ಮಲಯಾಳಂ ಚಿತ್ರನಟ ದಿಲೀಪ್ ಹಾಗೂ ಇತರರ ವಿರುದ್ಧದ ಹಲ್ಲೆ ಮತ್ತು ಅಪಹರಣ ಪ್ರಕರಣದ ವಿಚಾರಣೆ ತಡೆಹಿಡಿಯುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಯನ್ನು ಎರ್ನಾಕುಲಂ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯ ಶುಕ್ರವಾರ ತಳ್ಳಿಹಾಕಿದೆ.
ವಿಚಾರಣೆ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ವಿರುದ್ಧ ನ್ಯಾಯಾಧೀಶರು ಮಾಡಿದ ಪಕ್ಷಪಾತ, ಪದೇ ಪದೇ ಪ್ರಕರಣ ಮುಂದೂಡಿಕೆ ಮತ್ತು ಅವಹೇಳನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ವಿಚಾರಣೆ ನಿಲ್ಲಿಸಬೇಕೆಂದು ಪ್ರಾಸಿಕ್ಯೂಷನ್ ಕೋರಿತ್ತು. ಪ್ರಕರಣದ ವರ್ಗಾವಣೆ ಕೋರಿ ಅರ್ಜಿಯನ್ನು ತಿರಸ್ಕರಿಸಿದಾಗಿನಿಂದ ಎಸ್‌ಪಿಪಿ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗಿಲ್ಲ ಎಂದು ನ್ಯಾಯಾಲಯದ ಜಾಲತಾಣ ತಿಳಿಸಿದೆ. ನ್ಯಾಯಾಲಯ ಆದೇಶ ನೀಡುವ ದಿನ ಕೂಡ ಅವರು ಗೈರುಹಾಜರಾಗಿದ್ದರು.
2021ರ ಫೆಬ್ರವರಿ 2ಕ್ಕೂ ಮೊದಲು ಪ್ರಕರಣದ ತನಿಖೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನ ಉಲ್ಲೇಖಿಸಿರುವ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಧೀಶರು ನವೆಂಬರ್ 3 ರೊಳಗೆ ವಿಚಾರಣೆ ಪುನರಾರಂಭಿಸಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ತನಿಖಾಧಿಕಾರಿಗೆ ಸೂಚಿಸಿದರು. ಅದರಂತೆ ಸಾಕ್ಷ್ಯ ವಿಚಾರಣೆ ಮತ್ತು ಹೆಚ್ಚುವರಿ ಸಾಕ್ಷ್ಯ ಸಂಗ್ರಹದ ಹಂತದಲ್ಲಿರುವ ಪ್ರಕರಣ ನವೆಂಬರ್ 3ರಂದು ಆರಂಭವಾಗಲಿದೆ.
ನಟ ದಿಲೀಪ್ ಅಣತಿಯ ಮೇರೆಗೆ ಆರು ಜನರು ನಟಿಯೊಬ್ಬರನ್ನು ಕಾರಿನಲ್ಲಿ ಎಳೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿ ಛಾಯಾಚಿತ್ರಗಳನ್ನು ತೆಗೆದಿದ್ದರು ಎಂದು ಆರೋಪಿಸಲಾಗಿತ್ತು. ದಿಲೀಪ್ ತನ್ನ ಹೆಂಡತಿಯಿಂದ ದೂರವಾಗಲು ನಟಿ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಲೈಂಗಿಕ ದೌರ್ಜನ್ಯದ ವೀಡಿಯೊ ಇರುವ ಮೆಮೊರಿ ಕಾರ್ಡಿನ ಪ್ರತಿ ಕೋರಿ ನಟ ದಿಲೀಪ್ ಸುಪ್ರೀಂಕೋರ್ಟ್ ಮೊರೆ ಕೂಡ ಹೋಗಿದ್ದರು.