ಮಹಿಳೆಯರನ್ನು ಗೌರವಿಸದ ರೇಣುಕಾಸ್ವಾಮಿಯನ್ನು ರಾಷ್ಟ್ರೀಯ ನಾಯಕನಂತೆ ಬಿಂಬಿಸಲಾಗುತ್ತಿದೆ: ಹಿರಿಯ ವಕೀಲ ನಾಗೇಶ್‌ ಆಕ್ಷೇಪ

ದರ್ಶನ್‌ ಫೋಟೊಗಳನ್ನು ಆರೋಪ ಪಟ್ಟಿಯಲ್ಲಿ ಕಲರ್‌ ಫೋಟೊ ಮಾಡಿ ಹಾಕುವ ಬದಲು ರೇಣುಕಾಸ್ವಾಮಿ ಕಳುಹಿಸಿರುವ ಚಿತ್ರ/ಸಂದೇಶಗಳನ್ನು ಕಲರ್‌ ಫೋಟೊ ಮಾಡಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು ಎಂದು ಪ್ರಾಸಿಕ್ಯೂಷನ್‌ ವಿರುದ್ಧ ಕಿಡಿಕಾರಿದ ಹಿರಿಯ ವಕೀಲರು.
Darshan and Karnataka HC
Darshan and Karnataka HC
Published on

“ಚಿತ್ರದುರ್ಗದ ರೇಣುಕಾಸ್ವಾಮಿಯು ನಟ ದರ್ಶನ್‌ ಗೆಳತಿ ಪವಿತ್ರಾಗೌಡರನ್ನು ಮಂಚಕ್ಕೆ ಕರೆದಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸದ, ಸರಿಯಾದ ನಡತೆ ಹೊಂದಿರದ, ಕಾನೂನಿಗೆ ಎಳ್ಳಷ್ಟೂ ಗೌರವ ನೀಡದ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ರಾಷ್ಟ್ರೀಯ ನಾಯಕ ಎಂದು ಬಿಂಬಿಸಲಾಗುತ್ತಿದೆ. ಬಣ್ಣದ ಬದುಕಿನಲ್ಲಿ ನಾಯಕನಾಗಿದ್ದರೂ ದರ್ಶನ್‌ರನ್ನು ವಿಲನ್‌ ರೀತಿಯಲ್ಲಿ ಕಾಣಲಾಗುತ್ತಿದೆ” ಎಂದು ಹಿರಿಯ ವಕೀಲ ಸಿ ವಿ ನಾಗೇಶ್‌ ಆಕ್ಷೇಪಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು.

Justice S Vishwajith Shetty
Justice S Vishwajith Shetty

ಸುಮಾರು ಎರಡೂವರೆ ತಾಸು ವಾದ ಮಂಡಿಸಿದ ಹಿರಿಯ ವಕೀಲರಾದ ನಾಗೇಶ್‌ ಅವರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ತಂದು ಕೊಲೆ ಮಾಡಲಾಗಿಲ್ಲ ಎಂದು ಪ್ರಬಲವಾಗಿ ಹೈಕೋರ್ಟ್‌ನಲ್ಲಿ ವಾದಿಸಿದರು. ಕಲಾಪ ಮುಗಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್‌ 28ಕ್ಕೆ ಮುಂದೂಡಿದೆ. ನಾಗೇಶ್‌ ಅವರ ವಾದಾಂಶ ಇಂತಿದೆ.

Also Read
ದರ್ಶನ್‌ ವೈದ್ಯಕೀಯ ವರದಿ ಪಡೆಯಲು ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ
  • ನಮ್ಮ ಸಮಾಜದಲ್ಲಿ ಮಹಿಳೆಯರನ್ನು ದೇವಿಯರಾದ ಸರಸ್ವತಿ, ಲಕ್ಷ್ಮಿ, ಅನ್ನಪೂರ್ಣೇಶ್ವರಿ ಎಂದು ಕರೆಯುತ್ತೇವೆ. ಆದರೆ, ಮಹಿಳೆಯರ ಘನತೆಗೆ ಧಕ್ಕೆ ತರುವ ಕೆಲಸವನ್ನು ಕೊಲೆಯಾಗಿರುವ ರೇಣುಕಾಸ್ವಾಮಿ ಮಾಡಿದ್ದಾರೆ.

