ನಟಿಯ ಅಪಹರಣ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹಾಗೂ ಪ್ರಾಸಿಕ್ಯೂಷನ್ ಸಲ್ಲಿಸಿರುವ ವರ್ಗಾವಣೆ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಕೇರಳ ಹೈಕೋರ್ಟ್ ನಡೆಸಿತು. ಈ ಪ್ರಕರಣದಲ್ಲಿ ಮಲಯಾಳಂ ಚಿತ್ರರಂಗದ ನಟ ದಿಲೀಪ್ ಸಹ ಆರೋಪಿಯಾಗಿದ್ದಾರೆ (ಎಕ್ಸ್ ವರ್ಸಸ್ ಕೇರಳ ರಾಜ್ಯ, ಕೇರಳ ರಾಜ್ಯ ವರ್ಸಸ್ ಸುನಿಲ್ ಎನ್ ಎಸ್ @ ಪಲ್ಸಾರ್ ಸುನಿ).
ನ್ಯಾಯಮೂರ್ತಿ ವಿ ಜಿ ಅರುಣ್ ನೇತೃತ್ವದ ಏಕಸದಸ್ಯ ಪೀಠವು ಎರಡೂ ಪ್ರಕರಣಗಳ ವಿಚಾರಣೆ ನಡೆಸಿತು. ಮುಕ್ತ ನ್ಯಾಯಾಲಯದಲ್ಲಿ ಸಂತ್ರಸ್ತೆಗೆ ಕಿರುಕುಳ ನೀಡಿರುವ ಸಂದರ್ಭಗಳನ್ನು ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ವಿವರಿಸಿದರು.
“ಇಡೀ ದೇಶದಲ್ಲಿ ಇಂಥ ಪ್ರಕ್ರಿಯೆಯನ್ನು ನಾವು ಕೇಳಿರಲಿಲ್ಲ. ಆರೋಪಿ ಸಲ್ಲಿಸಿರುವ ಅರ್ಜಿಯ ಪ್ರತಿಯನ್ನು ಪ್ರಾಸಿಕ್ಯೂಷನ್‌ಗೆ ಕಳುಹಿಸಲಾಗಿದೆ. ಈ ಸಂಬಂಧ ಆದೇಶ ಹೊರಡಿಸಿದ್ದು ಆನಂತರ ಅದನ್ನು (ಪ್ರತಿ) ಸಿಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ!” ಎಂದು ಸರ್ಕಾರಿ ಅಭಿಯೋಜಕ ಸುಮನ್ ಚಕ್ರವರ್ತಿ ಹೇಳಿದರು.
“ಇದು ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿರಲಿಲ್ಲವೇ?” ಎಂದು ಪೀಠ ಪ್ರಶ್ನಿಸಿತು. ಸಂಬಂಧಿತ ಎಲ್ಲರಿಗೂ ಕೇಳಿದ ದಾಖಲೆಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ ಎಂದು ಪ್ರಾಸಿಕ್ಯೂಟರ್ ಪ್ರತಿಕ್ರಿಯಿಸಿದರು.
ಪ್ರಾಸಿಕ್ಯೂಟರ್ ವಾದಕ್ಕೆ ಸಹಮತ ವ್ಯಕ್ತಪಡಿಸಿದ ಸಂತ್ರಸ್ತೆಯ ಪರ ಹಿರಿಯ ವಕೀಲ ಎಸ್ ಶ್ರೀಕುಮಾರ್ ಅವರು, ಒಂದು ಬಾರಿಯಂತೂ ನ್ಯಾಯಾಲಯದ ಕೊಠಡಿಯಲ್ಲಿ 20 ವಕೀಲರು ಇದ್ದರು. ಪ್ರವೇಶಕ್ಕೆ ನಿರ್ಬಂಧ ಇದ್ದರೂ, ಆಕೆಯ ನಡತೆಯ ಬಗ್ಗೆ ಗಮನಿಸುತ್ತಿದ್ದರು ಮತ್ತು ಆಕೆ ಮತ್ತೆಮತ್ತೆ ಹೇಳಿಕೆ ನೀಡುವಂತೆ ಮಾಡಿದರು (ವಿಚಾರಣೆಯು ಗೋಪ್ಯವಾಗಿತ್ತು). ಆದರೆ, “ಇದನ್ನು ತಡೆಯಲು ಏನೂ ಮಾಡಲಿಲ್ಲ” ಎಂದು ಹೇಳಿದರು.
ಕಿರುಕುಳ ಆರೋಪವನ್ನು ವಿಚಾರಣಾಧೀನ ನ್ಯಾಯಾಲಯದ ಗಮನಕ್ಕೆ ಏಕೆ ತರಲಿಲ್ಲ ಎಂದು ಪ್ರಾಸಿಕ್ಯೂಷನ್ ಅನ್ನು ನ್ಯಾಯಾಲಯ ಪ್ರಶ್ನಿಸಿತು. ಆಗಾಗ್ಗೆ ಮೌಖಿಕವಾಗಿ ನ್ಯಾಯಾಲಯದ ಗಮನಸೆಳೆದಿದ್ದಾಗಿ ವಕೀಲರು ಪ್ರತಿಕ್ರಿಯಿಸಿದರು. ವಿಚಾರಣೆ ಶೀಘ್ರವಾಗಿ ಅಂತ್ಯವಾಗಲಿ ಎಂಬ ದೃಷ್ಟಿಯಿಂದ ವರ್ಗಾವಣೆ ಅರ್ಜಿ ಸಲ್ಲಿಸದೆ ಹಿಂಜರಿದಿದ್ದಾಗಿ ಅವರು ಹೇಳಿದರು. ಕಿರುಕುಳ ಆರೋಪವನ್ನು ವಿಚಾರಣಾಧೀನ ನ್ಯಾಯಾಲಯದ ಗಮನಕ್ಕೆ ತಂದರೂ ಏನೂ ಮಾಡಲಿಲ್ಲ. ಇದೊಂದು ಅಸಹಜ ಪ್ರಕರಣವಾಗಿದ್ದು, ವಿಚಾರಣಾ ಪ್ರಕ್ರಿಯೆಯ ಬಗ್ಗೆ ಪ್ರಾಸಿಕ್ಯೂಷನ್ ಸಹ ಪೂರ್ವಾಗ್ರಹದ ಆರೋಪ ಮಾಡಿದೆ! ಎಂದು ವಕೀಲರು ಹೇಳಿದರು.
ಅಪರಾಧ ದಂಡ ಸಂಹಿತೆಯ ಸೆಕ್ಷನ್ 407(3)ರ ಅನ್ವಯ (ಪ್ರಕರಣಗಳ ವರ್ಗಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಇರುವ ಅಧಿಕಾರ) ವರ್ಗಾವಣೆ ಮನವಿಯ ಜೊತೆಗೆ ಅಫಿಡವಿಟ್ ಸಲ್ಲಿಸಲಾಗಿದೆಯೇ ಎಂದು ಸಂತ್ರಸ್ತೆಯ ಪರ ವಕೀಲರನ್ನು ನ್ಯಾ. ಅರುಣ್ ಅವರು ಪ್ರಶ್ನಿಸಿದರು. ಪ್ರಕರಣದ ವಿಚಾರಣೆಯು ನವೆಂಬರ್ 2ಕ್ಕೆ ಬರುವ ಸಾಧ್ಯತೆ ಇದೆ.