್ನೇಹಿತರೊಂದಿಗೆ ಬಿಐಎಎಲ್‌ನ ಟರ್ಮಿನಲ್‌ 1ರಲ್ಲಿ ರಾಮೇಶ್ವರಂ ಕೆಫೆಯಲ್ಲಿ ವೆಜ್‌ ಪೊಂಗಲ್‌ ‍‍& ಫಿಲ್ಟರ್‌ ಕಾಫಿ ತೆಗೆದುಕೊಂಡಿದ್ದರು. ತಿಂಡಿಯಲ್ಲಿ ಹುಳು ಕಂಡು ಬಂದಿತ್ತು ಎನ್ನಲಾಗಿದೆ.

Bar & Bench

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (ಬಿಐಎಎಲ್) ರಾಮೇಶ್ವರ ಕೆಫೆಯಲ್ಲಿ ವಿಷಪೂರಿತ/ಕಲುಷಿತ ಆಹಾರ (ಹುಳು ಬಿದ್ದಿರುವುದು) ಪೂರೈಸಿದ ಆರೋಪದ ಸಂಬಂಧ ಕೆಫೆಯ ಪ್ರಮುಖರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಡೆ ನೀಡಿದೆ.

ಬಿಐಎಎಲ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ರಾಮೇಶ್ವರಂ ಕೆಫೆಯ ಬಿ ಎಲ್‌ ಸುಮಂತ್‌, ರಾಮೇಶ್ವರಂ ಕೆಫೆಯ ಮಾತೃ ಸಂಸ್ಥೆ ಅಲ್ಟ್ರಾನ್‌ ವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ದಿವ್ಯಾ ಮತ್ತು ರಾಘವೇಂದ್ರ ರಾವ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Mohammad Nawaz

“ಹಿರಿಯ ವಕೀಲರು ಅರ್ಜಿದಾರರಿಗೆ ಕಿರುಕುಳ ಮತ್ತು ಬ್ಲ್ಯಾಕ್‌ ಮೇಲ್‌ ಮಾಡಲು ಹಾಲಿ ದೂರು ನೀಡಲಾಗಿದೆ. ಪ್ರತೀಕಾರದ ಕ್ರಮದ ಭಾಗವಾಗಿ ದೂರು ಸಲ್ಲಿಸಲಾಗಿದೆ. ದೂರಿನ ಅಂಶಗಳಿಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ. ವಿಸ್ತೃತವಾಗಿ ಪ್ರಕರಣದ ವಿಚಾರಣೆ ನಡೆಸಬೇಕಿದೆ ಎಂದು ಹೇಳಿದ್ದಾರೆ. ಹೀಗಾಗಿ, ಬಿಐಎಎಲ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡಲಾಗಿದೆ. ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲರು “24.07.2025ರಂದು ಬಿಐಎಎಲ್‌ನಲ್ಲಿ ತಿಂಡಿ ತಿನ್ನಲು ಎನ್‌ ನಿಖಿಲ್‌ ಎಂಬವರು ಹೋದಾಗ ವೆಜ್‌ ಪೊಂಗಲ್‌ನಲ್ಲಿ ಕೀಟ ಕಾಣಿಸಿಕೊಂಡಿದ್ದು, ಅಂದೇ ಬಿಐಎಎಲ್‌ ಠಾಣೆಯಲ್ಲಿ ಜೀರೋ ಎಫ್‌ಐಆರ್‌ ದಾಖಲಿಸಲಾಗಿದೆ. ಅದನ್ನು ವಯ್ಯಾಲಿಕಾವಲ್‌ ಠಾಣೆಗೆ ವರ್ಗಾಯಿಸಿ ಅಪರಾಧ ಪ್ರಕರಣ ದಾಖಲಿಸಲಾಗಿದೆ. ದೂರುದಾರ ನಿಖಿಲ್‌ ಅವರು ಸುಳ್ಳು ಆರೋಪ ಮಾಡಿ 11.08.2025ರಂದು ದೇವನಹಳ್ಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಅವರ ಮುಂದೆ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಮ್ಯಾಜಿಸ್ಟ್ರೇಟ್‌ ಅವರು ಬಿಐಎಎಲ್‌ ಠಾಣೆಯ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ್ದರು. ಇದನ್ನು ಬಚ್ಚಿಟ್ಟು, ನಿಖಿಲ್‌ ಅವರು ಎರಡು ತಿಂಗಳ ಬಳಿಕ ಬಿಐಎಎಲ್‌ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಳಿಸಿದ್ದಾರೆ. ಮೊದಲನೇ ದೂರು ಮ್ಯಾಜಿಸ್ಟ್ರೇಟ್‌ ಮುಂದೆ ಬಾಕಿ ಇರುವಾಗಲೇ ಈ ದೂರು ದಾಖಲಿಸಲಾಗಿದೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ದೂರುದಾರ ನಿಖಿಲ್‌ ಅವರು 24-07-2025ರಂದು ಸುಮಾರು 8 ಗಂಟೆ ವೇಳೆಗೆ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಗುವಾಹಟಿಗೆ ಪ್ರಯಾಣ ಬೆಳೆಸಿದ್ದರು. ಟರ್ಮಿನಲ್‌ 1ರಲ್ಲಿ ರಾಮೇಶ್ವರಂ ಕೆಫೆಯಲ್ಲಿ ವೆಜ್‌ ಪೊಂಗಲ್‌ ಮತ್ತು ಫಿಲ್ಟರ್‌ ಕಾಫಿ ತೆಗೆದುಕೊಂಡಿದ್ದರು. ತಿಂಡಿಯಲ್ಲಿ ಹುಳು ಕಂಡು ಬಂದಿದ್ದರಿಂದ ತಕ್ಷಣ ಹೋಟೆಲ್‌ ಸಿಬ್ಬಂದಿಗೆ ತಿಳಿಸಿದ್ದು, ಅದನ್ನು ಬದಲಾಯಿಸಿಕೊಡುವುದಾಗಿ ಸಿಬ್ಬಂದಿ ತಿಳಿಸಿದ್ದರು. ಆದರೆ, ನಿಖಿಲ್‌ ಅವರು ಬದಲಾಯಿಸಲು ನಿರಾಕರಿಸಿದ್ದು, ಅಲ್ಲೇ ಇದ್ದ ಗ್ರಾಹಕರು ಸದರಿ ಘಟನೆಯ ಫೋಟೊ ಮತ್ತು ವಿಡಿಯೊ ಮಾಡಿಕೊಂಡಿದ್ದರು. ಆನಂತರ ಯಾವುದೇ ಗಲಾಟೆ ಮಾಡದೇ ನಿಖಿಲ್‌ ಅವರು ಗುವಾಹಟಿಗೆ ವಿಮಾನ ಪ್ರಯಾಣ ಬೆಳೆಸಿದ್ದರು.