  • ರೇಣುಕಾಸ್ವಾಮಿಯ ನಡತೆ, ಆತನ ವ್ಯಕ್ತಿತ್ವವನ್ನು ನೋಡದೇ ಆತನನ್ನು ರಾಷ್ಟ್ರೀಯ ನಾಯಕ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಗೌತಮ್‌ ಹೆಸರಿನಲ್ಲಿ ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂನಲ್ಲಿ ಕಳುಹಿಸಿರುವ ಸಂದೇಶಗಳನ್ನು ನೋಡಿದರೆ ಆತ ಏನು ಎಂದು ಅರ್ಥವಾಗುತ್ತದೆ.

  • ದರ್ಶನ್‌ ಅವರ ಫೋಟೊಗಳನ್ನು ಆರೋಪ ಪಟ್ಟಿಯಲ್ಲಿ ಕಲರ್‌ ಫೋಟೊ ಮಾಡಿ ಹಾಕುವ ಬದಲು ರೇಣುಕಾಸ್ವಾಮಿ ಕಳುಹಿಸಿರುವ ಚಿತ್ರ/ಸಂದೇಶಗಳನ್ನು ಕಲರ್‌ ಫೋಟೊ ಮಾಡಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು.

  • ಪ್ರಾಸಿಕ್ಯೂಷನ್‌ ಪ್ರಕಾರ ಜೂನ್‌ 8ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತಂದು ಮಧ್ಯಾಹ್ನ 1 ಗಂಟೆಯಿಂದ 6 ಗಂಟೆ ನಡುವೆ ಪಟ್ಟಣಗೆರೆಯ ಜಯಣ್ಣ ಷೆಡ್‌ನಲ್ಲಿ ಅಂದೇ ಕೊಲೆ ಮಾಡಲಾಗಿದೆ. ರೇಣುಕಾಸ್ವಾಮಿಯ ಮೃತದೇಹವು ಅಪಾರ್ಟ್‌ಮೆಂಟೊಂದರ ಬಳಿ ಜೂನ್‌ 9ರಂದು ಪತ್ತೆಯಾಗಿದೆ. ಸೆಕ್ಯೂರಿಟಿ ಗಾರ್ಡ್‌ ನೀಡಿದ ದೂರನ್ನು ಆಧರಿಸಿ, ಎಫ್‌ಐಆರ್‌ ದಾಖಲಿಸಿದೆ.

  • ಐಪಿಸಿ ಸೆಕ್ಷನ್‌ 364 ಆರೋಪವು ಅಪಹರಣಕ್ಕೆ ಸಂಬಂಧಿಸಿದ್ದಾಗಿದೆ. ರೇಣುಕಾಸ್ವಾಮಿ ಅಪ್ರಾಪ್ತನಲ್ಲ. ಅಲ್ಲದೇ, ಆತನನ್ನು ದೇಶದಿಂದ ಹೊರಕ್ಕೆ ಕೊಂಡೊಯ್ಯಲಾಗಿದೆ ಎನ್ನುವುದು ಪ್ರಾಸಿಕ್ಯೂಷನ್‌ ವಾದವಲ್ಲ. ಹೀಗಾಗಿ, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಕೊಲೆ ಮಾಡಲಾಗಿಲ್ಲ.

  • ರೇಣುಕಾಸ್ವಾಮಿಯನ್ನು ಬಲಪ್ರಯೋಗದಿಂದ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲಾಗಿದೆ ಎಂಬುದು ಪ್ರಾಸಿಕ್ಯೂಷನ್‌ ವಾದವಲ್ಲ. ನನ್ನನ್ನು ಅಪಹರಿಸಲಾಗಿಲ್ಲ ಎಂದು ರೇಣುಕಾಸ್ವಾಮಿ ಸಾಯುವುದಕ್ಕೂ ಮುನ್ನ ತಂದೆ ಕಾಶಿನಾಥಯ್ಯ ಮತ್ತು ತಾಯಿಗೆ ಹೇಳಿದ್ದಾರೆ. ಗೆಳೆಯರ ಜೊತೆ ಊಟಕ್ಕೆ ಹೊರಹೋಗುತ್ತಿದ್ದೇನೆ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಬಲಪ್ರಯೋಗ ಅಥವಾ ವಂಚನೆಯಿಂದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿಲ್ಲ.

