Celina Jaitly  facebook
ಸುದ್ದಿಗಳು

ಕೌಟುಂಬಿಕ ದೌರ್ಜನ್ಯ: ಪತಿ ವಿರುದ್ಧ ಪ್ರಕರಣ ದಾಖಲಿಸಿದ ನಟಿ ಸೆಲಿನಾ ಜೇಟ್ಲಿ; ₹50 ಕೋಟಿ ಪರಿಹಾರಕ್ಕೆ ಮನವಿ

ಸೆಲಿನಾ ಮತ್ತು ಆಸ್ಟ್ರಿಯನ್ ಪ್ರಜೆ ಪೀಟರ್ ಹಾಗ್ 2011ರಲ್ಲಿ ವಿವಾಹವಾಗಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ.

Bar & Bench

ತಮ್ಮ ಪತಿ ಪೀಟರ್ ಹಾಗ್ ವಿರುದ್ಧ ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿರುವ ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ₹50 ಕೋಟಿ ಪರಿಹಾರ ನೀಡುವಂತೆ ಕೋರಿ ಮುಂಬೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಹಾಗ್ ತಮ್ಮ ಮೇಲೆ ನಿರಂತರವಾಗಿ ಕ್ರೌರ್ಯ, ಶೋಷಣೆ ಮತ್ತು ದೈಹಿಕ ಹಿಂಸೆ ಎಸಗಿದ್ದರು. ತಮಗಾದ ಘಾಸಿ, ಆದಾಯ ಹಾಗೂ ಆಸ್ತಿ ನಷ್ಟಕ್ಕೆ ಪತಿ ಪರಿಹಾರ ನೀಡಬೇಕು ಎಂದು ಅವರು ಕೋರಿದ್ದಾರೆ.

₹50 ಕೋಟಿ ಪರಿಹಾರದ ಜೊತೆಗೆ, ಹಾಗ್  ಮಾಸಿಕ ₹10 ಲಕ್ಷ ಜೀವನಾಂಶ ಪಾವತಿಸುವಂತೆ ನಿರ್ದೇಶಿಸಬೇಕು. ಹಂಚಿಕೆಯಾದ ಆಸ್ತಿಯನ್ನು ಹಾಗ್‌ ಬೇರೆಯವರಿಗೆ ವರ್ಗಾಯಿಸದಂತೆ ತಡೆ ನೀಡಬೇಕು. ತಮ್ಮ ಆಭರಣ ಮತ್ತಿತರ ಆಸ್ತಿಯನ್ನು ಮರಳಿಸಬೇಕು. ಹಂಚಿಕೆಯಾಗಿರುವ ಮನೆಯನ್ನು ಹಾಗ್‌ ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದು ಸೆಲಿನಾ ವಿನಂತಿಸಿದ್ದಾರೆ.

ನವೆಂಬರ್ 21 ರಂದು ಪ್ರಕರಣದ ವಿಚಾರಣೆ ನಡೆಸಿದ ಅಂಧೇರಿಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹಾಗ್‌ ಅವರಿಗೆ ನೋಟಿಸ್‌ ನೀಡಲು ಮುಂದಾಗಿದ್ದು ಮುಂದಿನ ವಿಚಾರಣೆ ಡಿಸೆಂಬರ್ 12 ರಂದು ನಡೆಯಲಿದೆ.

ಸೆಲಿನಾ ಮತ್ತು ಆಸ್ಟ್ರಿಯನ್ ಪ್ರಜೆ ಪೀಟರ್ ಹಾಗ್ 2011ರಲ್ಲಿ ವಿವಾಹವಾಗಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ. ಮದುವೆ ಬಳಿಕ ತಾನು ಉದ್ಯೋಗದಲ್ಲಿ ತೊಡಗದಂತೆ ಸೂಚಿಸಿ ತನ್ನ ಆರ್ಥಿಕ ಸ್ವಾತಂತ್ರ್ಯ ಮತ್ತು ಘನತೆಯನ್ನು ಹಾಗ್‌ ಕಸಿದುಕೊಂಡಿದ್ದಾರೆ ಎಂದು ಸೆಲಿನಾ ಆರೋಪಿಸಿದ್ದಾರೆ.

ತನ್ನ ನವಜಾತ ಶಿಶು ಹಾಗೂ ಪೋಷಕರು ಸಾವನ್ನಪ್ಪಿದ ಬಳಿಕ ಖಿನ್ನಳಾಗಿದ್ದಾಗ ಹಾಗ್‌ ಮುಂಬೈನ ಮನೆಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಒತ್ತಾಯಿಸಿ ಲಾಭ ಮಾಡಿಕೊಂಡಿದ್ದಾರೆ ಎಂದು ಸೆಲಿನಾ ಹೇಳಿದ್ದಾರೆ. ಸೆಲಿನಾ ಅವರ ಪರವಾಗಿ ಕರಂಜಾವಾಲಾ ಅಂಡ್ ಕಂಪನಿಯ ಹಿರಿಯ ಪಾಲುದಾರ ಸಂದೀಪ್ ಕಪೂರ್ ಮತ್ತವರ ತಂಡ ವಾದ ಮಂಡಿಸಿತು.