25-07-2025ರಂದು ರಾಮೇಶ್ವರ ಕೆಫೆಯ ಪ್ರತಿನಿಧಿ ಸುಮಂತ್‌ ನಬಿ ಎಲ್‌ ಎಂಬವರು ನಿಖಿಲ್‌ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು, ಕೆಫೆ ಬ್ರ್ಯಾಂಡ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿರುವ ವಿಚಾರ ನಿಖಿಲ್‌ಗೆ ಮಾಧ್ಯಮಗಳಿಂದ ತಿಳಿದಿತ್ತು. ಸುಮಂತ್‌ ದೂರು ನೀಡಿದಾಗ ನಿಖಿಲ್‌ ಅವರು ಬಿಐಎಎಲ್‌ನಲ್ಲೇ ಇದ್ದು, ನಿಖಿಲ್‌ ಅವರು ಯಾವುದೇ ತೆರನಾದ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಈ ಸಂಬಂಧ 24-07-2025ರ ಬೆಳಿಗ್ಗೆ 7:30–8:00 ನಡುವಿನ ರಾಮೇಶ್ವರಂ ಕೆಫೆಯ ಸಿಸಿಟಿವಿ ದೃಶ್ಯಾವಳಿ, ಬೋರ್ಡಿಂಗ್‌ ಪಾಸ್‌, ವಿಮಾನ ಪ್ರಯಾಣ ದಾಖಲೆ, ಸಂಬಂಧಿತ ಕರೆ ವಿವರ ಪರಿಶೀಲನೆ ನಡೆಸಬಹುದು. ಅಹಿತಕರ ಆಹಾರ ನೀಡಿರುವುದು ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಯಾಗಿದ್ದು, ರಾಘವೇಂದ್ರ ರಾವ್‌, ದಿವ್ಯಾ ಮತ್ತು ಸುಮಂತ್‌ ಬಿ ಎಲ್‌ ಕ್ರಮಕೈಗೊಳ್ಳಬೇಕು ಎಂದು ನಿಖಿಲ್‌ ದೂರು ನೀಡಿದ್ದರು.

ಇದನ್ನು ಆಧರಿಸಿ ಬಿಐಎಎಲ್‌ ಪೊಲೀಸರು ರಾಘವೇಂದ್ರ ರಾವ್‌, ದಿವ್ಯಾ ಮತ್ತು ಸುಮಂತ್‌ ಬಿ ಎಲ್‌ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 61,123,217,228,229,274,275 ಅಡಿ ಪ್ರಕರಣ ದಾಖಲಿಸಿದ್ದಾರೆ.