  • ಜೂನ್‌ 8ರಂದು ಚಿತ್ರದುರ್ಗದಿಂದ ಬರುವಾಗ ಬೆಂಗಳೂರು-ತುಮಕೂರಿನ ದುರ್ಗಾ ಬಾರ್‌ಗೆ ರೇಣುಕಾಸ್ವಾಮಿ ಸೇರಿ ನಾಲ್ವರು ಭೇಟಿ ನೀಡುತ್ತಾರೆ. ಈ ಬಾರ್‌ನ ಉಸ್ತುವಾರಿ ಮಂಜುನಾಥ್‌ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಇಲ್ಲಿ ಊಟ, ಲಿಕ್ಕರ್‌ ಸೇವನೆ ಮಾಡಿದ ಬಳಿಕ ರೇಣುಕಾಸ್ವಾಮಿಯೇ ದುರ್ಗಾ ಬಾರ್‌ನಲ್ಲಿ 640 ರೂಪಾಯಿ ಪಾವತಿಸಿದ್ದಾನೆ. ರೇಣುಕಾಸ್ವಾಮಿ ತಂದೆ, ತಾಯಿ ಮತ್ತು ಮಂಜುನಾಥ್‌ ಹೇಳಿಕೆಯನ್ನು ನೋಡಿದರೆ ಆತನನ್ನು ಕೊಲೆ ಮಾಡಲು ಅಪಹರಿಸಲಾಗಿಲ್ಲ ಎಂಬುದು ತಿಳಿಯುತ್ತದೆ. ಇಲ್ಲಿ ಕೊಲೆ ಮಾಡಿದವರು ಸೆಕ್ಷನ್‌ 302 ಅಡಿ ಶಿಕ್ಷೆಗೆ ಗುರಿಯಾಗುತ್ತಾರೆಯೇ ವಿನಾ ಸೆಕ್ಷನ್‌ 364 ಅಡಿ ಅಪಹರಣ ಅಪರಾಧಕ್ಕಲ್ಲ.

  • ಐಪಿಸಿ ಸೆಕ್ಷನ್‌ 201ರ ಅಡಿ ಕೊಲೆಗೆ ಸಂಬಂಧಿಸಿದ ಸಾಕ್ಷ್ಯವನ್ನು ಬಚ್ಚಿಟ್ಟಿದ್ದಾರೆ ಮತ್ತು ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೃತದೇಹವನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವುದನ್ನು ಸಾಕ್ಷ್ಯನಾಶ ಎನ್ನಲಾಗದು.

  • ಜೂನ್‌ 9ರಂದು ರೇಣುಕಾಸ್ವಾಮಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಜೂನ್‌ 10 ಮತ್ತು 11ರಂದು ಏನೂ ಮಾಡಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಯಾವಾಗ ರೇಣುಕಾಸ್ವಾಮಿ ಸತ್ತಿದ್ದಾರೆ ಎಂದು ಹೇಳಿಲ್ಲ. ಆದರೆ, ಸಾವಿಗೆ ಕಾರಣ ಏನು ಎಂದು ಹೇಳಿದ್ದಾರೆ.

  • ಕೊಲೆ ಮಾಡಲು ಅಪಹರಣ, ಸಾಕ್ಷ್ಯ ನಾಶ, ಹಲ್ಲೆ ಮತ್ತು ಕೊಲೆ ಆರೋಪ ಮಾಡಲಾಗಿದೆ. ಕೆಲವು ನೇರ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಈ ಆರೋಪ ಮಾಡಲಾಗಿದೆ.

