Darshan and Karnataka HC 
ಸುದ್ದಿಗಳು

ನಟ ದರ್ಶನ್‌ ಬಿ ಪಿ ಏರಿಳಿತದಿಂದಾಗಿ ಶಸ್ತ್ರಚಿಕಿತ್ಸೆ ನಿರ್ಧಾರವಾಗಿಲ್ಲ: ಹೈಕೋರ್ಟ್‌ಗೆ ನಾಗೇಶ್‌ರಿಂದ ವಿವರಣೆ

"ರೇಣುಕಾಸ್ವಾಮಿ ಕೊಲೆ ಮಾಡುವ ಉದ್ದೇಶ ದರ್ಶನ್‌ಗೆ ಇದ್ದರೆ ನೀರು ಕೊಡಿ, ಊಟ ತಂದು ಕೊಡಿ, ಆತನ ಚಿತ್ರ ಸೆರೆ ಹಿಡಿಯಿರಿ, ವಿಡಿಯೋ ಮಾಡಿ, ಆತನನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಿದ್ದರೆ?" ಎಂದು ಪ್ರಶ್ನಿಸಿದ ನಾಗೇಶ್‌.

Bar & Bench

“ಬೆನ್ನುಹುರಿ ಊತದ ಹಿನ್ನೆಲೆಯಲ್ಲಿ ವೈದ್ಯಕೀಯ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್‌ ಅವರ ರಕ್ತದೊತ್ತಡದಲ್ಲಿ ಏರಿಳಿತವಾಗುತ್ತಿರುವುದರಿಂದ ಶಸ್ತ್ರಚಿಕಿತ್ಸೆಯ ಬಗ್ಗೆ ವೈದ್ಯರು ನಿರ್ಧರಿಸಿಲ್ಲ” ಎಂದು ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ತಿಳಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು.

ದರ್ಶನ್‌ಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ಇಂದು ವಾದ ಮುಂದುವರಿಸಿದ ದರ್ಶನ್‌ ಪ್ರತಿನಿಧಿಸಿರುವ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರನ್ನು ಕುರಿತು ಪೀಠವು “ದರ್ಶನ್‌ಗೆ ಶಸ್ತ್ರಚಿಕಿತ್ಸೆ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ನೀಡಿರುವ ಸರ್ಟಿಫಿಕೇಟ್‌ನಲ್ಲಿ ಇದೆಯಲ್ಲಾ” ಎಂದು ಪ್ರಶ್ನಿಸಿತು.

ಇದನ್ನು ನಿರಾಕರಿಸಿದ ನಾಗೇಶ್‌ ಅವರು “ದರ್ಶನ್‌ಗೆ ಎಂಆರ್‌ಐ ಮಾಡಿಸಲಾಗಿದೆ. ದರ್ಶನ್‌ ಅವರ ರಕ್ತದೊತ್ತಡದಲ್ಲಿ ಏರಿಳಿತವಾಗುತ್ತಿರುವುದರಿಂದ ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಲ್ಲ. ಯಾವಾಗ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬುದನ್ನು ವೈದ್ಯರು ನಿರ್ಧರಿಸಬೇಕಿದೆ” ಎಂದು ಸಮರ್ಥನೆ ನೀಡಿದರು.

ಇದಕ್ಕೂ ಮುನ್ನ, “ದರ್ಶನ್‌ ಅವರಿಗೆ ರೇಣುಕಾಸ್ವಾಮಿ ಕೊಲೆ ಮಾಡುವ ಉದ್ದೇಶವಿದ್ದರೆ ನೀರು ಕೊಡಿ, ಊಟ ತಂದು ಕೊಡಿ, ಆತನ ಚಿತ್ರ ಸೆರೆ ಹಿಡಿಯಿರಿ, ವಿಡಿಯೋ ಮಾಡಿ, ಆತನನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಬಿಡಿ ಎಂದು ಹೇಳುತ್ತಿದ್ದರೆ? ಇದು ದರ್ಶನ್‌ ನಡತೆಯಾಗಿದ್ದು, ದಾಖಲೆಯ ರೂಪದಲ್ಲಿ ಸಾಕ್ಷ್ಯವಿದೆ” ಎಂದು ಪ್ರತಿಪಾದಿಸಿದರು.

“ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ತಡವಾಗಿ ದಾಖಲಿಸಲಾಗಿದೆ. ಅಲ್ಲದೇ, ಅವರ ಹೇಳಿಕೆಗಳಲ್ಲಿ ವಿರೋಧಭಾಸವಿದೆ” ಎಂಬುದನ್ನು ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆಗಳನ್ನು ಉಲ್ಲೇಖಿಸಿ, ವಿವರಿಸಿ ನಾಗೇಶ್‌ ಅವರು ವಾದ ಪೂರ್ಣಗೊಳಿಸಿದರು.

ಇನ್ನು, 11ನೇ ಆರೋಪಿಯಾಗಿರುವ ದರ್ಶನ್‌ ವ್ಯವಸ್ಥಾಪಕ ಆರ್‌ ನಾಗರಾಜು ಪರವಾಗಿ ವಾದ ಆರಂಭಿಸಿರುವ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಯಾವ ಕಾರಣಕ್ಕಾಗಿ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ವಿಚಾರವನ್ನು ರಿಮ್ಯಾಂಡ್‌ ಅರ್ಜಿಯಲ್ಲಿ ತನಿಖಾಧಿಕಾರಿಗಳು ಉಲ್ಲೇಖಿಸಿಲ್ಲ. ಈ ವಿಚಾರವನ್ನು ವಿಚಾರಣಾಧೀನ ನ್ಯಾಯಾಲಯವು ಪರಿಗಣಿಸಿಲ್ಲ” ಎಂದು ಆಕ್ಷೇಪಿಸಿದರು. ಅಂತಿಮವಾಗಿ ಪೀಠವು ದಿನದ ಕಲಾಪ ಮುಗಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನವೆಂಬರ್‌ 29ರ ಮಧ್ಯಾಹ್ನಕ್ಕೆ ಮುಂದೂಡಿತು.