Soujanya & Karnataka HC 
ಸುದ್ದಿಗಳು

ಸೌಜನ್ಯ ಕೊಲೆ ಪ್ರಕರಣದಲ್ಲಿ ಕಳಪೆ, ದೋಷಪೂರಿತ ತನಿಖೆ ನಡೆಸಿರುವವರ ವಿರುದ್ಧ ಕ್ರಮ: ಸಿಬಿಐಗೆ ಹೈಕೋರ್ಟ್‌ ನೋಟಿಸ್‌

ಕಳಪೆ ಮತ್ತು ದೋಷಪೂರಿತ ತನಿಖೆ ನಡೆಸಿರುವ ಮತ್ತು ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ತೀರ್ಪಿನಲ್ಲಿ ನಿರ್ದೇಶಿಸಿದ ವಿಶೇಷ ನ್ಯಾಯಾಲಯ.

Bar & Bench

ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ಕಳಪೆ ಮತ್ತು ದೋಷಪೂರಿತ ತನಿಖೆ ನಡೆಸಿ ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಇದನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ವಿಶೇಷ ಸಿಬಿಐ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲಿನ ನಿರ್ದೇಶನ ಅನುಷ್ಠಾನಗೊಳಿಸುವಂತೆ ಕೋರಿದ್ದ ಅರ್ಜಿಯ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಸಿಬಿಐ ಚೆನ್ನೈನ ವಿಶೇಷ ತನಿಖಾ ದಳಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನೋಟಿಸ್‌ ಜಾರಿಗೊಳಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯವು 16.06.2023ರಂದು ಹೊರಡಿಸಿದ್ದ ತೀರ್ಪಿನಲ್ಲಿನ ನಿರ್ದೇಶನ ಜಾರಿಗೊಳಿಸಲು ಸಿಬಿಐಗೆ ನಿರ್ದೇಶಿಸುವಂತೆ ಕೋರಿ ಸೌಜನ್ಯ ತಾಯಿ ಕುಸುಮವತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice B M Shyam Prasad

ಅರ್ಜಿದಾರರ ಪರ ವಕೀಲ ಎಂ ಆರ್‌ ಬಾಲಕೃಷ್ಣ ಅವರು “ಸಿಬಿಐ ಅಡಿ ಖುಲಾಸೆ ಸಮಿತಿ ಇದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ” ಎಂದರು.

ಇದನ್ನು ಆಲಿಸಿದ ಪೀಠವು ಗೃಹ ಇಲಾಖೆ, ಪೊಲೀಸ್‌ ಮಹಾನಿರ್ದೇಶಕ, ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ಪಶ್ಚಿಮ ವಿಭಾಗದ ಪೊಲೀಸ್‌ ಮಹಾನಿರ್ದೇಶಕರು, ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿ, ಸಿಬಿಐ ದೆಹಲಿ ಮತ್ತು ಚೆನ್ನೈ ವಿಭಾಗದ ವಿಶೇಷ ತನಿಖಾ ದಳಕ್ಕೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ 2012ರ ಅಕ್ಟೋಬರ್‌ 9ರಂದು ನಾಪತ್ತೆಯಾಗಿದ್ದರು. ಮರು ದಿನ ಮೃತ ವಿದ್ಯಾರ್ಥಿನಿಯ ದೇಹವು ಮಣ್ಣಸಂಕ ಬಳಿ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಬೆಳ್ತಂಗಡಿ ಠಾಣೆಯಲ್ಲಿ ಮೊದಲಿಗೆ ಆಕೆಯ ತಂದೆ ಚಂದ್ರಪ್ಪ ಗೌಡ ಅವರು ತನ್ನ ಎರಡನೇ ಪುತ್ರಿ ಸೌಜನ್ಯ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಆನಂತರ ಅದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗಿತ್ತು.

2013ರಲ್ಲಿ ಪ್ರಕರಣವು ಸಿಬಿಐಗೆ ವರ್ಗಾವಣೆಗೊಂಡಿದ್ದು, 2015ರಲ್ಲಿ ಪ್ರಕರಣವು ಮಂಗಳೂರಿನಿಂದ ಬೆಂಗಳೂರಿನ ಸಿಬಿಐ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.

ಇದರ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ ಬಿ ಸಂತೋಷ್‌ ಅವರು ಪ್ರಕರಣದಲ್ಲಿನ ಆರೋಪಿ ಸಂತೋಷ ರಾವ್‌ ಅವರನ್ನು ಅತ್ಯಾಚಾರ (ಐಪಿಸಿ ಸೆಕ್ಷನ್‌ 376) ಮತ್ತು ಕೊಲೆ (ಐಪಿಸಿ ಸೆಕ್ಷನ್‌ 302) ಪ್ರಕರಣದಲ್ಲಿ ನಿರ್ದೋಷಿ ಎಂದು ಘೋಷಿಸಿತ್ತು. ಅಲ್ಲದೇ, 11 ವರ್ಷಗಳಿಂದ ಜೈಲಿನಲ್ಲಿದ್ದ ಸಂತೋಷ್‌ ರಾವ್‌ನನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶಿಸಿತ್ತು.

ಅಲ್ಲದೇ, ಕಳಪೆ ಮತ್ತು ದೋಷಪೂರಿತ ತನಿಖೆ ನಡೆಸಿರುವ ಮತ್ತು ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ನಿರ್ದೇಶಿಸಿತಲ್ಲದೇ ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷಿಯು ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ವಿಚಾರಣಾಧೀನ ನ್ಯಾಯಾಲಯ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

Kusumavathi Vs Government of Karnataka.pdf
Preview