  • ಐಪಿಸಿ ಸೆಕ್ಷನ್‌ಗಳಾದ 355, 201 ಜಾಮೀನುಸಹಿತ ಅಪರಾಧಗಳಾಗಿವೆ. ಐಪಿಸಿ ಸೆಕ್ಷನ್‌ 364 ಮತ್ತು 302 ಬಗ್ಗೆ ಮಾತ್ರ ವಾದಿಸಬೇಕಿದೆ. ಈ ಹಂತದಲ್ಲಿ ದರ್ಶನ್‌ ಆರೋಪಮುಕ್ತಿ ಅಥವಾ ಖುಲಾಸೆ ಕೋರುತ್ತಿಲ್ಲ. ಪ್ರಾಸಿಕ್ಯೂಷನ್‌ ಸಹ ಶಿಕ್ಷೆಗೆ ವಾದಿಸುತ್ತಿಲ್ಲ. ಲಭ್ಯವಿರುವ ಸಾಕ್ಷ್ಯವನ್ನು ಆಧರಿಸಿ ಯಾವ ಮಟ್ಟಕ್ಕೆ ಆರೋಪಿಯನ್ನು ಎಳೆದು ತರಬಹುದು ಮತ್ತು ಒಂದೊಮ್ಮೆ ಹಾಗಾದರೂ ಅವರು ಜಾಮೀನಿಗೆ ಅರ್ಹರೇ? ಅಲ್ಲವೇ? ಎಂಬುದು ನ್ಯಾಯಾಲಯ ಮುಂದಿರುವ ಪ್ರಶ್ನೆಯಾಗಿದೆ?

  • ಜೂನ್‌ 12ರಂದು ತನಿಖಾಧಿಕಾರಿಗಳು ಹಗ್ಗ, ಎರಡು ಅಡಿ ಉದ್ದದ ಲಾಟಿ, ಮರದ ಕೊಂಬೆಯನ್ನು ಕೊಲೆಗೆ ಬಳಸಿದ ಶಸ್ತ್ರಾಸ್ತ್ರ ಎಂದು ಜಪ್ತಿ ಮಾಡಿದ್ದಾರೆ. ಜೂನ್‌ 9, 10 ಮತ್ತು 11ರಂದು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿಲ್ಲ. ಆದರೆ, ಜೂನ್‌ 9ರಂದೇ ಪಟ್ಟಣಗೆರೆ ಷೆಡ್‌ ಅನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೂನ್‌ 10ರಂದು ಆರೋಪಿಗಳನ್ನು ಬಂಧಿಸಿ, ಸ್ವಹೇಳಿಕೆ ದಾಖಲಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯ ತನಿಖಾಧಿಕಾರಿಗೆ ಘಟನಾ ಸ್ಥಳದ ಬಗ್ಗೆ ಜೂನ್‌ 9ರಂದೇ ತಿಳಿದಿತ್ತು. ಅದಾಗ್ಯೂ, ಅವರನ್ನು ಪಂಚನಾಮೆ ಮಾಡದಂತೆ ಯಾರೂ ತಡೆದಿರಲಿಲ್ಲ. ತನಿಖಾಧಿಕಾರಿಯ ಈ ನಡೆ ಒಪ್ಪತಕ್ಕದ್ದಲ್ಲ.

  • ಜೂನ್‌ 9ರಂದು 14ನೇ ಆರೋಪಿಗೆ ಪಿಎಸ್‌ಐ ವಿನಯ್‌ ಅವರು ಘಟನಾ ಸ್ಥಳದ ಚಿತ್ರಗಳು ಮತ್ತು ವಿಡಿಯೊ ಕಳುಹಿಸುತ್ತಾರೆ. ಇವರನ್ನು ಸಾಕ್ಷಿಯಾಗಿ ಹೆಚ್ಚುವರಿ ಆರೋಪ ಪಟ್ಟಿ ಮತ್ತು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.

