

ತಮಗೆ ಹಾಗೂ ತಮ್ಮ ಮಗಳಿಗೆ ಮಾಸಿಕ ₹10 ಲಕ್ಷ ಮಧ್ಯಂತರ ಜೀವನಾಂಶ ನೀಡುವಂತೆ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಆದೇಶಿಸುವಂತೆ ಶಮಿ ಅವರ ಪರಿತ್ಯಕ್ತ ಪತ್ನಿ ಹಸೀನ್ ಜಹಾನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಶಮಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ತಿಂಗಳಿಗೆ ₹4 ಲಕ್ಷ ಮಧ್ಯಂತರ ಜೀವನಾಂಶ ನೀಡುವಂತೆ ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಶಮಿ ಪತ್ನಿ ಪ್ರಶ್ನಿಸಿದ್ದಾರೆ . ಶಮಿ ವಿರುದ್ಧದ ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇತ್ಯರ್ಥವಾಗುವವರೆಗೆ ಪತ್ನಿಗೆ ₹1,50,000 ಮತ್ತು ಮಗಳಿಗೆ ₹2,50,000 ಪಾವತಿಸುವಂತೆ ಜುಲೈನಲ್ಲಿ ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ ಈ ಮೊತ್ತವನ್ನು ₹10 ಲಕ್ಷಕ್ಕೆ ಹೆಚ್ಚಿಸುವಂತೆ ಅವರು ಸುಪ್ರೀಂ ಕೋರ್ಟನ್ನು ಕೇಳಿಕೊಂಡಿದ್ದಾರೆ.
ವಾದದ ಒಂದು ಹಂತದಲ್ಲಿ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಹೈಕೋರ್ಟ್ ಆದೇಶಿಸಿದ ₹4 ಲಕ್ಷ ಅವರಿಗೆ ಸಾಕಾಗುವುದಿಲ್ಲವೇ ಎಂದು ಪ್ರಶ್ನಿಸಿತು.
ಹಿರಿಯ ವಕೀಲೆ ಶೋಭಾ ಗುಪ್ತಾ ಮತ್ತು ವಕೀಲರಾದ ದೀಪಕ್ ಪ್ರಕಾಶ್, ಶ್ರೀರಾಮ್ ಪರಕ್ಕತ್ ಮತ್ತು ದಿವ್ಯಾಂಗ ಮಲ್ಲಿಕ್ ಅವರು ಪತ್ನಿ ಪರವಾಗಿ ವಾದ ಮಂಡಿಸಿದರು.
ವರದಕ್ಷಿಣೆ ಬೇಡಿಕೆ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಹಸೀನ್ ಜಹಾನ್ ಆರೋಪ ಮಾಡಿದ್ದರು. ಇದು ಆಕೆಗೆ ಎರಡನೇ ಮದುವೆಯಾಗಿತ್ತು. ಮೊದಲ ಮದುವೆಯಿಂದ ಅವರು ಇಬ್ಬರು ಹೆಣ್ಣುಮಕ್ಕಳನ್ನು ಪಡೆದಿದ್ದರು. ಹಸೀನ್ ಜಹಾನ್ ಅವರಿಗೆ ಮಾಸಿಕ ₹1.3 ಲಕ್ಷ ಜೀವನಾಂಶ ಪಾವತಿಸುವಂತೆ ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಇದನ್ನು ₹4 ಲಕ್ಷಕ್ಕೆ ಹೆಚ್ಚಿಸಿ ಹೈಕೋರ್ಟ್ ಕಳೆದ ಜುಲೈನಲ್ಲಿ ತೀರ್ಪಿತ್ತಿತ್ತು.