  • ದರ್ಶನ್‌ ಅವರಿಂದ 37.40 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದು, ಅದನ್ನು ಸಾಕ್ಷ್ಯ ನಾಶಕ್ಕೆ ಸಂಗ್ರಹಿಸಿದ್ದರು ಎಮದು ಕತೆ ಹೆಣೆಯಲಾಗಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಕೊಲೆ ಮಾಡಲಾಗುತ್ತದೆ ಎಂದು ಯಾರಿಗೂ ಮಾರ್ಚ್‌ನಲ್ಲಿ ತಿಳಿದಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಂದು ಯಾರಿಗೆ ಗೊತ್ತು? ಸುಳ್ಳು ಕತೆ ಹೆಣೆಯಲು ಒಂದು ಮಿತಿ ಇರಬೇಕು. ದರ್ಶನ್‌ರಿಂದ ಪಡೆದಿದ್ದ ಹಣವನ್ನು ಅವರ ಗೆಳೆಯ ಹಿಂದಿರುಗಿಸಿದ್ದರು ಅಷ್ಟೆ.

  • ಕರೆ ದಾಖಲೆ ಬಗ್ಗೆ ಹೇಳುವುದಾದರೆ ಒಟ್ಟು 17 ಮಂದಿಯಲ್ಲಿ ಐದು ಮಂದಿಗೆ ಜಾಮೀನಾಗಿದೆ. ಇದರಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದವನಿಗೂ ಜಾಮೀನಾಗಿದೆ. ದರ್ಶನ್‌ ಅವರು ತನ್ನ ಮ್ಯಾನೇಜರ್‌ ಆರ್‌ ನಾಗರಾಜು, ಗೆಳತಿ ಪವಿತ್ರಾ ಗೌಡ ಜೊತೆ ಮಾತನಾಡಿದ್ದಾರೆ. ಇದೇನು ಮೊದಲ ಬಾರಿಗೆ ಅವರು ಮ್ಯಾನೇಜರ್‌ ಮತ್ತು ಗೆಳತಿಗೆ ಕರೆ ಮಾಡಿಲ್ಲ.

  • ಜೂನ್‌ 8ರಂದು ದರ್ಶನ್‌ ಅವರು ಆರೋಪಿ ವಿನಯ್‌ ಮಾಲೀಕತ್ವದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ಗೆ ನಟ ಚಿಕ್ಕಣ್ಣ, ನವೀನ್‌, ಯಶಸ್‌ ಸೂರ್ಯ, ಪ್ರದೋಷ್‌ ಮತ್ತಿತರರನ್ನು ಆಹ್ವಾನಿಸಿದ್ದರು. ಇಲ್ಲಿ ಎಲ್ಲರೂ ಸೇರಿ ಸಿನಿಮಾ ಬಗ್ಗೆ ಮಾತನಾಡಿ ಊಟ ಮಾಡಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ನಟ ಚಿಕ್ಕಣ್ಣ ಮತ್ತು ನವೀನ್‌ ಅವರು ಪವನ್‌ ಎಂಬಾತನ ಜೊತೆ ದರ್ಶನ್‌ ಮಾತಾಡಿದ್ದರು. ಆದರೆ, ಏನು ಮಾತಾಡಿದ್ದಾರೆ ಎಂದು ಗೊತ್ತಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಇಲ್ಲಿ ಯಾವ ಪಿತೂರಿ ನಡೆದಿದೆ?  

  • ಪ್ರಕರಣದಲ್ಲಿ ನರೇಂದ್ರ ಸಿಂಗ್‌ (ರೇಣುಕಾಸ್ವಾಮಿ ಮೃತದೇಹ ದೊರೆತಿರುವ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌), ಮಲ್ಲಿಕಾರ್ಜುನ, ಕಿರಣ್‌ ಮತ್ತು ಪುನೀತ್‌ (ಪಟ್ಟಣಗೆರೆ ಷೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಡ್ರೈವರ್‌ಗಳು)‌, ವಿಜಯಕುಮಾರ್‌ (ಪಟ್ಟಣಗೆರೆ ಷೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಅಕೌಂಟೆಂಟ್‌), ಮಧುಸೂದನ್ (ಷೆಡ್‌ನಲ್ಲಿ ಬರುವ ವಾಹನಗಳ ಲೆಕ್ಕ ತೆಗೆದುಕೊಳ್ಳುವಾತ) ಅವರನ್ನು ಪ್ರತ್ಯಕ್ಷ ಸಾಕ್ಷಿಗಳು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ನಾಗೇಶ್‌ ವಾದಿಸಿದ್ದಾರೆ.

Kannada Bar & Bench
kannada.barandbench.com